ತೀರ್ಥಹಳ್ಳಿ
From Wikipedia
ತೀರ್ಥಹಳ್ಳಿ - ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ.
ತುಂಗಾ ನದಿಯ ತೀರದಲ್ಲಿರುವ ತೀರ್ಥಹಳ್ಳಿ ಪಟ್ಟಣವು ಶಿವಮೊಗ್ಗದಿಂದ ೬೦ ಕಿಮಿ ದೂರದಲ್ಲಿದೆ. ಸಂಪೂರ್ಣವಾಗಿ ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿ ತಾಲೂಕು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಸಹ್ಯಾದ್ರಿಯ ನಿತ್ಯಹರಿದ್ವರ್ಣ ದಟ್ಟ ಕಾಡು ಇದೆ. ಅಡಿಕೆ ಇಲ್ಲಿನ ಮುಖ್ಯ ಬೆಳೆಗಳಲ್ಲೊಂದು. ಅಡಿಕೆ ತೋಟಗಳಲ್ಲಿ ಉಪಬೆಳೆಗಳಾಗಿ ಏಲಕ್ಕಿ, ಕಾಳುಮೆಣಸು ಮತ್ತು ಬಾಳೆಯನ್ನು ಬೆಳೆಯುತ್ತಾರೆ.
ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ ಇರುವುದು ಈ ತಾಲ್ಲೂಕಿನಲ್ಲಿಯೇ. ಕನ್ನಡದ ಪ್ರಮುಖ ಲೇಖಕರಾದ ಹಾ.ಮಾ.ನಾಯಕರ ಹುಟ್ಟೂರು ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆ.ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ, ಕವಿ ಎಸ್.ವಿ ಪರಮೇಶ್ವರ ಭಟ್ಟ,ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ತೀರ್ಥಹಳ್ಳಿ ಮೂಲದ ಪ್ರಮುಖ ಸಾಹಿತಿಗಳು. ಖ್ಯಾತ ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಇದೇ ತಾಲ್ಲೂಕಿನವರು ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದರು.ತಾಲೂಕಿನ ಪುರುಷೋತ್ತಮರಾವ್ ಮತ್ತು ದೇವಂಗಿ ಪ್ರಫುಲ್ಲಚಂದ್ರ ಸಹಜ ಕೃಷಿಯಲ್ಲಿ ಅನನ್ಯ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರು