ಆರ್.ನರಸಿಂಹಾಚಾರ್
From Wikipedia
ಆರ್.ನರಸಿಂಹಾಚಾರ್ಯರು ೧೮೬೦ ಎಪ್ರಿಲ್ ೯ರಂದು ಮಂಡ್ಯ ಜಿಲ್ಲೆಯ ಕೊಪ್ಪಲು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶಿಂಗಮ್ಮಾಳ್ ; ತಂದೆ ತಿರುನಾರಾಯಣ ಪೆರುಮಾಳ್.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ, ವೃತ್ತಿ
ಕೊಪ್ಪಲು, ಚೆನ್ನೈ, ಬೆಂಗಳೂರು ಗಳಲ್ಲಿ ಶಿಕ್ಷಣ ಪಡೆದ ನರಸಿಂಹಾಚಾರರು ಮೈಸೂರು ಸಂಸ್ಥಾನದಲ್ಲಿ ಪ್ರೌಢಶಾಲಾ ಶಿಕ್ಷಕರಾದರು. ತರುವಾಯ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು, ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರರಾದರು. ಪ್ರಾಚ್ಯ ಸಂಶೋಧನ ಇಲಾಖೆಯಲ್ಲಿ ಬಿ.ಎಲ್.ರೈಸ್ರ ಸಹಾಯಕರಾದರು.
[ಬದಲಾಯಿಸಿ] ಸಾಧನೆ
ಬಿ.ಎಲ್.ರೈಸ್ರ ಬಳಿಕ ಪ್ರಾಚ್ಯ ಸಂಶೋಧನ ಇಲಾಖೆಯ ಮುಖ್ಯಸ್ಥರಾದ ನರಸಿಂಹಾಚಾರರು ೫೦೦೦ ಶಾಸನಗಳನ್ನು, ಹಿಂದೂ, ಜೈನ ಹಾಗು ಮುಸ್ಲಿಮರ ೧೦೦೦ ಕಟ್ಟಡಗಳನ್ನು, ೪೧೦೦ ನಾಣ್ಯಗಳನ್ನು, ೧೨೫೦ ಭಾವಚಿತ್ರಗಳನ್ನು, ೧೨೦ ನಕ್ಷೆಗಳನ್ನು, ೧೨೫ ಕನ್ನಡ, ಸಂಸ್ಕೃತ ಗ್ರಂಥಗಳನ್ನು ಬೆಳಕಿಗೆ ತಂದಿದ್ದಾರೆ. ಅಲ್ಲದೆ ನಾಗವರ್ಮನ ಕೃತಿಗಳಾದ ಕಾವ್ಯಾವಲೋಕನ ಹಾಗು ಭಾಷಾಭೂಷಣಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕದ ವ್ಯಾಪಾರ ರೋಮ್, ಪರ್ಶಿಯಾ ಹಾಗು ಚೀನಾಗಳೊಡನೆ ಇದ್ದದ್ದನ್ನು ಗುರುತಿಸಿದವರು ಇವರೆ.
[ಬದಲಾಯಿಸಿ] ಕೃತಿಗಳು
ಆರ್. ನರಸಿಂಹಾಚಾರರು ಬರೆದ ಕರ್ನಾಟಕ ಕವಿಚರಿತೆ ಒಂದು ಆಕರ ಕೃತಿ. ಗಂಭೀರ ಸಂಶೋಧನೆಗಳಲ್ಲೆ ಮುಳುಗಿದ ಇವರು ‘ನಗೆಗಡಲು’ ಎನ್ನುವ ಹಾಸ್ಯಕೃತಿಯನ್ನೂ ಬರೆದಿದ್ದಾರೆ ಎಂದರೆ ಅಚ್ಚರಿಯಾದೀತು.ಅನೇಕ ವರ್ಷಗಳ ಸಂಶೋಧನೆಯಿಂದ ೧೫೦೦ ಕವಿಗಳ ಚರಿತ್ರೆಯನ್ನು ಹಾಗು ಕೃತಿಪರಿಚಯವನ್ನು ತಮ್ಮ ಮಹತ್ವದ ಕೃತಿಯಾದ “ಕರ್ನಾಟಕ ಕವಿ ಚರಿತ್ರೆ”ಯಲ್ಲಿ ಮಾಡಿದ್ದಾರೆ.
- ಕರ್ನಾಟಕ ಕವಿಚರಿತ್ರೆ (೩ ಸಂಪುಟಗಳು)
- ಶಾಸನ ಪದ್ಯ ಮಂಜರಿ
- ಕನ್ನಡ ಶಾಸನ ಪದ್ಯ ಸಂಗ್ರಹ
- ಶಬ್ದಾನುಶಾಸನ
- ಕನ್ನಡ ಭಾಷಾ ಚರಿತ್ರೆ
- ನೀತಿ ಮಂಜರಿ ( ತಮಿಳಿನ “ಕುರುಳ್” ಗ್ರಂಥದ ಆಧಾರದ ಮೇಲೆ).
- ನಗೆಗಡಲು
[ಬದಲಾಯಿಸಿ] ಸಂಪಾದನೆ
- ೨ನೆಯ ನಾಗವರ್ಮನ ಭಾಷಾ ಭೂಷಣ
- ೨ನೆಯ ನಾಗವರ್ಮನ ಶಬ್ದಸ್ಮೃತಿ
[ಬದಲಾಯಿಸಿ] ಪುರಸ್ಕಾರ
- ೧೯೧೮ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿತರಾದರು
- ೧೯೩೪ರಲ್ಲಿ ಕೇಂದ್ರ ಸರಕಾರ ಇವರಿಗೆ ಮಹಾಮಹೋಪಾಧ್ಯಾಯ ಪ್ರಶಸ್ತಿ ನೀಡಿ ಗೌರವಿಸಿತು.
- ಕೋಲಕಾಟಾದ ಅಖಿಲ ಭಾರತ ಸಾಹಿತ್ಯ ಸಂಘದಿಂದ ಕರ್ನಾಟಕ ಪ್ರಾಚ್ಯ ವಿದ್ಯಾ ವೈಭವ ಪ್ರಶಸ್ತಿ.
- ರಾವ ಬಹಾದ್ದೂರ ಹಾಗು ಪ್ರಾಕ್ತನ ವಿಮರ್ಶಾ ವಿಚಕ್ಷಣ ಬಿರುದುಗಳು ಇವರಿಗೆ ಸಂದಿವೆ.
ಆರ್.ನರಸಿಂಹಾಚಾರ್ ೧೯೩೬ ಡಿಶಂಬರ ೬ರಂದು ತೀರಿಕೊಂಡರು.