ಹಾ.ಮಾ.ನಾಯಕ
From Wikipedia
ಪರಿವಿಡಿ |
[ಬದಲಾಯಿಸಿ] ಜೀವನ
ಹಾ.ಮಾ.ನಾಯಕ (೧೯೩೧-೨೦೦೦) - ಕನ್ನಡದ ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು. ಹಾಮಾನಾ ಎಂದೇ ಪ್ರಸಿಧ್ಧರಾಗಿದ್ದ ಹಾ.ಮಾ.ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ೧೯೩೧ರ ಸೆಪ್ಟೆಂಬರ್ ೧೨ರಂದು ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಮ್ಮ.
[ಬದಲಾಯಿಸಿ] ವಿದ್ಯಾಭ್ಯಾಸ
ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾಥಮಿಕ,ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದ ನಂತರ ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದು, ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸೇರಿದರು.
ಮೈಸೂರು ವಿಶ್ವವಿದ್ಯಾಲಯದ ವ್ಯಾಸಂಗ ವೇತನ ಪಡೆದು, ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞ್ನಾನದಲ್ಲಿ ಎಂ.ಎ. ಸ್ನಾತಕೋತ್ತರ ಪಡೆದರು.ಫುಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, ಕನ್ನಡ ಸಾಹಿತ್ಯ ಮತ್ತು ಅಡುಭಾಷೆ ಎಂಬ ಮಹಾಪ್ರಬಂಧವನ್ನು ಸಾದರ ಪಡಿಸಿ, ಅಮೆರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು.
[ಬದಲಾಯಿಸಿ] ಸಾಧನೆ
ಹದಿನಾರು ವರ್ಷಗಳ ಕಾಲ ಮೈಸೂರು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. ೧೯೮೪ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
ಸಣ್ಣ ಕಥೆ, ಪ್ರಬಂಧ, ವಿಮರ್ಶೆ, ವ್ಯಕ್ತಿಚಿತ್ರಗಳು,ಜಾನಪದ, ಅನುವಾದ, ಅಂಕಣ ಬರಹಗಳನ್ನು ರಚಿಸಿದ್ದಾರೆ.೧೯೮೫ರಲ್ಲಿ ಬೀದರ್ ನಲ್ಲಿ ನಡೆದ ಐವತ್ತೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದರು. ೧೯೮೨ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಹಾಮಾನಾಯಕರ ಸಂಪ್ರತಿ ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ.ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.
[ಬದಲಾಯಿಸಿ] ಕೃತಿಗಳು
- ಬಾಳ್ನೋಟಗಳು
- ಕನ್ನಡ ಸಾಹಿತ್ಯ ಚರಿತ್ರೆ (೫ ಸಂಪುಟಗಳು)
- ಸಂಪ್ರತಿ (ಅಂಕಣ ಬರಹಗಳು)
- ಸಂಚಯ(ಅಂಕಣ ಬರಹಗಳು)
- ಸಂಪದ(ಅಂಕಣ ಬರಹಗಳು)
- ಸೂಲಂಗಿ(ಅಂಕಣ ಬರಹಗಳು)
- ಸಂಪುಟ(ಅಂಕಣ ಬರಹಗಳು)
- ನಮ್ಮ ಮನೆಯ ದೀಪ (ಪ್ರಬಂಧಗಳು)
- ಹಾವು ಮತ್ತು ಹೆಣ್ಣು (ಕತೆಗಳು)
- ವಿನಾಯಕ ವಾಙ್ಮಯ
- ದೇಜಗೌ ಮತ್ತು ವ್ಯಕ್ತಿ ಸಾಹಿತ್ಯ
- ಇಂಡಿಯಾ ದೇಶದ ಸಾರ್ವಜನಿಕ ಆಯವ್ಯಯ
- ಗೊರೂರು ಗೌರವ ಗ್ರಂಥ
- ಅಕ್ಕ ಮಹಾದೇವಿ
- ಬಸವ ಪುರುಷ
- ಚಿನ್ನದ ಗರಿ
- ಎ.ಆರ್.ಕೃ.ಜೀವನ ಸಾಧನೆ
- ಮುದ್ದಣ
- ರವೀಂದ್ರನಾಥ ಠಾಕೋರ್
- ಜಾನಪದ ಗ್ರಂಥಸೂಚಿ
- ಬಿಡುಗಡೆಯ ಬಳ್ಳಿ
- ಕಾವ್ಯ ಸಂಚಯ
- ವಿಜ್ಞಾನ ಸಾಹಿತ್ಯ ನಿರ್ಮಾಣ
- ಗದ್ಯ ವಿಹಾರ (೧ ಮತ್ತು ೨)
[ಬದಲಾಯಿಸಿ] ನಿಧನ
ಹಾಮಾನಾ ಅವರು ಹೃದಯಾಘಾತದಿಂದ ೨೦೦೦ನೆಯ ಇಸವಿ, ನವೆಂಬರ್ ೧೧ರಂದು ಮೈಸೂರಿನಲ್ಲಿ ನಿಧನಹೊಂದಿದರು. ೨೦೦೪ರಲ್ಲಿ ಹಾಮಾನಾ ಪತ್ನಿ ಯಶೋದಮ್ಮ ಅವರು , ಬೆಂಕಿ ಹಚ್ಹಿಕೊಂಡು, ಆತ್ಮಹತ್ಯೆ ಮಾಡಿಕೊಂಡರೆಂದು ವರದಿಯಾಗಿತ್ತು.