ಹಂ.ಪ.ನಾಗರಾಜಯ್ಯ
From Wikipedia
ಹಂ.ಪ.ನಾಗರಾಜಯ್ಯ - ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಮತ್ತು ಭಾಷಾ ಶಾಸ್ತ್ರಜ್ಞರು.ತಮ್ಮ ವಿದ್ಯಾರ್ಥಿವೃಂದಕ್ಕೆ ಹಾಗೂ ಸಾಹಿತ್ಯಿಕ ವಲಯದಲ್ಲಿ 'ಹಂಪನಾ' ಎಂದೇ ಸುಪರಿಚಿತರು.
ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಜೈನ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಒಲವು ಹೊಂದಿದ್ದಾರೆ. ಪ್ರಸಿದ್ಧ ಮಹಿಳಾ ಸಾಹಿತಿ ಕಮಲಾ ಹಂಪನಾ ಇವರ ಪತ್ನಿಯಾಗಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಬಾಲ್ಯ
ಗ್ರಾಮಲೆಕ್ಕಿಗರಾಗಿದ್ದ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮ ಇವರ ಮಗನಾಗಿ ಅಕ್ಟೋಬರ್ ೭,೧೯೩೬ರಂದು ಕೋಲಾರದ ಗೌರಿಬಿದನೂರು ತಾಲ್ಲೂಕಿನ 'ಹಂಪಸಂದ್ರ'ದಲ್ಲಿ ಜನನ.ಮನೆಯಲ್ಲಿ ಆಗಾಗ ಪ್ರವಚನಗಳನ್ನು ಏರ್ಪಡಿಸುತ್ತಿದ್ದ ವಿದ್ವತ್ಪೂರ್ಣ ತಂದೆಯ ಪ್ರಭಾವ ಅಪಾರ.
[ಬದಲಾಯಿಸಿ] ವಿದ್ಯಾಭ್ಯಾಸ,ವಿವಾಹ
ಮಂಡ್ಯ,ಗೌರಿಬಿದನೂರು,ಮಧುಗಿರಿ,ತುಮಕೂರುಗಳಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿ,ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಮತ್ತು ಎಂ.ಎ.ವ್ಯಾಸಂಗಕ್ಕೆ ಸೇರಿದರು.ಇಲ್ಲಿ ಓದುವಾಗ ಸಹಪಾಠಿಯಾಗಿದ್ದ ಸಿ.ಆರ್.ಕಮಲಮ್ಮನವರೊಂದಿಗಿನ ಪರಿಚಯ,ಪ್ರೇಮಕ್ಕೆ ತಿರುಗಿ,ಮದುವೆಯಲ್ಲಿ ಪರ್ಯವಸಾನವಾಯಿತು.ಸ್ವತಃ ಕಮಲಾ ಹಂಪನಾ ಕೂಡಾ ಪ್ರಸಿದ್ಧ ಸಾಹಿತಿ.ಈ ದಂಪತಿಗಳಿಗೆ ಆರತಿ,ರಾಜ್ಯಶ್ರೀ ಮತ್ತು ಹರ್ಷವರ್ಧನ ಎಂಬ ಮೂರು ಮಕ್ಕಳು.
[ಬದಲಾಯಿಸಿ] ಪ್ರಭಾವ,ಪ್ರೇರಣೆ
ಕುವೆಂಪು,ತೀನಂಶ್ರೀ,ಡಿ.ಎಲ್.ನರಸಿಂಹಾಚಾರ್,ಎಸ್.ವಿ.ಪರಮೇಶ್ವರಭಟ್ಟ,ಕೆ.ವೆಂಕಟರಾಮಪ್ಪ,ದೇಜಗೌ ಮುಂತಾದ ಸಾಹಿತ್ಯಿಕ ದಿಗ್ಗಜಗಳು ಅನೇಕ ರೀತಿಯಲ್ಲಿ ಸ್ಫೂರ್ತಿಯಾಗಿದ್ದಾರೆ.ಕುವೆಂಪುರವರ ಕ್ರಿಯಾಶೀಲ ಬರವಣಿಗೆ,ತೀನಂಶ್ರೀಯವರ ಭಾಷಾವಿಜ್ಞಾನದ ಪ್ರೌಢಿಮೆ ದ್ರಾವಿಡ ಭಾಷಾ ವಿಜ್ಞಾನ ಎಂಬ ಕೃತಿರಚನೆಗೆ ಪ್ರೇರೇಪಣೆಯಾಯಿತು.ಈ ಕೃತಿಯನ್ನು ತಮ್ಮ ಗುರುಗಳಾದ ತೀನಂಶ್ರೀಯವರಿಗೆ ಅರ್ಪಿಸಿದ್ದಾರೆ.ಈ ಕೃತಿ ಕರ್ನಾಟಕದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ.
[ಬದಲಾಯಿಸಿ] ಉದ್ಯೋಗ
೧೯೫೯ರಿಂದ ೧೯೬೪ರವರೆಗೆ ಮೈಸೂರಿನ ಮಹಾರಾಣಿ ಕಾಲೇಜು,ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮತ್ತು ಮಂಡ್ಯ,ದಾವಣಗೆರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು.ಬೆಂಗಳೂರಿಗೆ ವರ್ಗವಾದ ನಂತರ ೧೯೬೯ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದವರು,ಅಲ್ಲೇ ಕಲಾವಿಭಾಗದ ಮುಖ್ಯಸ್ಥರಾಗಿ,ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ೧೯೯೬ರಲ್ಲಿ ನಿವೃತ್ತರಾದರು.
೧೯೬೮-೭೪ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ,೧೯೭೮ರಿಂದ ೮ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
[ಬದಲಾಯಿಸಿ] ಕೃತಿಗಳು
ಅವರ ಕೃತಿಗಳಲ್ಲಿ ಬಹುಪಾಲು ಕನ್ನಡದಲ್ಲಿ ರಚಿತವಾಗಿದ್ದು,೧೧ ಕೃತಿಗಳು ಇಂಗ್ಲಿಷಿನಲ್ಲಿವೆ.ಇವುಗಳ ವಸ್ತು ಇತಿಹಾಸ,ಸಂಸ್ಕೃತಿ,ಕಲೆ,ವಾಸ್ತುಶಿಲ್ಪ ಹಾಗೂ ಜೈನಧರ್ಮಕ್ಕೆ ಸಂಬಂಧಿಸಿದಂತೆ ಇವೆ.ಇಂಗ್ಲಿಷಿನ 'ಬಾಹುಬಲಿ ಮತ್ತು ಬಾದಾಮಿ ಚಾಲುಕ್ಯರು'ಎಂಬ ಕೃತಿ ಶ್ರವಣಬೆಳಗೊಳದ ಜೈನಮಠದ ಪ್ರಕಟಣೆಯಾಗಿದ್ದು,ಲಂಡನ್ ವಿಶ್ವವಿದ್ಯಾನಿಲಯದಿಂದ ಬಿಡುಗಡೆಯಾಗಿದೆ.ಪ್ರಸ್ತುತ ಲಂಡನ್ ವಿಶ್ವವಿದ್ಯಾನಿಲಯ ಜೈನಧರ್ಮದ ಬಗ್ಗೆ ಅಧ್ಯಯನ ಮಾಡಲು ತೆರೆದಿರುವ ವಿಭಾಗದಲ್ಲಿ 'ಹಂಪನಾ' ಕೂಡಾ ಸದಸ್ಯರಾಗಿದ್ದಾರೆ.