ಬಿ ಎಂ ಶ್ರೀ
From Wikipedia
ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಬಿ. ಎಂ. ಶ್ರೀಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ ೧೮೮೪ರಲ್ಲಿ ಜನಿಸಿದರು. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ ಇವರ ಮುದ್ದಿನ ಮಗನಾಗಿ ಬಿ. ಎಂ. ಶ್ರೀಯವರು ಬೆಳೆದರು. ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿ ಮುಗಿಸಿದರು. ಬಿ. ಎ. ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಂ. ಎ. ಹಾಗೂ ಎಲ್. ಎಲ್. ಬಿ. ಪದವಿಯನ್ನು ಮದರಾಸಿನಲ್ಲಿ ೧೯೦೫ರಲ್ಲಿ ಮುಗಿಸಿದರು. ಆಗ ಅವರಿಗೆ ೨೫ ವರ್ಷ, ಆಗಲೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷ ಸೇವೆ ಸಲ್ಲಿಸಿ ೧೯೩೦ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾದರು. ಅನಂತರ ಅವರು ೧೯೪೨ರ ವರೆಗೆ ಈ ಕಾಲೇಜಿನ ಏಳಿಗೆಗಾಗಿ ದುಡಿದು ೧೯೪೪ರಲ್ಲಿ ಧಾರವಾಡದ ಕೆ. ಇ. ಬೋರ್ಡ್‌ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ ಆರ್ಟ್ ಕಾಲೇಜಿಗೆ ಪ್ರಾಂಶುಪಾಲಕರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿ ೧೯೪೬ರಲ್ಲಿ ಅವರು ಧಾರವಾಡದಲ್ಲಿಯೇ ನಿಧನರಾದರು. ಬಿ. ಎಂ. ಶ್ರೀಕಂಠಯ್ಯನವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್. ವಿ. ರಂಗಣ್ಣ, ತೀ. ನಂ. ಶ್ರೀಕಂಠಯ್ಯ, ಜಿ. ಪಿ. ರಾಜರತ್ನಂ, ಡಿ. ಎಲ್. ನರಸಿಂಹಚಾರ್ ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು. ಅವರು ಕನ್ನಡದಲ್ಲಿ ಗದಾಯುದ್ಧ, ಅಶ್ವತ್ಥಾಮನ್ ಮತ್ತು ಪಾರಸಿಕರು ಎಂಬ ನಾಟಕಗಳನ್ನು, ಹೊಂಗನಸು, ಇಂಗ್ಲಿಷ್ ಗೀತೆಗಳು ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಅವರು ನ್ಯೂಮನ್ ಬರೆದ Lead Kindly Light ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ `ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು.
ಬಿ. ಎಂ. ಶ್ರೀಯವರಿಗೆ ೧೯೩೮ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೯೨೮ರಲ್ಲಿ ಗುಲಬರ್ಗಾದಲ್ಲಿ ನಡೆದ ೧೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ.
ಹೆಚ್ಚಿನ ಓದು : ಕನ್ನಡ ಸಾಹಿತ್ಯಕ್ಕೆ ಬಿ.ಎಂ.ಶ್ರೀಯವರ ಕೊಡುಗೆ ಎಷ್ಟು ದೊಡ್ಡದು ಎಂಬ ಬಗ್ಯೆ ತಿಳಿಯಲು ಏ.ಎನ್. ಮೂರ್ತಿರಾಯರ 'ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಲ್ಲಿ 'ಬಿ.ಎಂ.ಶ್ರೀ ' ಅಧ್ಯಾಯವನ್ನು ಓದಿ.