ಪಂಜೆ ಮಂಗೇಶರಾಯರು
From Wikipedia
ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾದ ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ ೧೮೭೪ ಫೆಬ್ರುವರಿ ೨೨ ರಂದು ಜನಿಸಿದರು. ಇವರ ತಂದೆ ರಾಮಪ್ಪಯ್ಯ ; ತಾಯಿ ಶಾಂತಾದುರ್ಗಾ.. ೧೮೯೪ ರಲ್ಲಿ ಇವರ ಮದುವೆ ಖ್ಯಾತನಾಮರಾದ ಬೆನಗಲ್ ರಾಮರಾವ್ ಇವರ ತಂಗಿ ಭವಾನಿಬಾಯಿ ಇವರೊಂದಿಗೆ ಜರುಗಿತು. ಈಗಿನ ಪಿಯುಸಿ ಎರಡನೆಯ ವರ್ಷಕ್ಕೆ ತತ್ಸಮವಾದ, ಕಾಲೇಜಿನ ಮೊದಲ ವರ್ಷದ ಎಫ್.ಏ.(ಆರ್ಟ್ಸ್) ತರಗತಿಯಲ್ಲಿ ಉತ್ತೀರ್ಣರಾದ ಬಳಿಕ ಇವರು ೧೮೯೬ ರಲ್ಲಿ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತ ಹುದ್ದೆ ಪಡೆದರು. ೧೯೨೯ ರವರೆಗೆ ೨೨ ವರ್ಷಗಳ ಕಾಲ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿಗಳಾಗಿ, ಸಬ್ ಅಸಿಸ್ಟಂಟ ರಜಿಸ್ಟ್ರಾರರಾಗಿ, ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.
ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪಂಜೆಯವರು ಪ್ರಥಮವಾಗಿ ಪದ್ಯಪುಸ್ತಕಗಳನ್ನು ಸಂಪಾದಿಸಿದರು. ೧೯೧೨ರಲ್ಲಿ ಮೊದಲನೆಯ, ೧೯೧೯ರಲ್ಲಿ ಎರಡನೆಯ ಹಾಗು ೧೯೨೭ರಲ್ಲಿ ಮೂರನೆಯ ಪದ್ಯಪುಸ್ತಕಗಳು ಹೊರಬಂದು ಪಾಠ್ಯಕ್ರಮದಲ್ಲಿ ಅಳವಡಿಕೆಯಾದವು. ಸ್ವತಃ ಪಂಜೆಯವರೆ ಈ ಪುಸ್ತಕಗಳಿಗಾಗಿ ಕೆಲವು ಪದ್ಯಗಳನ್ನು ರಚಿಸಿದರು. ಪಂಜೆಯವರು ಬರೆದ ಮಕ್ಕಳ ಸಾಹಿತ್ಯ ೨೨ ಶಿಶುಸಾಹಿತ್ಯವರ್ಗದ ಕಥೆಗಳನ್ನು, ೧೮ ಶಿಶುಗೀತೆಗಳನ್ನು, ೧೨ ಬಾಲಸಾಹಿತ್ಯ ಕಥೆಗಳನ್ನು, ೧೧ ಬಾಲಗೀತೆಗಳನ್ನು ಒಳಗೊಂಡಿದೆ.
ಇವರ ಪ್ರಸಿದ್ಧ ಬಾಲಗೀತೆ ‘ ನಾಗರಹಾವೆ ಹಾವಳು ಹೂವೆ ‘ ಕವಿತೆಯು ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಕವಿತೆಯಾಗಿದೆ. ‘ ಅಣ್ಣನ ವಿಲಾಪ’ ಹೊಸಗನ್ನಡದ ಮೊಟ್ಟಮೊದಲ ಶೋಕಗೀತೆಯಾಗಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಕಥನಕವನಗಳನ್ನು ಬರೆದವರೂ ಪಂಜೆಯವರೆ. ಡೊಂಬರ ಚೆನ್ನ, ಕಡೆಕಂಜ, ರಂಗಸೆಟ್ಟಿ ಇವರ ಪ್ರಸಿದ್ಧ ಕವನಗಳು. ‘ ಹೊಲೆಯನ ಹಾಡು’ ದಲಿತರ ಬಗೆಗೆ ಕನ್ನಡದಲ್ಲಿ ಬಂದ ಮೊದಲ ಪದ್ಯ. ೧೯೦೦ರಲ್ಲಿ ಪಂಜೆಯವರು ಬರೆದ ‘ ನನ್ನ ಚಿಕ್ಕ ತಾಯಿ’ ಕನ್ನಡದ ಮೊದಲ ಕಥೆಯನ್ನಬಹುದು. ಇದಲ್ಲದೆ ಕಿರು ಕಾದಂಬರಿ, ಪತ್ತೇದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋದನೆ, ಹರಟೆ, ವೈಚಾರಿಕ ಲೇಖನಗಳನ್ನೂ ಸಹ ಪಂಜೆಯವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
೧೯೩೪ರಲ್ಲಿ ರಾಯಚೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪಂಜೆ ಮಂಗೇಶರಾಯರು ೧೯೩೭ ಅಕ್ಟೋಬರ ೨೪ ರಂದು ನಿಧನರಾದರು.