ಪ್ರಕಾಶ್ ಪಡುಕೋಣೆ
From Wikipedia
ಪ್ರಕಾಶ್ ಪಡುಕೋಣೆ ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು.
ಪಡುಕೋಣೆ ೧೯೫೫, ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಮೈಸೂರು ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು. ಪ್ರಕಾಶ್ ಪಡುಕೋಣೆ ೧೯೬೨ ರಲ್ಲಿ ತಮ್ಮ ಮೊದಲ ಅಧಿಕೃತ ಟೂರ್ನಿಯಲ್ಲಿ ಆಡಿದರು. ಆ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನ್ನನುಭವಿಸಿದರೂ ಎರಡು ವರ್ಷಗಳ ನಂತರ ಕರ್ನಾಟಕ ರಾಜ್ಯ ಜೂನಿಯರ್ ಚಾಂಪಿಯನ್ ಆದರು. ೧೯೭೧ ರಲ್ಲಿ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಸುಧಾರಿಸಿದ ಪ್ರಕಾಶ್ ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಶಿಪ್ ಎರಡನ್ನೂ ಗೆದ್ದರು. ೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಇವರದಾಯಿತು. ಇದರಿಂದಾಗಿ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ೧೯೭೨ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು.
೧೯೭೯ ರಲ್ಲಿ ಅವರು ಗೆದ್ದ ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್‍ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ ಮಾಸ್ಟರ್ಸ್ ಓಪನ್, ಡ್ಯಾನಿಷ್ ಓಪನ್ ಮತ್ತು ಸ್ವೀಡಿಷ್ ಓಪನ್ ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಅವರ ಅತ್ಯಂತ ಪ್ರಸಿದ್ಧ ಯಶಸ್ಸು ಬಂದದ್ದು ಬ್ಯಾಡ್ಮಿಂಟನ್ ನ ಎಲ್ಲಕ್ಕಿಂತ ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಗೆದ್ದಾಗ. ನಂತರ ೧೯೮೦ ರಲ್ಲಿ ಮತ್ತೊಮ್ಮೆ ಸ್ವೀಡಿಷ್ ಓಪನ್ ಅನ್ನು ಗೆದ್ದರು.
ಈಗ ಪ್ರಕಾಶ್ ಪಡುಕೋಣೆ ಬೆಂಗಳೂರಿನ ನಿವಾಸಿಗಳು. ೧೯೯೧ ರಲ್ಲಿ ನಿವೃತ್ತಿಯನ್ನು ಘೋಷಿಸಿದ ನಂತರ ಸ್ವಲ್ಪ ಕಾಲ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೯೩ ಮತ್ತು ೧೯೯೬ರಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತೆರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಪ್ರಕಾಶ್, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ "ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ"ಯನ್ನು ನಡೆಸುತ್ತಾ ಬಂದಿದ್ದಾರೆ. ೨೦೦೬ರಲ್ಲಿ ದೇವ್ ಸುಕುಮಾರ್ ವಿರಚಿತ ಪ್ರಕಾಶ್ ಜೀವನ ಚರಿತ್ರೆ 'ಟಚ್‌ಪ್ಲೇ' ಬಿಡುಗಡೆ ಹೊಂದಿತು. ಪ್ರಕಾಶ್ ಪಡುಕೋಣೆ ಪುತ್ರಿ ದೀಪಿಕಾ ಪಡುಕೋಣೆ ಒಬ್ಬ ಪ್ರಸಿದ್ದ ರೂಪದರ್ಶಿ ಹಾಗು ನಟಿ.