ಕರ್ನಾಟಕ ವಿದ್ಯಾವರ್ಧಕ ಸಂಘ
From Wikipedia
ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡ ನಾಡು ವಿವಿಧ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ಕನ್ನಡದ ಪುನರುಜ್ಜೀವನಕ್ಕಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಧಾರವಾಡದಲ್ಲಿ ೧೮೯೦ ಜುಲೈ ೨೦ರಂದು ರಾ.ಹ.ದೇಶಪಾಂಡೆಯವರ ಮುಂದಾಳ್ತನದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಬೀಜಾಂಕುರವಾಯಿತು.
ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು, ಕನ್ನಡದ ಉದಯೋನ್ಮುಖ ಲೇಖಕರನ್ನು ಬೆಳಕಿಗೆ ತರಲು, ಸಂಘವು ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ೧೮೯೨ರಲ್ಲಿ ಧೋಂಡೊ ನರಸಿಂಹ ಮುಳಬಾಗಲ ಇವರ “ಉತ್ತರ ರಾಮ ಚರಿತ್ರೆ"ಯು ಸಂಘದ ಮೊದಲ ಪ್ರಕಟನೆಯಾಗಿ ಹೊರಬಂದಿತು. ೧೮೯೮ರಲ್ಲಿ ಗಳಗನಾಥರ ಚೊಚ್ಚಲ ಕೃತಿ “ಪ್ರಬಂಧ ಪದ್ಮನಯನೇ ” ಕನ್ನಡದ ಮೊದಲ ಕಾದಂಬರಿಯಾಗಿ ಪ್ರಕಟವಾಯಿತು.
೧೮೯೬ರಲ್ಲಿ ವಾಗ್ಭೂಷಣ ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಈ ಪತ್ರಿಕೆಯಲ್ಲಿ ನವೋದಯ ಕಾಲದ ಶ್ರೇಷ್ಠ ಸಾಹಿತಿಗಳ ರಚನೆಗಳು ಪ್ರಕಟವಾಗಿವೆ.
೧೯೦೭ರ ಜೂನ ೨ ಹಾಗು ೩ರಂದು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡ ನಾಡಿನ ಪ್ರಥಮ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಲಾಯಿತು. ೧೯೦೮ ಮೇ ೩೦ರಂದು ಗ್ರಂಥಕರ್ತರ ಎರಡನೆಯ ಸಮ್ಮೇಳನವನ್ನು ಏರ್ಪಡಿಸಲಾಯಿತು.
೧೯೩೬ರಲ್ಲಿ ವಿಜಯನಗರ ಸಾಮ್ರಾಜ್ಯದ ಆರನೆಯ ಶತಮಾನೋತ್ಸವದ ಅಂಗವಾಗಿ ಹಂಪಿಯಲ್ಲಿ ನಾಡಹಬ್ಬವನ್ನು ಆಚರಿಸಲಾಯಿತು.
ಸಾಹಿತಿಗಳ ಪ್ರೋತ್ಸಾಹಕ್ಕಾಗಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿಯನ್ನು ಸಂಘವು ನೀಡುತ್ತಲಿದೆ.