ವಿ.ಸೀತಾರಾಮಯ್ಯ
From Wikipedia
ವಿ.ಸೀ. ಎಂದೆ ಖ್ಯಾತರಾದ ಶ್ರೀ ವಿ.ಸೀತಾರಾಮಯ್ಯನವರು ೧೮೯೯ರ ಅಕ್ಟೋಬರ ೨ರಂದು ಬೆಂಗಳೂರು ಜಿಲ್ಲೆಯ ಬೂದಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ, ತಾಯಿ ದೊಡ್ಡವೆಂಕಟಮ್ಮ. ಮೈಸೂರು ಮಹಾರಾಜಾ ಕಾಲೇಜಿನಿಂದ ೧೯೨೦ರಲ್ಲಿ ಬಿ.ಏ. ಪದವಿಯನ್ನೂ, ೧೯೨೨ರಲ್ಲಿ ಎಮ್.ಏ. ಪದವಿಯನ್ನೂ ಪಡೆದರು. ೧೯೨೩ ರಿಂದ ೧೯೨೮ ರವರೆಗೆ ಮೈಸೂರಿನ ಶಾರದಾವಿಲಾಸ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದರು. ೧೯೨೮ ರಿಂದ ೧೯೫೫ ರವರೆಗೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೫೬ರಿಂದ ೧೯೫೮ರ ವರೆಗೆ ಬೆಂಗಳೂರು ಆಕಾಶವಾಣಿ ನಿಲಯದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. ೧೯೬೪ರಿಂದ ೧೯೬೮ರವರೆಗೆ ಹೊನ್ನಾವರ ಕಾಲೇಜಿನ ಪ್ರಾಂಶುಪಾಲರಾಗಿದ್ದರು.
ವಿ.ಸೀ. ಅವರ ಆರು ಕವನಸಂಗ್ರಹಗಳು ಈ ರೀತಿಯಾಗಿವೆ: ದೀಪಗಳು, ಗೀತಗಳು, ನೆಳಲು-ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆ ಪಾಡು, ಅರಲು-ಬರಲು. (ಅರಲು-ಬರಲು ಕೃತಿಗೆ ೧೯೭೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.)
ವಿ.ಸೀ. ಅವರ ಲಲಿತ ಪ್ರಬಂಧಗಳ ಸಂಕಲನಗಳು: ಬೆಳದಿಂಗಳು, ಸೀಕರಣೆ
ವಿ.ಸೀ. ಅವರ ನಾಟಕಗಳು: ಆಗ್ರಹ, ಸೊಹ್ರಾಬ್ ರುಸ್ತುಮ್, ಶ್ರೀಶೈಲ ಶಿಖರ ( ಈ ನಾಟಕವು ‘ ಪಾಪ ಪುಣ್ಯ’ ಹೆಸರಿನ ಚಲನಚಿತ್ರವಾಗಿದೆ.)
ವಿ.ಸೀ ಅವರ ಸೃಜನಾತ್ಮಕ ರಚನೆಗಳು: ಮಹನೀಯರು, ಕಾಲೇಜ ದಿನಗಳು, ಅಶ್ವತ್ಥಾಮನ್, ಕವಿ ಕಾವ್ಯ ದೃಷ್ಟಿ, ಹಣಪ್ರಪಂಚ, ಸಾಹಿತ್ಯ ಮತ್ತು ಮೌಲ್ಯ, ಸಾಹಿತ್ಯಾವಲೋಕನ, ಕಲಾನುಭವ (ಇದು ವಿ.ಸೀ.ಯವರ ಕೆಲವು ಉಪನ್ಯಾಸಗಳ ಸಂಗ್ರಹ).
ವಿ.ಸೀ. ಅವರ ಅನುವಾದಿತ ಕೃತಿಗಳು: ಪಿಗ್ಮ್ಯಾಲಿಯನ್, ಮೇಜರ ಬಾರ್ಬರ, ಬಂಗಾಳಿ ಸಾಹಿತ್ಯ ಚರಿತ್ರೆ. ವಿ.ಸೀ. ಅವರ ಸಂಪಾದಿತ ಕೃತಿಗಳು: ಕವಿರಾಜಮಾರ್ಗ, ವಡ್ಡಾರಾಧನೆ, ವ್ಯಾಕರಣಗಳು, ಯಕ್ಷಗಾನ, ಜನಪದ ಸಾಹಿತ್ಯ.
೧೯೫೪ ರಲ್ಲಿ ಕುಮಟೆಯಲ್ಲಿ ಜರುಗಿದ ೩೬ ನೆಯ ಸಾಹಿತ್ಯಸಮ್ಮೇಳನಕ್ಕೆ ವಿ.ಸೀ.ಯವರು ಅಧ್ಯಕ್ಷರಾಗಿದ್ದರು.