ಕದಂಬ
From Wikipedia
ಕದಂಬ ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಈ ವಂಶದ ಮೂಲ ಪುರುಷರು ಹಿಮಾಲಯದಿಂದ ಬಂದವರೆಂಬ ಪ್ರತೀತಿಯಿದೆ.ಕರ್ನಾಟಕದ ಇತಿಹಾಸದಲ್ಲಿ ಶಾತವಾಹನರ ನಂತರ ರಾಜ್ಯಭಾರ ಮಾಡಿದ ಬನವಾಸಿಯ ಕದಂಬರು ಹೆಚ್ಚು ಮಹತ್ವ ಪಡೆದಿದ್ದಾರೆ.ಇವರು ಕ್ರಿ.ಶ.೪ನೇ ಶತಮಾನದಿಂದ ೬ನೇ ಶತಮಾನದವರೆಗೆ ಸುಮಾರು ೧೫೦ ವರ್ಷಗಳ ಕಾಲ ಆಳಿದರು.
ಈ ವಂಶದ ಮೊದಲ ದೊರೆ ಮಯೂರ ವರ್ಮ.ಬ್ರಾಹ್ಮಣನ ಮನೆಯಲ್ಲಿ ಬೆಳೆದ ಈತ ಕಂಚಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದಾಗ ಅಲ್ಲಿನ ಪಲ್ಲವ ರಾಜವಂಶದವರಿಂದ ಅವಮಾನಿಸಲ್ಪಟ್ಟು, ಸ್ವತಂತ್ರ ರಾಜ್ಯ ಸ್ಥಾಪಿಸುವ ಕನಸು ಕಂಡು ಅದರಂತೆಯೇ, ಕ್ರಿ.ಶ.350ರ ಸುಮಾರಿನಲ್ಲಿ, ಕರ್ನಾಟಕದ ಬನವಾಸಿಯಿಂದ ಆಳ್ವಿಕೆಯನ್ನು ಪ್ರಾರಂಭಿಸಿದನು.
ಕದಂಬ ವಂಶದ ಪ್ರಮುಖ ದೊರೆಗಳಲ್ಲಿ ಕಾಕುತ್ಸ ವರ್ಮನು ಬಹಳ ಹೆಸರುವಾಸಿಯಾದವನು. ಕದಂಬ ಸಾಮ್ರಾಜ್ಯವು ಇಂದಿನ, ಉತ್ತರ ಕರ್ನಾಟಕ ಹಾಗು ಗೋವೆ ಪ್ರದೇಶಗಳಲ್ಲಿ ಹಬ್ಬಿತ್ತು. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.