ಕಯ್ಯಾರ ಕಿಞಞಣ್ಣ ರೈ
From Wikipedia
ಕಯ್ಯಾರ ಕಿಞಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ ಜೂನ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ, ವೃತ್ತಿ
ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಏ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. ಆನಂತರ ಎಮ್.ಏ.ಪದವಿಧರರೂ ಆದರು. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
[ಬದಲಾಯಿಸಿ] ಸಾಮಾಜಿಕ ಜೀವನ
ಕಯ್ಯಾರ ಕಿಞಞಣ್ಣ ರೈಯವರು ಸ್ವಾತಂತ್ರ್ಯಸಂಗ್ರಾಮದಲ್ಲಿ ಹೋರಾಡಿದ್ದಾರೆ. ಹರಿಜನ ಸೇವಕ ಸಂಘಟನೆಯಲ್ಲಿ ದುಡಿದಿದ್ದಾರೆ. ಸ್ಥಳೀಯ ಪಂಚಾಯತಿಯ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಅವರು ಹೋರಾಟ ಮಾಡಿದವರು.
[ಬದಲಾಯಿಸಿ] ಸಾಹಿತ್ಯ
ಕಯ್ಯಾರ ಕಿಞಞಣ್ಣ ರೈಯವರು ಶ್ರೀಮುಖ, ಐಕ್ಯಗಾನ,ಪುನರ್ನವ,ಚೇತನ,ಕೊರಗ,ಶತಮಾನದ ಗಾನ,ಗಂಧವತಿ,ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದಾರೆ. ಕಾರ್ನಾಡ ಸದಾಶಿವರಾವ, ರತ್ನರಾಜಿ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದು ಪ್ರಕಟಿಸಿದ್ದಾರೆ.ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ.ಪಂಚಮಿ ಮತ್ತು ಆಶಾನ್‍ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದಾರೆ.ಸಾಹಿತ್ಯದೃಷ್ಟಿ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದಾರೆ.ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ 'ಪರಶುರಾಮ' ಬರೆದುಕೊಟ್ಟಿದ್ದಾರೆ. ನವೋದಯ ವಾಚನಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು,ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ. 'ವಿರಾಗಿಣಿ' ಎನ್ನುವದು ಇವರು ಬರೆದ ನಾಟಕ. 'ದುಡಿತವೆ ನನ್ನ ದೇವರು' ಎನ್ನುವದು ರೈಯವರ ಅತ್ಮಕಥನ. ಇದಲ್ಲದೆ ವಿವಿಧ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳ ಸಂಖ್ಯೆಯೆ ಐದುಸಾವಿರದಷ್ಟಾಗುತ್ತದೆ.
[ಬದಲಾಯಿಸಿ] ಪತ್ರಕರ್ತ
ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
[ಬದಲಾಯಿಸಿ] ಗೌರವ
೧೯೬೯ರಲ್ಲಿ ರೈಯವರಿಗೆ ಶ್ರೇಷ್ಠ ಅಧ್ಯಾಪಕ ಎಂದು ರಾಷ್ಟ್ರಪ್ರಶಸ್ತಿ ಲಭಿಸಿತು.ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸಹ ೧೯೬೯ರಲ್ಲಿಯೇ ಲಭಿಸಿತು.
೧೯೮೫ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು.
ಕಯ್ಯಾರ ಕಿಞಞಣ್ಣ ರೈಯವರು ೧೯೯೭ರಲ್ಲಿ ಮಂಗಳೂರಿನಲ್ಲಿ ಜರುಗಿದ ೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೨೦೦೫ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ದೊರೆಯಿತು.
೨೦೦೬ರಲ್ಲಿ ನಾಡೋಜ ಪ್ರಶಸ್ತಿ ಹಾಗು ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಲಭಿಸಿವೆ.