ಬೇಲೂರು
From Wikipedia
ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ವರ್ಷ ೨೦೦೫ರಲ್ಲಿ ಆರ್ಖಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ.[೧] ಈ ದೇವಾಲಯವನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದೂ, ಸೌಮ್ಯಕೇಶವಸ್ವಾಮಿ ದೇವಸ್ಥಾನವೆಂದೂ ಕರೆಯುವ ವಾಡಿಕೆ ಇರುವುದಾಗಿ ಸ್ಥಳೀಯ ಜನರಿಂದ ಕಂಡು ಬರುತ್ತದೆ.
ಪರಿವಿಡಿ |
[ಬದಲಾಯಿಸಿ] ಭೂಗೋಳ
ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು, ಬೆಂಗಳೂರಿನಿಂದ ೨೨೨ ಕಿ.ಮಿ, ಮೈಸೂರಿನಿಂದ ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು.
[ಬದಲಾಯಿಸಿ] ಮುಖ್ಯ ಆಕರ್ಷಣೆಗಳು
ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ.
[ಬದಲಾಯಿಸಿ] ಇತಿಹಾಸ
ಈ ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಶುರುವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ ಆನೆ ಬಾಗಿಲು ಎಂದು ಕರೆಯುತ್ತಾರೆ.
[ಬದಲಾಯಿಸಿ] ದೇವಾಲಯದ ಆವರಣದಲ್ಲಿ ಮುಖ್ಯ ದೇವಸ್ಥಾನಗಳು
ಗೋಪುರದ ಮೊಲಕ ಒಳಗೆ ಬಂದ ಕೂಡಲೆ ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತಿದರೆ ಕಾಣುವ ಮುಖ್ಯ ದೇವಸ್ಥಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
- ಚೆನ್ನಕೇಶವಸ್ವಾಮಿ ದೇವಸ್ಥಾನ
- ಕಪ್ಪೆ ಚೆನ್ನಿಗರಾಯ ದೇವಸ್ಥಾನ
- ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ
- ಕಲ್ಯಾಣ ಮಂಟಪ
- ವೀರನಾರಾಯಣ ದೇವಸ್ಥಾನ
- ರಂಗನಾಯಕಿ ಅಮ್ಮನವರ ದೇವಸ್ಥಾನ
ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ. ಪ್ರಮುಖ ದೇವಸ್ಥಾನವಾದ ಚೆನ್ನಕೇಶವ ದೇವಸ್ಥಾನದ ವಿವರಣೆಯನ್ನು ಮುಂದಿನ ಭಾಗದಲ್ಲಿ ನೀಡಲಾಗಿದೆ. ಇಲ್ಲಿ ದೇವಸ್ಥಾನದ ಮಿಕ್ಕ ಆವರಣವನ್ನು ವಿವರಿಸಲಾಗಿದೆ.
[ಬದಲಾಯಿಸಿ] ಕಪ್ಪೆ ಚೆನ್ನಿಗರಾಯ ದೇವಸ್ಥಾನ
ಈ ಗುಡಿಯು ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ/ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಅಮರಶಿಲ್ಪಿ ಜಕ್ಕಣಾಚಾರ್ಯರ ದಂತಕಥೆಯ ಮೂಲದಿಂದ ನಮಗೆ ಇದರ ಹಿನ್ನಲೆ ತಿಳಿದುಬರುತ್ತದೆ. ಹಿಂದೆ ಜಕ್ಕಣಾಚಾರ್ಯರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ.
[ಬದಲಾಯಿಸಿ] ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ
ಕಪ್ಪೆ ಚೆನ್ನಿಗರಾಯ ದೇವಸ್ಥಾನದ ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ. ಚತುರ್ಭುಜಾಧಾರಿಯಾದಿ ಸೌಮ್ಯನಾಯಕಿ ಅಮ್ಮನವರು ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ.
[ಬದಲಾಯಿಸಿ] ಕಲ್ಯಾಣ ಮಂಟಪ
ಸೌಮ್ಯನಾಯಕಿ ಅಮ್ಮನವರ ದೇವಾಲಯದ ನಂತರ ಸಿಗುವುದೇ ಕಲ್ಯಾಣ ಮಂಟಪ. ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತೆ. ಇದರ ಜೊತೆಗೆ ಜಾತ್ರೆಯ ಸಮಯದಲ್ಲಿ ಹೋಮಯಾಗಾದಿಗಳು ನಡೆಯುತ್ತವೆ.
[ಬದಲಾಯಿಸಿ] ವೀರನಾರಾಯಣ ದೇವಸ್ಥಾನ
ಇದು ಕಲ್ಯಾಣ ಮಂಟಪದ ಒಳಭಾಗದಲ್ಲಿದೆ. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ.
[ಬದಲಾಯಿಸಿ] ರಂಗನಾಯಕಿ ಅಮ್ಮನವರ ದೇವಸ್ಥಾನ
ವೀರನಾರಾಯಣ ದೇವಸ್ಥಾನದ ನಂತರ ಸಿಗುವುದು ಈ ದೇವಸ್ಥಾನ. ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಹೇಳಲಾಗುತ್ತದೆ.
[ಬದಲಾಯಿಸಿ] ದೇವಸ್ಥಾನದ ಆವರಣದಲ್ಲಿ ಇತರೆ ಆಕರ್ಷಣೆಗಳು
ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಆಕರ್ಷಣೆಗಳಿವೆ. ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ,ಪುಷ್ಕರಣಿ ಇತ್ಯಾದಿಗಳ ವ್ಯವಸ್ಥೆ ಇದೆ. ಇವುಗಳನ್ನು ಈ ಕೆಳಗೆ ವಿವರಿಸಲಾಗಿದೆ.
[ಬದಲಾಯಿಸಿ] ದೀಪಾಲೆ ಕಂಬ
ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರ್ಉ ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು. ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ ೪ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ - ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ. ಈ ಕಾರಣಾಂತರಗಳಿಂದ ಇದನ್ನು ಗುರುತ್ವಾಕೇಂದ್ರ ಕಂಬ(ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.
[ಬದಲಾಯಿಸಿ] ಆನೆಬಾಗಿಲು
ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ.
[ಬದಲಾಯಿಸಿ] ಮಂಟಪದ ಸಾಲು
ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು ೪ ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂದು ಸ್ಥಳೀಯರಿಂದ ತಿಳಿಯುತ್ತದೆ.
[ಬದಲಾಯಿಸಿ] ಪಾಕ ಶಾಲೆ ಮತ್ತು ಯಾಗ ಶಾಲೆ
ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿವಿಸವೂ ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ.
[ಬದಲಾಯಿಸಿ] ಶ್ರೀ ರಾಮದೇವರ ದೇವಸ್ಥಾನ ಮತ್ತು ವಾಹನ ಮಂಟಪ
ಯಾಗಶಾಲೆಯ ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ ಬಲಭಾಗದಲ್ಲಿರುವುದನ್ನು ಕಾಣಬಹುದು.
ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು ೭ ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ, ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ ಊರಿನಲ್ಲಿ ಉತ್ಸವ ಮಾಡುತ್ತಾರೆ.
[ಬದಲಾಯಿಸಿ] ಗಜಾಗುಂಡ
ಗೋಪುರದ ಬಲಭಾಗದಲ್ಲಿರುವ ಪುಷ್ಕರಣಿ/ಕಲ್ಯಾಣಿಗೆ ಗಜಾಗುಂಡ ಎಂದು ಹೆಸರು. ಇದನ್ನು ವಾಸುದೇವತೀರ್ಥ ಎಂದೂ ಕರೆಯುತ್ತಾರೆ. ಈ ಕಲ್ಯಾಣಿಯಲ್ಲಿ ಅನೇಕರೀತಿಯ ಮೀನುಗಳನ್ನು ಬಿಟ್ಟಿರುತ್ತಾರೆ. ಈ ಕಲ್ಯಾಣಿಯ ಬಾಗಿಲನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ನೀರಿನ ಹತ್ತಿರ ಹೋಗುವ ಪ್ರವೇಶವಿರುವುದಿಲ್ಲ.
ರಾಷ್ಟ್ರಕವಿ ಕುವೆಂಪು ಅವರು ಇಲ್ಲಿಯ ದೇವಾಲಯಗಳನ್ನು ನೋಡಿ "ಶಿಲೆಯಲ್ಲವೀ ಕಲೆಯಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು" ಎಂದಿದ್ದಾರೆ.
[ಬದಲಾಯಿಸಿ] ಉಲ್ಲೇಖನೆಗಳು
೧. http://www.hindu.com/2005/06/16/stories/2005061610870500.htm
[ಬದಲಾಯಿಸಿ] ಬಾಹ್ಯಾಪುಟಗಳು
೧. http://www.kamat.com/kalranga/deccan/hoysala/belur.htm
೨. http://www.art-and-archaeology.com/india/belur/bel01.html