ವಿನಾಯಕ ದಾಮೋದರ ಸಾವರ್ಕರ್
From Wikipedia
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಒಬ್ಬರು
ಪರಿವಿಡಿ |
[ಬದಲಾಯಿಸಿ] ಹಿನ್ನೆಲೆ
ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಬಾರತೀಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಗಿತ್ತು.
ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕ ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು. ಒಂಭತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುಧ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾದ. 1899ರಲ್ಲಿ ದೇಶವನ್ನು ಮುತ್ತಿದ ಪ್ಲೇಗ್ ಪಿಡುಗಿಗೆ ಅವನ ತಂದೆ ತುತ್ತಾದರು. 1901ರಲ್ಲಿ ಯಮುನಾಬಾಯಿಯೊಂದಿಗೆ ಮದುವೆಯಾಯಿತು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಜೂನ್ 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ , ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ ತೆರಳಿದರು.
[ಬದಲಾಯಿಸಿ] ಸ್ವಾತಂತ್ರ್ಯ ಹೋರಾಟಗಾರ
ಸಾವರ್ಕರ್ ವಿದ್ಯಾರ್ಥಿಯಾಗಿದ್ದಾಗ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಅವರು ತಿಲಕರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿದ್ದಾಗ “ಸ್ವತಂತ್ರ ಭಾರತ ಸಮಾಜ” (Free India Society)ವನ್ನು ಸ್ಥಾಪಿಸಿದರು.
ಈ ಸಂಸ್ಥೆ ಭಾರತೀಯ ಪಂಚಾಂಗದ ಹಬ್ಬಗಳೇ ಮೊದಲಾದ ಮುಖ್ಯ ತಿಥಿಗಳನ್ನು , ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳನ್ನೂ ಆಚರಿಸುತ್ತಿತ್ತು. ಭಾರತದ ಸ್ವಾತಂತ್ರ್ಯದ ಬಗ್ಯೆ ಮಾತುಕತೆಗಳಿಗಾಗಿ ಮುಡಿಪಾಗಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷ್ ಸತ್ತೆಯ ಕೆಂಗಣ್ಣು ಬೀಳಲು ತಡವಾಗಲಿಲ್ಲ. “ಬ್ರಿಟಿಷ್ ಅಧಿಕಾರಿಗಳ ಬಗೆಗೇ ಆಗಲಿ, ಅವರ ಕಾನೂನುಗಳ ಬಗೆಗೇ ಆಗಲಿ, ಗೋಣಗುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕೊನೆಯೂ ಇಲ್ಲ. ನಮ್ಮ ಚಳುವಳಿ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗದೆ, ಆ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು” ಎಂದು ಸಾವರ್ಕರರು ಹೇಳಿದ್ದರೆಂದು ನಂಬಲಾಗಿದೆ. 1908ರಲ್ಲಿ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ- 1857 ” ಬರೆದಾಗ, ಬ್ರಿಟಿಷ್ ಸರಕಾರವು ತಕ್ಷಣವೇ ಭಾರತ ಮತ್ತು ಬ್ರಿಟನ್ನುಗಳಲ್ಲಿ ಅದರ ಪ್ರಕಾಶನವನ್ನು ನಿರ್ಬಂಧಿಸಿತು. ಮುಂದೆ ಭಿಕಾಜಿ ಕಾಮಾ ಅದನ್ನು ಹಾಲೆಂಡಿನಲ್ಲಿ ಪ್ರಕಾಶಿಸಿದರು. ಅಲ್ಲಿಂದ ಅದನ್ನು ಗುಪ್ತವಾಗಿ ಭಾರತಕ್ಕೆ ಸಾಗಿಸಿ ಬ್ರಿಷರ ವಿರುಧ್ಧ ಸಕ್ರಿಯರಾಗಿದ್ದ ಕ್ರಾಂತಿಕಾರಿಗಳಿಗೆ ಹಂಚಲಾಯಿತು.
1909ರಲ್ಲಿ , ಸಾವರ್ಕರರ ನಿಕಟ ಅನುಯಾಯಿ, ಮದನಲಾಲ್ ಧಿಂಗ್ರಾ, ಆಗಿನ ವೈಸರಾಯ್ ಲಾರ್ಡ್ ಕರ್ಜನ್ನನ ವಧೆಯ ಪ್ರಯತ್ನ ವಿಫಲವಾದ ನಂತರ, ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ. ಇದರ ಫಲವಾಗಿ ಉಂಟಾದ ರಾಜಕೀಯ ಗೊಂದಲದಲ್ಲಿ, ಸಾವರ್ಕರ್ ಈ ಘಟನೆಯನ್ನು ಖಂಡಿಸಲು ನಿರಾಕರಿಸಿ , ಎದ್ದು ಕಾಣಿಸಿಕೊಂಡರು.
ನಾಸಿಕ್ ಪಟ್ಟಣದ ಕಲೆಕ್ಟರ್ ಎ.ಎಂ.ಟಿ. ಜಾಕ್ಸನ್ ಯುವಕನೊಬ್ಬನ ಗುಂಡಿಗೆ ಬಲಿಯಾದಾಗ, ಸಾವರ್ಕರ್ ಕೊನೆಗೂ ಬ್ರಿಟಿಷ್ ಅಧಿಕಾರಿಗಳ ಬಲೆಯಲ್ಲಿ ಸಿಕ್ಕಿದರು. ಇಂಡಿಯಾ ಹೌಸ್ ನೊಂದಿಗೆ ಸಾವರ್ಕರರ ಸಂಪರ್ಕವನ್ನೇ ನೆಪಮಾಡಿ ಅವರನ್ನು ಈ ಕೊಲೆಯಲ್ಲಿ ಅಪರಾಧಿ ಎಂದು ನಿರ್ಣಯಿಸಲಾಯಿತು. 13ನೇ ಮಾರ್ಚ್ 1910ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ, ನಂತರ ಪ್ಯಾರಿಸಿನಲ್ಲಿ ಅವರನ್ನು ಬಂಧಿಸಲಾಯಿತು. ಮಾರ್ಸೇಲ್ಸ್ ನಿಂದ ಪರಾರಿಯಾಗುವ ಅವರ ಧೀರ ಪ್ರಯತ್ನ ವಿಫಲವಾಯಿತು. ಅವರನ್ನು ಹಿಡಿದು ಮುಂಬಯಿಗೆ “ ಎಸ್.ಎಸ್.ಮೊರಿಯಾ” ಹಡಗಿನಲ್ಲಿ ತಂದು, ಯೆರವಡಾ ಜೈಲಿನಲ್ಲಿ ಬಂಧಿಸಲಾಯಿತು. ಅವರ ವಿರುದ್ಧದ ಮೊಕದ್ದಮೆಯಲ್ಲಿ , ಆಗಿನ್ನೂ 27ರ ತರುಣನಾಗಿದ್ದ ಅವರಿಗೆ, ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ನಾಲ್ಕು ಜುಲೈ, 1911ರಂದು, ಅವರನ್ನು ಅಂಡಮಾನಿಗೆ ಸಾಗಿಸಲಾಯಿತು.
ಸಾವರ್ಕರ್ 1911ರಲ್ಲಿ , ಮತ್ತೆ 1913ರಲ್ಲಿ, ಸರ್ ರೆಜಿನಾಲ್ಡ್ ಕ್ರಾಡ್ಡಾಕ್ ನ ಭೆಟಿಯ ಸಮಯದಲ್ಲಿ ಕ್ಷಮೆಗಾಗಿ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಆಗಿನ ಬ್ರಿಟಿಷ್ ಆಡಳಿತ ರಾಜಕೀಯ ಖೈದಿಗಳಿಗೆ ಸೆರೆಮನೆಯಲ್ಲಿ ನೀಡುತ್ತಿದ್ದ ಚಿತ್ರಹಿಂಸೆ ಹಾಗೂ ಸಾವರ್ಕರರ ಕೆಡುತ್ತಿದ್ದ ಆರೋಗ್ಯ ಈ ಹಿನ್ನೆಲೆಯಲ್ಲಿ ಸಾವರ್ಕರರ ಕ್ಷಮಾ ಅರ್ಜಿಯನ್ನು ನೋಡಬೇಕು ಎಂದು ಅವರ ಸಮರ್ಥಕರು ಅಭಿಪ್ರಾಯಪಡುತ್ತಾರೆ. ಮತ್ತೆ ಭಾರತದ ಭೂಮಿಗೆ ಹಿಂದಿರುಗಿ , ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತೊಡಗುವ ಚಾಣಾಕ್ಷ ಉದ್ದೇಶದಿಂದ ಅವರು ಕ್ಷಮೆ ಕೇಳಿರಬಹುದು ಎಂಬ ಅಭಿಪ್ರಾಯವೂ ಇದೆ. ಇದಕ್ಕೆ ವಿರುದ್ಧವಾಗಿ, ಈ ಕ್ರಿಯೆ ಬ್ರಿಟಿಷರ ವಿರುದ್ಧ ಸಾವರ್ಕರರ ಶರಣಾಗತಿ ಎಂದು ಅವರ ಟೀಕಾಕಾರರು ಭಾವಿಸುತ್ತಾರೆ. ಅದು ಹೇಗೇ ಇದ್ದರೂ, ಸಾವರ್ಕರರ ಈ ಕ್ರಮ ಮುಂದೆ ಬಹಳಷ್ಟು ಕಾಲದವರೆಗೆ ವಿವಾದವನ್ನು ಸೃಷ್ಟಿಸಿದ ವಿಷಯಗಳಲ್ಲಿ ಮೊದಲನೆಯದಾಗಿತ್ತು.
1920ರಲ್ಲಿ ವಿಠ್ಠಲಭಾಯಿ ಪಠೇಲ್, ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ ಮುಂತಾದ ಹಿರಿಯ ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಸಾವರ್ಕರ್ ಹಾಗೂ ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಮೇ 12, 1921ರಂದು ಸಾವರ್ಕರರನ್ನು ರತ್ನಾಗಿರಿ ಜೈಲಿಗೆ, ಮತ್ತೆ ಅಲ್ಲಿಂದ ಯೆರವಡಾ ಜೈಲಿಗೆ, ಸಾಗಿಸಲಾಯಿತು. ಅವರು “ಹಿಂದುತ್ವ” ಕೃತಿ ಬರೆದದ್ದು ರತ್ನಾಗಿರಿಯ ಜೈಲಿನಲ್ಲಿದ್ದಾಗ. ಅವರ ಚಟುವಟಿಗಳಿಗೆ ಹಾಗೂ ತಿರುಗಾಟಕ್ಕೆ ತೀವ್ರ ನಿರ್ಬಂಧಗಳನ್ನು ಹಾಕಿ, ಜನವರಿ 6,1924ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
[ಬದಲಾಯಿಸಿ] ರಾಜಕಾರಣಿ
ಸಾವರ್ಕರ್ ಸ್ವತಃ ನಾಸ್ತಿಕರಾಗಿದ್ದರೂ ಕೂಡಾ, ಇಷ್ಟವಿಲ್ಲದಿದ್ದರೂ ಹಿಂದೂ ಮಹಾಸಭೆಯ ಅಧ್ಯಕ್ಷ ಪದವನ್ನು ಒಪ್ಪಿಕೊಳ್ಳಬೇಕಾಯಿತು. ಅವರು ಆ ಪದವಿಯಲ್ಲಿ ಇದ್ದ ಏಳು ವರ್ಷಗಳಲ್ಲಿ , ಮಹಾಸಭೆಯನ್ನು ಸ್ವತಂತ್ರ ರಾಜಕೀಯ ಪಕ್ಷವನ್ನಾಗಿ ಬೆಳೆಸಲು ಅಗಾಧ ಕೊಡುಗೆ ನೀಡಿದರು. ಬ್ರಿಟಿಷರು ಜರ್ಮನಿಯ ಮೇಲೆ ಯುದ್ಧ ಹೂಡಿ ಅದರಲ್ಲಿ ಭಾರತವನ್ನೂ ಎಳೆದುಕೊಂಡಾಗ, ಸಾವರ್ಕರ್ “ ಮಾನವ ಸ್ವಾತಂತ್ರ್ಯದ ಹಕ್ಕನ್ನು ಕಾಪಾಡುವುದಾಗಿ ಹೇಳಿಕೊಳ್ಳುವ ಬ್ರಿಟಿಷರ ನೀತಿ ಅರ್ಥಹೀನ” ಎಂದರು. ಆದಾಗ್ಯೂ, ಬ್ರಿಟಿಷರಿಗೆ ಜರ್ಮನಿ ಮತ್ತು ಜಪಾನಿನ ವಿರುದ್ಧದ ಯುದ್ಧದಲ್ಲಿ ಸಃಅಯ ಮಾಡುವಂತೆ ಅವರು ಹಿಂದೂ ಸಮಾಜಕ್ಕೆ ಕರೆ ಕೊಟ್ಟರು. ಅವರ ಸಮರ್ಥಕರು ಈ ಕ್ರಮವನ್ನು ಹಿಂದೂ ಸಮಾಜಕ್ಕೆ ಮಿಲಿಟರಿ ತರಪೇತಿ ದೊರಕಿಸಿಕಂಡು ಮುಂದೆ ಬ್ರಿಟಿಷರ ಮೇಲೆ ಬೀಳುವ ಉದ್ದೇಶದಿಂದ ತೆಗೆದುಕೊಂಡದ್ದಾಗಿತ್ತು ಎಂದು ಅರ್ಥೈಸಿದರೂ, ಅವರ ವಿರೋಧಿಗಳು ಇದನ್ನು ಬ್ರಿಟಿಷ್ ಹಿತಾಸಕ್ತಿಗಳಿಗೆ ಹೊಂದಿಕೊಳ್ಳುವ ಸಾವರ್ಕರರ ಮತ್ತೊಂದು ಉದಾಹರಣೆಯಾಗಿ ಕಂಡರು.
ಸಾವರ್ಕರರ ಅಧ್ಯಕ್ಷತೆಯಲ್ಲಿ ಮಹಾಸಭಾ, 1942 ರ ಭಾರತ ಬಿಟ್ಟು ತೊಲಗಿ ಅಂದೋಲನವನ್ನು ಬೆಂಬಲಿಸಲಿಲ್ಲ. ಕಮ್ಯೂನಿಸ್ಟ್ ಪಾರ್ಟಿ ಹಾಗೂ ಮುಸ್ಲಿಮ್ ಲೀಗ್ ಕೂಡಾ ಈ ಅಂದೋಲನವನ್ನು ಸಮರ್ಥಿಸಲಿಲ್ಲ.
ಸ್ವಾತಂತ್ರ್ಯೋತ್ತರ ಭಾರತವು, ಸುಧೃಢವಾಗಿಯೂ, ಒಗ್ಗಟ್ಟಿನಿಂದಲೂ ಹಾಗೂ ಸ್ವಾವಲಂಬಿಯೂ ಆಗಿರಬೇಕೆಂಬ ಅಪೇಕ್ಷೆ ಅವರಿಗಿತ್ತು.
[ಬದಲಾಯಿಸಿ] ಲೇಖಕ
ಅವರ ಮರಾಠಿ ಕೃತಿಗಳಲ್ಲಿ “ಕಮಲಾ”, “ನನ್ನ ಜೀವಾವಧಿ ಶಿಕ್ಷೆ”, ಹಾಗೂ ಅತ್ಯಂತ ಪ್ರಸಿದ್ಧವಾದ “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ( ಇದನ್ನು ಬ್ರಿಟಿಷರು ತಮಗನುಕೂಲವಾಗಿ “ಸಿಪಾಯಿ ದಂಗೆ” ಎಂದು ಕರೆದಿದ್ದರು) ಸೇರುತ್ತವೆ. ಸಾವರ್ಕರರಿಂದಾಗಿ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಎಂದೇ ಈ ಘಟನೆ ಪ್ರಸಿದ್ಧವಾಯಿತು. ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಳಾ ಪಾಣಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಎಂಬುದು ಅವರ ಇನ್ನೊಂದು ಗಮನಾರ್ಹ ಕೃತಿ. ಭಾರತದ ಇತಿಹಾಸ ಒಂದಾದ ಮೇಲೊಂದು ಸೋಲುಗಳ ಸರಮಾಲೆ ಎಂದು ಆಗ ಪ್ರಚಲಿತವಾಗಿದ್ದ ಅಭಿಪ್ರಾಯವನ್ನು ಬದಲಾಯಿಸಲು , ಅವರು ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು
ಸೆರೆಮನೆಯಲ್ಲಿದ್ದಾಗ ಅವರು ಅನೇಕ ಪುಸ್ತಕಗಳನ್ನು ಬರೆದರು.ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲೊಂದು “ಹಿಂದುತ್ವ”. ಭಾರತ ರಾಷ್ಟ್ರ ಹಾಗೂ ಹಿಂದೂ ಧರ್ಮ ಎಂಬ ಪರಿಕಲ್ಪನೆಗಳನ್ನು ಹಿಂದೂ ರಾಷ್ಟ್ರೀಯತಾವಾದದ ದೃಷ್ಟಿಕೋನದಿಂದ ನೋಡಿದ ಈ ಪುಸ್ತಕ ಅತ್ಯಂತ ಪ್ರಭಾವಿಯಾಗಿತ್ತು.. ಸಾವರ್ಕರ್ ಸ್ವತಃ ನಿರೀಶ್ವರವಾದಿಯಾಗಿದ್ದು, ಭಾರತದ ಭೂಖಂಡದಲ್ಲಿ ಬೇರು ಬಿಟ್ಟು, ಇಲ್ಲಿನ ಜೀವನದ ಪ್ರತಿಯೊಂದು ಅಂಗದಲ್ಲೂ ಹಾಸುಹೊಕ್ಕಾಗಿರುವ , ವಿಶೇಷ ಜೀವನಧರ್ಮ ಎಂದು ಹಿಂದುತ್ವದ ಪರಿಕಲ್ಪನೆಯನ್ನು ಅರ್ಥೈಸಿದ್ದಾರೆಂಬುದನ್ನು ಗಮನಿಸಬೇಕು. ಅವರ ಇತರ ಕೃತಿಗಳೆಂದರೆ “ಹಿಂದೂ ಪದಪಾದಶಾಹಿ” ಮತ್ತು “ನನ್ನ ಅಜೀವ ಸಾಗಾಟ” (My Transportation for Life). ಆಗಲೇ ಭಾರತದಲ್ಲಿ ಧಾರ್ಮಿಕ ಆಧಾರದ ಮೇಲೆ ಬಿರುಕುಗಳು ಗೋಚರವಾಗತೊಡಗಿತ್ತು. “ಮಾಪಿಳ್ಳೆಗಳ ಬಂದ್” (Muslims' Strike) ಎಂಬ ಪುಸ್ತಕದಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಅವರು ಕಂಡ ಬ್ರಿಟಿಷರ ಹಾಗೂ ಮುಸ್ಲಿಮರ ದೌರ್ಜನ್ಯವನ್ನು ಮತ್ತು “ಗಾಂಧೀ ಗೊಂದಲ” (Gandhi's Nonsense), ಎಂಬ ಪುಸ್ತಕದಲ್ಲಿ ಗಾಂಧಿಯವರ ರಾಜಕೀಯ ಧೋರಣೆಗಳ ಬಗ್ಯೆ ಟೀಕೆಯನ್ನೂ ಅವರು ಮಾಡಿದರು. ಈಗಾಗಲೇ ಸಾವರ್ಕರರು ಭಾರತದ ಭವಿಷ್ಯದ ಬಗ್ಯೆ ಗಾಂಧಿಯವರ ಯೋಜನೆಗಳ ಬದ್ಧ ಟೀಕಾಕಾರರಾಗಿ ಹೋಗಿದ್ದರು.
ಅವರ ಬೆಂಬಲಿಗರಷ್ಟೇ ಅಲ್ಲ, ಅವರ ಕೆಲವರು ಟೀಕಾಕಾರರು ಕೂಡಾ, ಮರಾಠಿ ಸಾಹಿತ್ಯದ ಅತ್ಯಂತ ಹೃದಯಸ್ಪರ್ಶೀ ಹಾಗೂ ಸ್ಪೂರ್ತಿದಾಯಕ ಕೃತಿಗಳಲ್ಲಿ ಪರಿಗಣಿಸುವ “ಸಾಗರಾ.... ಪ್ರಾಣ ತಳಮಳಲಾ..” ಮತ್ತು “ ಜಯೋಸ್ತುತೆ” (ಸ್ವಾತಂತ್ರ್ಯದ ಸ್ತುತಿ) ಎಂಬ ಮರಾಠೀ ಗೀತೆಗಳನ್ನು ಅವರು ಬರೆದರು. ಇವು ಜನಪ್ರಿಯವಾಗಿದ್ದು, ಇಂದಿಗೂ ಮಹಾರಾಷ್ಟ್ರದಲ್ಲಿ ಕೇಳಸಿಗುತ್ತವೆ. ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದವನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲುತುಂಡುಗಳಿಂದ ಕೊರೆದರು. ಬಾಕಿ ಸೆರೆಯಾಳುಗಳು ಬಿಡುಗಡೆಯಾಗಿ ಭಾರತಕ್ಕೆ ಬರುವಾಗಿ ತಮ್ಮೊಂದಿಗೆ ತರುವವರೆಗೂ, ಹತ್ತು ಸಾವಿರಕ್ಕೂ ಹೆಚ್ಚಿನ ಪಂಕ್ತಿಗಳನ್ನು ವರ್ಷಾವಧಿ ನೆನಪಿಟ್ಟುಕೊಂಡಿದ್ದರು.
ಹಿಂದಿ ಭಾಷೆಯ ಅನೇಕ ನವ ಪದಪುಂಜಗಳನ್ನು ಹುಟ್ಟು ಹಾಕಿದ ಖ್ಯಾತಿ ಅವರಿಗಿದೆ. ಕೆಲವು ಉದಾಹರಣೆಗಳೆಂದರೆ ದಿಗ್ದರ್ಶಕ (ಸರಿಯಾದ ದಾರಿ ತೋರಿಸುವವನು), ಸಾಪ್ತಾಹಿಕ (ವಾರಕ್ಕೊಮ್ಮೆ ಬರುವಂಥಾದ್ದು , ಪತ್ರಿಕೆ ಇತ್ಯಾದಿ) ಹಾಗೂ ಸಂಸದ್ (ಭಾರತದ ಪಾರ್ಲಿಮೆಂಟ್)
[ಬದಲಾಯಿಸಿ] ಸಮಾಜ ಸೇವಕ
ಹಿಂದೂ ಮಹಾಸಭೆಯ ಮೂಲಕ , ಸಾವರ್ಕರ್ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗಾಗಿ ಬಹಳ ಕಷ್ಟಪಟ್ಟರು ಎಂದು, ಇದು ವಿವಾದಾತ್ಮಕವಾಗಿದ್ದರೂ, ಹೇಳಲಾಗಿದೆ. ಹಿಂದೂ ಹಬ್ಬಗಳ ಆಚರಣೆಯ ಸಂಧರ್ಭಗಳಲ್ಲಿ, ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಸಾವರ್ಕರ್ ಮುಸ್ಲಿಮರ ಹಾಗೂ ಕ್ರೈಸ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದರು ಎಂದೂ ,ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿ , ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಬಿ.ಆರ್.ಅಂಬೇಡ್ಕರರಿಗೆ ಸಹಾಯ ಮಾಡಿದರು ಎಂದೂ ಹೇಳಲಾಗಿದೆ. (ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ನಿಷಿದ್ಧವಾದ ಆ ಕಾಲದಲ್ಲಿ , ಅದರ ವಿರುದ್ಧವಾಗಿ ಮುಂದೆ ನಿಂತು ಪ್ರವೇಶಕ್ಕೆ ದಾರಿ ಮಾಡಿಕೊಟ್ಟ, ಪತಿತ ಪಾವನ ಮಂದಿರವನ್ನು ಇಂದಿಗೂ ರತ್ನಾಗಿರಿಯಲ್ಲಿ ನೋಡಬಹುದು). ಸಾವರ್ಕರರ ಇತರ ವಿಷಯಗಳಂತೆ , ಇದೂ ಕೂಡಾ ವಿವಾದಾಸ್ಪದವಾಗಿದ್ದು, ಕೆಳ ವರ್ಗಗಳನ್ನು ಪ್ರತಿನಿಧಿಸುವ ರಾಜಕೀಯ ಪಂಗಡಗಳು ಇವನ್ನು ಪ್ರಶ್ನಿಸಿವೆ. ಹಿಂದಿಯನ್ನು ಮಾತೃಭಾಷೆಯಾಗಿ ಉಪಯೋಗಿಸಬೇಕೆಂದೂ, ದೇವನಾಗರಿ ಲಿಪಿಯನ್ನು ಮುದ್ರಣಕ್ಕೆ ಸಹಾಯವಾಗುವಂತೆ ಸುಧಾರಿಸಬೇಕೆಂದೂ ಅವರು ಕರೆ ಕೊಟ್ಟಿದ್ದರು.
[ಬದಲಾಯಿಸಿ] ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗ
ಸ್ವಾತಂತ್ರ್ಯ ಬರುವ ಹಾಗೂ ಬಂದ ನಂತರದ ಅವಧಿಯಲ್ಲಿ, ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಆಗಬೇಕಾಗಿದ್ದ ಆಸ್ತಿ ವಿಭಜನೆಯ ವಿಷಯದಲ್ಲಿ ಮಹಾತ್ಮಾ ಗಾಂಧಿಯವರು ತೆಗೆದುಕೊಂಡ ನಿಲುವು ಭಾರತದಾದ್ಯಂತ ತೀವ್ರ ವಿವಾದವನ್ನು ಸೃಷ್ಟಿಸಿತು. ಈಗಾಗಲೇ ಗಾಂಧಿಯವರ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದ ಸಾವರ್ಕರ್ , ಗಾಂಧಿಯವರ ನಿಲುವನ್ನು ತೀವ್ರವಾಗಿ ವಿರೋಧಿಸಿದರು. ಮುಂದೆ ನಾಥೂರಾಮ್ ಗೋಡ್ಸೆ ಗಾಂಧಿಯವರಿಗೆ ಗುಂಡಿಕ್ಕಿದಾಗ, ಈ ಕಾರಸ್ಥಾನದ ಮುಖ್ಯಶಿಲ್ಪಿ ಸಾವರ್ಕರ್ ಎಂಬ ಆರೋಪಗಳು ಬಹುವಾಗಿ ಕೇಳಿಬಂದವು. ಗೋಡ್ಸೆ ಹಿಂದೂ ಮಹಾಸಭೆಯ ಸದಸ್ಯರಾಗಿದ್ಧು, ಸಾವರ್ಕರ್ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದ ಮಹಾಸಭೆಯ ಸಭೆಗಳಲ್ಲಿ ಆತ ಭಾಗವಹಿಸುತ್ತಿದ್ದದ್ದೂ,. ಗಾಂಧಿ ಹತ್ಯೆ ಪ್ರಕರಣದಲ್ಲಿ ಮುಖ್ಯ ಆಪಾದಿತರಾಗಿದ್ದ ಗೋಡ್ಸೆ ಹಾಗೂ ನಾರಾಯಣ ಆಪ್ಟೆ ಸಾವರ್ಕರರಿಗೆ ಪರಿಚಿತರಾಗಿದ್ದು, ಅವರನ್ನು ಆಗಾಗ ಭೇಟಿಯಾಗುತ್ತಿದ್ದದ್ದೂ, ಈ ಆರೋಪಗಳಿಗೆ ಮೂಲವಾಗಿತ್ತು. ಗಾಂಧಿ ಹತ್ಯೆಗೆ ಹೋರಟ ಗೋಡ್ಸೆಗೆ ಸಾವರ್ಕರ್ “ ಯಶಸ್ವಿಯಾಗಿ ಬಾ” ಎಂದು ಹರಸಿದರು ಎಂಬ ಊಹಾಪೋಹ , ಗೋಡ್ಸೆ ಇದನ್ನು ಮುಂದೆ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸಂಪೂರ್ಣವಾಗಿ ಅಲ್ಲಗೆಳೆದರೂ, ಕೇಳಿಬಂತು. ಗಾಂಧಿ ಹತ್ಯೆಯ ನಂತರ ದೊಂಬಿ ಗುಂಪುಗಳು ಮುಂಬಯಿಯ ಸಾವರ್ಕರ್ ಮನೆಯ ಮೇಲೆ ( ಅವರು ರತ್ನಾಗಿರಿಯಿಂದ ಮನೆಯನ್ನು ಮುಂಬಯಿಗೆ ಬದಲಾಯಿಸಿದ್ದರು) ಕಲ್ಲುತೂರಾಟ ನಡೆಸಿದರು. ಭಾರತ ಸರ್ಕಾರ ಸಾವರ್ಕರರನ್ನು ಹತ್ಯೆ ಸಂಬಂಧದ ಆರೋಪದ ಮೇಲೆ ಬಂಧಿಸಿದರೂ, ಸರ್ವೋಚ್ಛ ನ್ಯಾಯಾಲಯವು, ಸಾಕ್ಷ್ಯಾಧಾರಗಳಿಲ್ಲದ್ದರಿಂದ, ಅವರನ್ನು ಬಿಡುಗಡೆ ಮಾಡಿತು.
“ಸಾಕ್ಷ್ಯಾಧಾರಗಳಿಲ್ಲದ್ದರಿಂದ ಸಾವರ್ಕರರನ್ನು ನಿರ್ದೋಷಿ ಎಂದು ಘೋಷಿಸಿ ಬಿಡುಗಡೆ ಮಾಡಲಾಯಿತು” ಎಂದು ಆಗಾಗ ಹೇಳಲಾಗುತ್ತಿದೆ. ಆದರೂ, ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಆತ್ಮ ಚರಣರು , ತಪ್ಪೊಪ್ಪಿಕೊಂಡ ( approver) ದಿಗಂಬರ ಬಡಗೆಯ ಸಾಕ್ಷ್ಯ ಈ ವಿಷಯದಲ್ಲಿ “ನೇರವೂ, ನಿಚ್ಚಳವೂ ಆಗಿತ್ತು” ಎಂದು ಕಂಡುಕೊಂಡಿದ್ದಾರೆ. ಆದರೆ ಈ ವಿಷಯವನ್ನು ಸಮರ್ಥಿಸಲು 1948-49ರ ವಿಚಾರಣೆಯ ಕಾಲದಲ್ಲಿ ಸ್ವತಂತ್ರ ಅಭಿಪ್ರಾಯ ಲಭ್ಯವಿರಲಿಲ್ಲ. ಅದು ಲಭ್ಯವಾದದ್ದು 1966ರಲ್ಲಿ ಸಾವರ್ಕರ್ ತೀರಿಕೊಂಡ ನಂತರ. ಅವರ ಸೆಕ್ರೆಟರಿ ಗಜಾನನ ವಿಷ್ಣು ದಾಮ್ಲೆ ಹಾಗೂ ಅಂಗರಕ್ಷಕ ಅಪ್ಪಾ ರಾಮಚಂದ್ರ ಕಾಸರ , ನ್ಯಾಯಮೂರ್ತಿ ಕಪೂರ್ ರ ಮುಂದೆ “ಗೋಡ್ಸೆ ಮತ್ತು ಆಪ್ಟೆ , ಸಾವರ್ಕರರನ್ನು ಜನವರಿ 17ರಂದು ಭೇಟಿಯಾಗಿದ್ದಷ್ಟೇ ಅಲ್ಲ, ದೆಹಲಿಯಿಂದ ಹಿಂತಿರುಗಿದ ನಂತರ , ಜನವರಿ 23 / 24 ರಂದು ಮತ್ತೆ ಭೇಟಿಯಾಗಲು ಬಂದಿದ್ದರು” ಎಂದು ಹೇಳಿಕೆ ಕೊಟ್ಟರು. ಇದಾದ ಕೆಲವೇ ದಿನಗಳಲ್ಲಿ ಗಾಂಧಿಯವರ ಹತ್ಯೆಯಾಯಿತು. 'Frontline' ಪತ್ರಿಕೆಯ ಎ.ಜಿ.ನೂರಾನಿ ಈ ವಿಷಯದಲ್ಲಿ ವಿವರವಾದ ತನಿಖಾತ್ಮಕ ವರದಿಗಳನ್ನು ಮಾಡಿದ್ದಾರೆ.
ಸಾವರ್ಕರ್ ಮರಣದ ನಂತರ, 1967ರಲ್ಲಿ ಪ್ರಕಟವಾದ , “ಗಾಂಧಿ ಹತ್ಯಾ ಆಣಿ ಮಿ” ( ಗಾಂಧಿ ಹತ್ಯೆ ಮತ್ತು ನಾನು) ಎಂಬ ಮರಾಠಿ ಪುಸ್ತಕದಲ್ಲಿ ಅವರ ತಮ್ಮ ಗೋಪಾಲ್, ಈ ಗಾಢ ಸಂಬಂಧದ ಬಗ್ಯೆ ಬೆಳಕು ಚೆಲ್ಲುತ್ತಾರೆ.. ಈ ವಿಷಯದ ತನಿಖೆಯ ಜವಾಬ್ದಾರಿ ಹೊತ್ತಿದ್ದ ನ್ಯಾಯಮೂರ್ತಿ ಕಪೂರ್ ಆಯೋಗ “ (ಗಾಂಧಿ) ಹತ್ಯೆಯ ಷಡ್ಯಂತ್ರದಲ್ಲಿ ಸಾವರ್ಕರ್ ಮತ್ತು ಇತರರ ಪಾತ್ರದ ಹೊರತಾದ ಎಲ್ಲಾ ವಿಚಾರಧಾರೆಗಳನ್ನೂ ಈ ಎಲ್ಲ ತಥ್ಯಗಳು ನಾಶ ಮಾಡುತ್ತವೆ” ಎಂದು ಅಭಿಪ್ರಾಯ ಪಟ್ಟರು.
[ಬದಲಾಯಿಸಿ] ಆರೋಪಿಗಳ ಪಟ್ಟಿ
ಮಹಾತ್ಮಾ ಗಾಂಧಿ ಹತ್ಯೆ ಪ್ರಯತ್ನ ಮತ್ತು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾದವರು
ಹತ್ಯೆ ಪ್ರಯತ್ನದ ಆರೋಪಿಗಳು :
- ನಾಥೂರಾಮ್ ವಿನಾಯಕ ಗೋಡ್ಸೆ
- ನಾರಾಯಣ ದತ್ತಾತ್ರೇಯ ಆಪ್ಟೆ
- ವಿಷ್ಣು ರಾಮಕೃಷ್ಣ ಕರ್ಕರೆ
- ಮದನಲಾಲ್ ಕಶ್ಮೀರೀಲಾಲ್ ಪಾಹ್ವಾ
- ಶಂಕರ್ ಕಿಶ್ಟೈಯ್ಯ
- ಗೋಪಾಲ ವಿನಾಯಕ ಗೋಡ್ಸೆ
- ದಿಗಂಬರ ರಾಮಚಂದ್ರ ಬಡಗೆ
- ವಿನಾಯಕ ದಾಮೋದರ ಸಾವರ್ಕರ್
- ದತ್ತಾತ್ರೇಯ ಸದಾಶಿವ ಪರಚುರೆ
- ಗಂಗಾಧರ ದಂಡವತೆ
- ಗಂಗಾಧರ ಜಾಧವ್
- ಸೂರ್ಯದೇವ ಶರ್ಮ
[ಬದಲಾಯಿಸಿ] ಹಿಂದುತ್ವದ ಬಗ್ಯೆ
ಹಿಂದುತ್ವದ ಪರಿಕಲ್ಪನೆಯನ್ನು ಸಾವರ್ಕರ್ ಮೊಟ್ಟಮೊದಲು ಜಾಹೀರು ಮಾಡಿ, ಅದರ ವಿಷಯವಾಗಿ ಬಹಳಷ್ಟು ಬರೆದರು. ಸಾವರ್ಕರ್ "ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು" ಎಂದು ವ್ಯಾಖ್ಯಿಸುತ್ತಾರೆ.
[ಬದಲಾಯಿಸಿ] ಮತ್ತಷ್ಟು ಮಾಹಿತಿ ಪಡೆಯಲು
- ಆತ್ಮಾಹುತಿ - ಸಾವರ್ಕರರ ಜೀವನದ ಕುರಿತು ಕನ್ನಡದಲ್ಲಿ ಕಾದಂಬರಿ.
- AG Noorani, Savarkar and Hindutva: The Godse Connection, LeftWord, New Delhi, 2002, paperback, 159 pages, ISBN 8187496282; hardcover, Manohar Publishers, 2003, ISBN 8187496282
- Vinayak Damodar Savarkar, Savarkar Samagra: Complete Works of Vinayak Damodar Savarkar in 10 volumes, ISBN 8173153310