ದೇವುಡು ನರಸಿಂಹಶಾಸ್ತ್ರಿ
From Wikipedia
ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು.
ಪರಿವಿಡಿ |
[ಬದಲಾಯಿಸಿ] ಬಾಲ್ಯ ಮತ್ತು ಶಿಕ್ಷಣ
ದೇವುಡು ಅವರು ೧೯೮೬ ಡಿಸೆಂಬರ ೨೯ರಂದು ವೇದ ಶಾಸ್ತ್ರಪಾರಂಗತ ಕುಟುಂಬದಲ್ಲಿ ಜನಿಸಿದರು. ತಾಯಿ ಸುಬ್ಬಮ್ಮ; ತಂದೆ ಕೃಷ್ಣಶಾಸ್ತ್ರೀ. ದೇವುಡು ೫ ವರ್ಷದ ಬಾಲಕರಿದ್ದಾಗ ಇವರ ತಂದೆ ತೀರಿಕೊಂಡರು.
ತಮ್ಮ ೫ನೆಯ ವಯಸ್ಸಿಗಾಗಲೆ ಸಂಸ್ಕೃತದ ಅಮರಕೋಶ, ಶಬ್ದ ಮತ್ತು ರಘುವಂಶಗಳನ್ನು ಕಲಿತುಕೊಂಡ ದೇವುಡು ಅವರ ಪ್ರಾಥಮಿಕ, ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣವೆಲ್ಲ ಮೈಸೂರಿನಲ್ಲಿಯೆ ನಡೆಯಿತು. ೧೯೧೭ರಿಂದ ೧೯೨೨ರವರೆಗೆ ಇವರು ಮೈಸೂರಿನ ಮಹಾರಾಜಾ ಕಾಲೇಜು ಹಾಗು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಎಮ್.ಎ.ದಲ್ಲಿ ಸಂಸ್ಕೃತ ಮತ್ತು ದರ್ಶನಶಾಸ್ತ್ರವನ್ನು ಅಧ್ಯಯನದ ವಿಷಯವನ್ನಾಗಿ ಆರಿಸಿಕೊಂಡಿದ್ದರು.
[ಬದಲಾಯಿಸಿ] ಕೌಟಂಬಿಕ ಜೀವನ
೧೯೧೨ರಲ್ಲಿ ಅಂದರೆ ದೇವುಡು ೧೬ ವರ್ಷದವರಿದ್ದಾಗಲೆ ಅವರ ಮದುವೆಯಾಯಿತು;ಹೆಂಡತಿ ಗೌರಮ್ಮ. ಇವರಿಗೆ ಮೂವರು ಗಂಡುಮಕ್ಕಳು ಹಾಗು ಆರು ಜನ ಹೆಣ್ಣುಮಕ್ಕಳು. ಮೊದಲನೆಯ ಮಗ ಅಕಾಲಿಕವಾಗಿ ತರುಣ ವಯಸ್ಸಿನಲ್ಲಿಯೆ ತೀರಿಕೊಂಡರು.
[ಬದಲಾಯಿಸಿ] ವೃತ್ತಿ ಜೀವನ
೧೯೨೩-೧೯೨೪ ಈ ಅವಧಿಯಲ್ಲಿ ದೇವುಡುರವರು ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದರು. ೧೯೨೪ರಲ್ಲಿ ಕೆಲಕಾಲ ಶೃಂಗೇರಿಯ ಶಂಕರಾಚಾರ್ಯ ಮಠದಲ್ಲಿ ಪೇಶ್ಕಾರ್ ಎಂದು ಕಾರ್ಯ ನಿರ್ವಹಿಸಿದರು. ಆಬಳಿಕ ಬೆಂಗಳೂರಿಗೆ ಬಂದು ೧೯೨೪ರಿಂದ ೧೯೨೯ರವರೆಗೆ ಆರ್ಯವಿದ್ಯಾಶಾಲೆಗೆ ಮುಖ್ಯೋಪಾಧ್ಯಾಯರಾದರು. ಈ ಸಂಸ್ಥೆಯನ್ನು ಕಾರಣಾಂತರಗಳಿಂದ ಬಿಟ್ಟು ಗಾಂಧಿನಗರ ಪ್ರೌಢಶಾಲೆಯನ್ನು ಸ್ಥಾಪಿಸಿ ಐದು ವರ್ಷಗಳವರೆಗೆ ನಡೆಯಿಸಿದರು.
[ಬದಲಾಯಿಸಿ] ಪತ್ರಿಕೋದ್ಯಮ
೧೯೨೭ರಲ್ಲಿ ನವಜೀವನ ಪತ್ರಿಕಾ ಸಂಪಾದಕರಾಗಿ ಪತ್ರಿಕೋದ್ಯಮ ಪ್ರವೇಶಿಸಿದ ದೇವುಡು, ೧೯೩೬ ಹಾಗು ೧೯೩೮ರಲ್ಲಿ ರಂಗಭೂಮಿ ಪತ್ರಿಕೆಯ ಸಂಪಾದಕರಾಗಿದ್ದರು. ೧೯೩೬ರಿಂದ ೧೯೫೭ರವರೆಗೆ ೨೧ ವರ್ಷಗಳ ದೀರ್ಘ ಕಾಲ ನಮ್ಮ ಪುಸ್ತಕ ಎಂಬ ಸ್ವತಂತ್ರ ಮಕ್ಕಳ ಪತ್ರಿಕೆಯನ್ನು ನಡೆಯಿಸಿಕೊಂಡು ಬಂದರು. ಈ ನಡುವೆ ೧೯೩೫-೧೯೩೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆಯ ಸಂಪಾದನೆಯನ್ನೂ ಮಾಡಿದರು.
[ಬದಲಾಯಿಸಿ] ಪ್ರವೃತ್ತಿ
ನಾಟಕ ಹಾಗು ಸಾಹಿತ್ಯ ಇವು ದೇವುಡುರವರ ಇನ್ನೆರಡು ಹುಚ್ಚುಗಳು. ೧೯೨೧ರಲ್ಲಿಯೆ ಇವರು ಚಾಮುಂಡೇಶ್ವರಿ ಕಂಪನಿಯಲ್ಲಿ ನಟರಾಗಿ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ್ದರು. ೧೯೨೬ರಲ್ಲಿ ಅಮೆಚೂರ್ ಕಂಪನಿಯ ಸದಸ್ಯರಾಗಿದ್ದರು. ೧೯೨೮ರಲ್ಲಿ ಕರ್ನಾಟಕ ಫಿಲ್ಮ್ ಕಾರ್ಪೋರೇಶನ್ ಸ್ಥಾಪಿಸಿದರು. ೧೯೩೪ರಲ್ಲಿ ಭಕ್ತ ಧ್ರುವ ಚಲನಚಿತ್ರಕ್ಕೆ ಸಾಹಿತ್ಯರಚನೆ ಮಾಡಿದರು. ೧೯೩೬ರಲ್ಲಿ ಚಿರಂಜೀವಿ ಎನ್ನುವ ಚಲನಚಿತ್ರಕ್ಕೆ ಸಾಹಿತ್ಯರಚನೆ ಮಾಡಿದ್ದಲ್ಲದೆ, ಆ ಚಿತ್ರದಲ್ಲಿ ಮೃಕಂಡು ಋಷಿಯ ಪಾತ್ರ ವಹಿಸಿದ್ದರು.
[ಬದಲಾಯಿಸಿ] ಸಾಂಸ್ಕೃತಿಕ ಹಾಗು ಸಾಮಾಜಿಕ ಕಾರ್ಯ
ದೇವುಡು ೧೯೩೦ರಲ್ಲಿ ಮೈಸೂರು ಹಿಂದಿ ಪ್ರಚಾರಕ ಸಭೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ೧೯೩೭ರಲ್ಲಿ ಕನ್ನಡಸಾಹಿತ್ಯ ಸಮಾಜವನ್ನು ಸ್ಥಾಪಿಸಿದರು. ೧೯೩೯ರಿಂದ ೧೯೪೨ರವರೆಗೆ ಮೈಸೂರು ಸಂಸ್ಥಾನದಲ್ಲಿ ನಡೆದ ಅಕ್ಷರಪ್ರಚಾರ ಯೋಜನೆ ಹಾಗು ವಯಸ್ಕರ ಅಕ್ಷರಪ್ರಚಾರ ಯೋಜನೆಗಳಲ್ಲಿ ಭಾಗಿಯಾಗಿದ್ದರು. ೧೯೪೩-೧೯೪೫ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ನೇಮಕವಾಗಿದ್ದರು. ೧೯೪೬ರಲ್ಲಿ ಬೆಂಗಳೂರು ಸಿಟಿ ಕೋಆಪರೇಟಿವ್ ಬ್ಯಾಂಕಿನ ಡೈರೆಕ್ಟರ ಹಾಗು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿದ್ದರು. ೧೯೪೮ರಲ್ಲಿ ಬೆಂಗಳೂರು ಸಿಟಿ ಕಾರ್ಪೋರೇಶನ್ ಸದಸ್ಯರಾಗಿ ಚುನಾಯಿತರಾದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗಿಯಾದರು. ೧೯೫೦ರಲ್ಲಿ ಶಂಕರಪುರದಲ್ಲಿ ಗೀರ್ವಾಣವಿದ್ಯಾಪೀಠವನ್ನು ಸ್ಥಾಪಿಸಿದರು. ೧೯೫೬-೧೯೫೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.
[ಬದಲಾಯಿಸಿ] ಸಾಹಿತ್ಯ
ದೇವುಡು ಕನ್ನಡದ ದೊಡ್ಡ ಸಾಹಿತಿಗಳು. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಅವರು ಬರೆದಿದ್ದಾರೆ. ಅವರ ಸಾಹಿತ್ಯದಲ್ಲಿ ಕಾಣುವ ಕಲ್ಪನಾ ಪ್ರತಿಭೆ, ವ್ಯುತ್ಪತ್ತಿ, ಸಾಕ್ಷಾತ್ಕಾರ ಇವು ಅವರ ಹಿರಿಮೆಯನ್ನು ತೋರಿಸುತ್ತವೆ. ಅವರ ಪ್ರಥಮ ಕೃತಿ ಸಾಹಸವರ್ಮ ಎನ್ನುವ ಪತ್ತೇದಾರಿ ಕಾದಂಬರಿ. ಇದನ್ನು ಬರೆದಾಗ (೧೯೧೨) ಅವರಿಗೆ ೧೬ ವರ್ಷ. ೧೯೨೦ರಲ್ಲಿ ಪೂರ್ವಮೇಘಕ್ಕೆ ಅವರು ವಿಸ್ತೃತ ವ್ಯಾಖ್ಯಾನ ಬರೆದರು.
[ಬದಲಾಯಿಸಿ] ವ್ಯಕ್ತಿತ್ವ
ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಬರುವಾಗಲೆ ದೇವುಡು ರಾಮಾಯಣ, ಮಹಾಭಾರತ, ಭಾಗವತ, ಬ್ರಹ್ಮಾಂಡಪುರಾಣ ಮೊದಲಾದವುಗಳನ್ನು ಓದಿದ್ದರು. “ ಕೃಷ್ಣ ಕೊಳಲನ್ನೂದಿದಾಗ ಗಿಡ, ಮರಗಳೆಲ್ಲ ಚಿಗುರಿದರೆ, ಅವನ ಕೈಯಲ್ಲಿಯ ಕೊಳಲೇಕೆ ಚಿಗುರಲಿಲ್ಲ?” ಎನ್ನುವ ಪಾದ್ರಿಯೊಬ್ಬನ ಪ್ರಶ್ನೆಯನ್ನು ಮಹಿಳೆಯರು ಚರ್ಚಿಸುತ್ತಿದ್ದಾಗ, “ಚಿಗುರಿದರೆ ತನ್ನನ್ನೂ ಕೃಷ್ಣ ಎಲ್ಲಿ ಎಸೆದುಬಿಡುವನೊ ಎಂದು ಹೆದರಿ ಚಿಗುರಲಿಲ್ಲ” ಎನ್ನುವ ಸಮಾಧಾನ ನೀಡಿದ ನಿಶಿತಮತಿಯ ಬಾಲಕ ಈ ದೇವುಡು.
ಅದೇ ಸಮಯದಲ್ಲಿ ಎಲ್ಲ ತರಹದ ಆಟಗಳಲ್ಲಿ ಭಾಗವಹಿಸುತ್ತ ದೇಹದಾರ್ಢ್ಯಕ್ಕೂ ಗಮನಕೊಟ್ಟಿದ್ದರು.
ದೇವುಡು ಅವರ ಸೂಚನೆಯಂತೆ ಕೆಂಗಲ್ ಹನುಮಂತಯ್ಯನವರು ೧೯೫೩ರ ಸುಮಾರಿಗೆ ಕನ್ನಡ ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ತೆರೆದು, ನಿರ್ದೇಶಕರಾಗಲು ಕೇಳಿಕೊಂಡರು. ಆದರೆ ದೇವುಡು ಅದಕ್ಕೆ ಒಪ್ಪದೆ ಶ್ರೀ ಸಿ.ಕೆ.ವೆಂಕಟರಾಮಯ್ಯನವರನ್ನು ಆ ಕಾರ್ಯಕ್ಕೆ ಸೂಚಿಸಿದರು.
ಸಂಸ್ಕೃತಿಪ್ರಚಾರಕ್ಕಾಗಿ, ಭಗವದ್ಗೀತೆ ಸಂದೇಶ ಪ್ರಚಾರಕ್ಕಾಗಿ ತಮ್ಮ ಜೀವಿತಾವಧಿಯ ನಾಲ್ವತ್ತು ವರ್ಷಕ್ಕೂ ಮಿಕ್ಕಿ ದೇವುಡು ನೂರಾರು ಲೇಖನ ಬರೆದರು ಹಾಗು ಭಾಷಣಗಳನ್ನು ಮಾಡಿದರು. ೧೯೫೨ರಲ್ಲಿ ದೇವುಡುರವರು ಉಡುಪಿಯಲ್ಲಿ ಗೀತೆಯ ಬಗೆಗೆ ಉಪನ್ಯಾಸ ಪ್ರಾರಂಭಿಸುತ್ತಿದ್ದಾಗಲೆ ಇವರ ಹಿರಿಯ ಮಗ ರಾಮು ತೀರಿಕೊಂಡ ಸುದ್ದಿ ತಿಳಿಯಿತು. ಸ್ವಲ್ಪವೂ ಅಳುಕದ ದೇವುಡು ಭಾಷಣ ಮುಗಿಯಿಸಿದ ನಂತರವೇ ವೇದಿಕೆಯಿಂದ ನಿರ್ಗಮಿಸಿದಾಗ ಗೀತೆಯ ಸ್ಥಿತಪ್ರಜ್ಞ ಮನೋಭಾವನೆಯನ್ನು ಇವರು ಜೀವನದಲ್ಲಿ ಸಾಧಿಸಿದ ಬಗೆ ಸ್ನೇಹಿತರ ತಿಳಿವಿಗೆ ಬಂದಿತು.
[ಬದಲಾಯಿಸಿ] ಪುರಸ್ಕಾರ
- ೧೯೩೮ರಲ್ಲಿ “ಮೀಮಾಂಸಾ ದರ್ಪಣ”ಕ್ಕೆ ಶ್ರೀಮನ್ಮಹಾರಾಜರಿಂದ ವಿಶೇಷ ಪ್ರಶಸ್ತಿ
- ೧೯೫೨ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಂದ ಕಾಶಿಯಲ್ಲಿ ಗೌರವ; ಕನ್ನಡ ಕಾದಂಬರಿಕಾರರ ಸಮ್ಮೇಳನದ ಅಧ್ಯಕ್ಷತೆ
- ೧೯೬೩ರಲ್ಲಿ “ಮಹಾಕ್ಷತ್ರಿಯ” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಮರಣೋತ್ತರವಾಗಿ ದೊರಕಿತು.
[ಬದಲಾಯಿಸಿ] ಕೊನೆ
ಸಾಂಸ್ಕೃತಿಕವಾಗಿ ಎಷ್ಟೆ ಸಂಪನ್ನರಾಗಿದ್ದರೂ, ದೇವುಡು ಬಡತನದಲ್ಲೆ ಬಾಳಿದರು. ಇವರು ಬರಿಗಾಲಿನಲ್ಲಿ ನಡೆದಾಡುತ್ತಾರೆಂದು ನೊಂದುಕೊಂಡ ಇವರ ಶಿಷ್ಯನೊಬ್ಬ ಇವರಿಗೆ ಕೊಡಿಸಿದ ಮೆಟ್ಟುಗಳಿಂದ ಇವರ ಕಾಲಿಗೆ ಗಾಯವಾಯಿತು. ಮಧುಮೇಹಿಗಳಾದದ್ದರಿಂದ ಗಾಯ ಬಲಿತು ೧೯೫೯ರಲ್ಲಿ ಒಂದು ಕಾಲನ್ನೆ ತೆಗೆಯಬೇಕಾಯಿತು. ಇದು ಅವರ ಸಾರ್ವಜನಿಕ ಜೀವನದ ಕೊನೆಗೆ ಕಾರಣವಾಯಿತು.
೧೯೬೨ ಅಕ್ಟೋಬರ ೨೭ರಂದು ದೇವುಡು ನಿಧನ ಹೊಂದಿದರು.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಸಾಹಸವರ್ಮ
- ಕಳ್ಳರ ಕೂಟ
- ಅಂತರಂಗ
- ಮಯೂರ
- ಒಡೆದ ಮುತ್ತು
- ಚಿನ್ನಾ(ಅವಳ ಕತೆ)
- ಮಹಾಬ್ರಾಹ್ಮಣ
- ಮಲ್ಲಿ
- ಮುಂದೇನು
- ಗೆದ್ದವರು ಯಾರು
- ಎರಡನೇ ಜನ್ಮ
- ಡಾ. ವೀಣಾ
- ಮಹಾಕ್ಷತ್ರಿಯ
- ಮಹಾದರ್ಶನ
- ಮಯೂರ (ಸಂಕ್ಷೇಪಿತ ಪುನರ್ನಿರೂಪಣೆ)
[ಬದಲಾಯಿಸಿ] ಕಥೆ
- ದೇವುಡು ಕಥೆಗಳು
- ಸೋಲೋ ಗೆಲುವೋ
- ಘಾಟಿ ಮುದುಕ ಮತ್ತು ಇತರ ಕಥೆಗಳು
- ಮೂರು ಕನಸು
- ದೇವುಡು ಅವರ ಆಯ್ದ ಕಥೆಗಳು
[ಬದಲಾಯಿಸಿ] ನಾಟಕ
- ಸಾವಿತ್ರಿ
- ವಿಚಾರಣೆ (ಮೂಲ : ಜಾನ್ ಮೇಸ್ಫೀಲ್ಡ್)
- ವಿಚಿತ್ರ ಶಿಕ್ಷೆ
- ದುರ್ಮಂತ್ರಿ
- ಮಯೂರ
- ಯಾಜ್ಞವಲ್ಕ್ಯ
[ಬದಲಾಯಿಸಿ] ಪ್ರಾಚೀನ ಕಾವ್ಯ ಸಂಗ್ರಹ/ಅನುವಾದ
- ಸುರಭಿ
- ವಿಕ್ರಮೋರ್ವಶೀಯ
- ರಾಮಾಯಣದ ಮಹಾಪುರುಷರು
- ಕಾಳಿದಾಸನ ಕೃತಿಗಳು
- ಪುರುಷೋತ್ತಮ
- ಭಾರತದ ಮಹಾಪುರುಷರು
- ಸಂಗ್ರಹ ರಾಮಾಯಣ
- ಸಂಗ್ರಹ ಭಾಗವತ
- ಮಹಾಭಾರತ ಸಂಗ್ರಹ (೧,೨,೩)
[ಬದಲಾಯಿಸಿ] ಇತರ
- ಮೀಮಾಂಸಾ ದರ್ಪಣ
- ದಿವ್ಯವಾಣಿ
- ಅಂತರ್ಮುಖಿ
- ಯೋಗವಾಸಿಷ್ಠ (೧,೨,೩,೪ ,೧೦,೧೪,೧೫,೧೬,೧೭,೧೮,೧೯,೨೦,೨೧)
- ಕನ್ನಡ ಭಗವದ್ಗೀತೆ
- ಅಮೆರಿಕದ ಕಥೆ
- ಕರ್ನಾಟಕ ಸಂಸ್ಕೃತಿ
- ಮೂಲ ಸಂಸ್ಕೃತ
- ಮೈಸೂರು ಟ್ರಾನ್ಸಲೇಶನ್ ಸೀರೀಸ್ (೧,೨,೩)
- ರಾಮಾಯಣವೂ ಭಗವದ್ಗೀತೆಯೂ
- ಭೇರುಂಡೇಶ್ವರ
- ಮೈಸೂರು ಅಕ್ಷರ ಪ್ರಚಾರ ಪದ್ಧತಿ
- ಹೊಸಗನ್ನಡ ಪಂಚತಂತ್ರ
- ವಾಲ್ಡನ್
- ಉಪನಿಷತ್ತು
- ಕಥಾಸರಿತ್ಸಾಗರ
- ವೇದಾಂತ (ಉಪನಿಷತ್ತಿನ ಕಥೆಗಳು)
- ಹೊಸಗನ್ನಡ ಪಂಚತಂತ್ರ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಕಂದನ ಕಥೆಗಳು
- ಗಣೇಶನ ಕಥೆ
- ಬುದ್ಧಿಯ ಕಥೆಗಳು
- ದೇಶಾಂತರದ ಕಥೆಗಳು
- ತಂತ್ರಗಾರ ನರಿ ಮತ್ತು ಇತರ ಕಥೆಗಳು
- ಪಂಚಾಮೃತ ಮತ್ತು ಇತರ ಕಥೆಗಳು
- ಬಂಜೆಯ ಮಗ ಮತ್ತು ಇತರ ಕಥೆಗಳು
- ಒಂದು ಕನಸು ಮತ್ತು ಇತರ ಕಥೆಗಳು
- ಅವಸರ ಮತ್ತು ಇತರ ಕಥೆಗಳು
- ಬರಿಯ ಆಸೆ ಮತ್ತು ಇತರ ಕಥೆಗಳು
- ಸ್ನೆಹಿತರು ಮತ್ತು ಇತರ ಕಥೆಗಳು
- ಅಲ್ಲಿ ಇಲ್ಲಿ ಕಥೆಗಳು
- ಯವನ ಪುರಾಣ
- ದೇವುಡು ಅವರ ನಾಲ್ಕು ಮಕ್ಕಳ ಕಥೆಗಳು
- ದೇವುಡು ವಿಚಾರಧಾರಾ ಶತಕ
(ಆಕರ: ಮಲ್ಲೇಪುರಂ ಜಿ.ವೆಂಕಟೇಶ್ವರ ಇವರಿಂದ ಸಂಪಾದಿತವಾದ “ದೇವುಡು ಲೇಖನ ಸಂಪುಟ ; ಬೆಳಗೆರೆ ಕೃಷ್ಣಶಾಸ್ತ್ರಿಯವರ "ಸಾಹಿತಿಗಳ ಸ್ಮೃತಿ")