ಉದಯಕುಮಾರ್
From Wikipedia
"ಕಲಾ ಕೇಸರಿ" ಎಂದು ಪ್ರಸಿದ್ಧರಾದ ಇವರು, ಅನೇಕ ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಾಯಕ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ರಾಜಕುಮಾರ್,ಕಲ್ಯಾಣ್ ಕುಮಾರ್ ಮತ್ತು ಉದಯಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು. ಕನ್ನಡ ಚಿತ್ರರಂಗದ ನಟ ವಿಶ್ವವಿಜೇತ ಇವರ ಮಗ.ಮಗಳು ರೇಣುಕಾ ಚಿತ್ರರಂಗ,ಕಿರುತೆರೆ ನಟಿ ಮತ್ತು ಮೊಮ್ಮಗಳು ಜನಪ್ರಿಯ ಕಿರುತೆರೆ ಕಲಾವಿದೆ ಹಂಸವಿಜೇತೆ.
ಉದಯಕುಮಾರ್ ಅವರ ನಿಜವಾದ ಹೆಸರು ಸೂರ್ಯನಾರಾಯಣ ಶಾಸ್ತ್ರಿ.( ೧೬.೦೩.೧೯೩೫ - ೨೬.೧೨.೧೯೮೫ )ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್‌ನಲ್ಲಿ ಶ್ಯಾನುಭೋಗರಾಗಿದ್ದರು.ವ್ಯಾಯಾಮ ಶಿಕ್ಷಕರಾಗಿದ್ದ ಇವರು,ಆಕಸ್ಮಿಕವಾಗಿ ಗುಬ್ಬಿ ರಂಗಭೂಮಿ ಸೇರಿದರು.ಅಲ್ಲಿಂದ ಭಾಗ್ಯೋದಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶವೂ ಆಯಿತು.ಈ ಚಿತ್ರದ ನಿರ್ಮಾಪಕರಾದ ಭಕ್ತವತ್ಸಲ ಮತ್ತು ಎ.ಸಿ.ನರಸಿಂಹಮೂರ್ತಿಯವರು ತಮ್ಮ ಉದಯ ಪ್ರೊಡಕ್ಷನ್ಸ್ ಲಾಂಛನಕ್ಕೆ ಹೊಂದುವಂತೆ ಇವರಿಗೆ ಉದಯಕುಮಾರ್ ಎಂದು ನಾಮಕರಣವನ್ನು ಮಾಡಿದರು.ರತ್ನಗಿರಿ ರಹಸ್ಯ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಇವರಿಗ ಹೆಸರು ತಂದಿತು. ಸೇಡಿಗೆ ಸೇಡು ಇವರ ನೂರನೆಯ ಚಿತ್ರ.ವರ್ಣಚಕ್ರ ಇವರ ಕೊನೆಯ ಚಿತ್ರ.ಇವರು ಒಟ್ಟು ೨೨೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಇವರು ಅಭಿನಯಿಸಿದ ಕೆಲವು ಚಿತ್ರಗಳು
- ಭಾಗ್ಯೋದಯ
- ರತ್ನಗಿರಿ ರಹಸ್ಯ
- ಚಂದವಳ್ಳಿ ತೋಟ
- ವಿಜಯನಗರದ ವೀರಪುತ್ರ
- ಶ್ರೀ ರಾಮಾಂಜನೇಯ ಯುದ್ಧ
- ಸರ್ವಜ್ಞ
- ಇದೇ ಮಹಾಸುದಿನ
- ಮಧುಮಾಲತಿ
- ಸತ್ಯ ಹರಿಶ್ಚಂದ್ರ
- ನಾರಿ ಮುನಿದರೆ ಮಾರಿ
- ಸೇಡಿಗೆ ಸೇಡು
- ಹೇಮಾವತಿ
- ಬಿಳಿ ಹೆಂಡ್ತಿ
- ಮರ್ಯಾದೆ ಮಹಲ್
- ನಂದಾ ದೀಪ
[ಬದಲಾಯಿಸಿ] ಇತರ ಭಾಷಾ ಚಿತ್ರಗಳು
ನೂರಾರು ತಮಿಳು,ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ.ನಾಯಕ,ಖಳನಾಯಕ,ಪೋಷಕನಟ.. ಹೀಗೆ ಎಲ್ಲಾ ಬಗೆಯ ವಿಶಿಷ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
[ಬದಲಾಯಿಸಿ] ಚಿತ್ರನಿರ್ಮಾಣ
೧೯೬೫ರಲ್ಲಿ ಇದೇ ಮಹಾಸುದಿನ ಎಂಬ ಚಿತ್ರ ನಿರ್ಮಿಸಿದರು.ಈ ಚಿತ್ರವನ್ನು ಬಿ.ಸಿ.ಶ್ರೀನಿವಾಸ್ ನಿರ್ದೇಶಿಸಿದರು.ಆದರೆ ಈ ಚಿತ್ರ ಬಾಕ್ಸಾಫೀಸಿನಲ್ಲಿ ಅಷ್ಟಾಗಿ ಓಡಲಿಲ್ಲವಾದ್ದರಿಂದ ಚಿತ್ರನಿರ್ಮಾಣ ಮುಂದುವರಿಸಲಿಲ್ಲ.
[ಬದಲಾಯಿಸಿ] ಪ್ರಶಸ್ತಿಗಳು
- ಹೇಮಾವತಿ ಚಿತ್ರದ ಪಾತ್ರಕ್ಕೆ ಅತ್ಯುತ್ತಮ ಪೋಷಕನಟ ಪ್ರಶಸ್ತಿ.
- ೧೯೮೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
[ಬದಲಾಯಿಸಿ] ಹವ್ಯಾಸಗಳು
ಸ್ವತಃ ಬರಹಗಾರರಾದ ಉದಯಕುಮಾರ್‌ರವರು ದ್ವಿಪದಿಗಳು,ನಾಟಕಗಳು ಹಾಗೂ ಚಿತ್ರಗೀತೆಗಳನ್ನು ರಚಿಸಿದ್ದಾರೆ.ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಆಸಕ್ತರಾಗಿದ್ದ ಇವರು,ಕಲಾನಿಕೇತನ ಎಂಬ ರಂಗ ತರಬೇತಿ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.ರಂಗತಂಡವನ್ನೂ ಕಟ್ಟಿದ್ದರು.