ಅಮರ ಚಿತ್ರ ಕಥೆ
From Wikipedia
ಅಮರಚಿತ್ರಕಥೆ ಹಿಂದೂ ಪುರಾಣ, ಭಾರತೀಯ ಇತಿಹಾಸ, ಜಾನಪದ ಮತ್ತು ಸಂಸ್ಕೃತಿಯಿಂದ ಕಥೆಗಳನ್ನು ಸಚಿತ್ರ ರೂಪದಲ್ಲಿ ಹೇಳುವ ಭಾರತದ ಚಿತ್ರಕಥೆ (ಕಾಮಿಕ್ಸ್) ಪುಸ್ತಕಗಳ ಸರಣಿ .
ಪರಿವಿಡಿ |
[ಬದಲಾಯಿಸಿ] ತಂಡ
ಕಮಲಾ ಚಂದ್ರಕಾಂತ , ಮಾರ್ಗಿ ಶಾಸ್ತ್ರಿ , ಸುಬ್ಬರಾವ್ ಮತ್ತು ಸಿ. ಆರ್, ಶರ್ಮಾರಂತಹ ಬರಹಗಾರರು ಅಮರಚಿತ್ರಕಥಾದ ಸೃಜನಶೀಲ ತಂಡವನ್ನು ಸೇರಿದ್ದಾರೆ . ಪೈ ಅವರು ಸಂಪಾದಕರ ಹೊಣೆ ಹೊತ್ತಿರುವುದಲ್ಲದೆ ಬಹುತೇಕ ಲೇಖನಗಳ ಸಹಲೇಖಕರೂ ಆಗಿದ್ದಾರೆ . ವಾಯೀರ್ಕರ್ ಅವರನ್ನು ಬಿಟ್ಟರೆ ದಿಲೀಪ್ ಕದಂ, ಸೌರೇನ್ ರಾಯ್, ಸಿ. ಡಿ. ರಾಣೆ, ಜೆಫ್ರಿ ಫೌಲರ್ ಮತ್ತು ಪ್ರತಾಪ್ ಮಲಿಕ್ ಅವರುಗಳು ಪ್ರಮುಖ ಚಿತ್ರಕಾರರು .
[ಬದಲಾಯಿಸಿ] ಕಾಮಿಕ್ಸ್
ಅಮರ ಚಿತ್ರಕಥೆಯ ಮೊದಲ ಮುದ್ರಣಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಸಂಪೂರ್ಣವಾಗಿ ಬಣ್ಣಗಳದ್ದಾಗಿರಲಿಲ್ಲ. ಪ್ಯಾನೆಲ್‍ಗಳನ್ನು ಹಳದಿ, ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಮುದ್ರಿಸಲಾಗಿತ್ತು. ಆದರೆ ನಂತರದ ಸಂಚಿಕೆಗಳು ಸಂಪೂರ್ಣವಾಗಿ ಬಣ್ಣದ್ದಾದವು . ಸರಳವಾಗಿ ಮತ್ತು ಮನೋರಂಜಕವಾಗಿ ಕಥೆಯನ್ನು ಹೇಳುವುದರತ್ತ ಒತ್ತು ಕೊಟ್ಟು ೩೦ ಪುಟಗಳ ಪುಸ್ತಕಗಳಾಗಿ ಎಲ್ಲ ಅಮರಚಿತ್ರಕಥೆ ಪುಸ್ತಕಗಳು ತಿಂಗಳಿಗೊಮ್ಮೆ ( ನಂತರ ೧೫ ದಿನಕ್ಕೊಮ್ಮೆ) ಪ್ರಕಟವಾಗತೊಡಗಿದವು. ಕೃಷ್ಣನ ಕಥೆಯನ್ನು ಆಧರಿಸಿದ ೪೨ ಸಂಚಿಕೆಗಳ ಮಹಾಭಾರತ ಮತ್ತು ಒಂಬತ್ತು ಸಂಪುಟಗಳ ಭಾಗವತಪುರಾಣ ಇವು ಧಾರಾವಾಹಿಯಾಗಿ ಪ್ರಕಟಣೆಯ ಪ್ರಯತ್ನಗಳಾಗಿದ್ದವು (ಈ ಎರಡೂ ಕಥೆಗಳ ಪ್ರತ್ಯೇಕ ಸಂಚಿಕೆಗಳು ಮೊದಲೇ ಪ್ರಕಟವಾಗಿದ್ದವು).
ಆಗಾಗ ೯೦ ಪುಟಗಳ "ಬಂಪರ್" ಸಂಚಿಕೆಗಳೂ ಇದ್ದವು . ಬಹುತೇಕ ಅವುಗಳು ಪ್ರತ್ಯೇಕ ಸಂಚಿಕೆಗಳಿಂದ ಸಂಗ್ರಹಿಸಿದ ಒಂದೇ ತರಹದ ಕಥೆಗಳಾಗಿದ್ದವು( ಉದಾ: ಹಿತೋಪದೇಶದಿಂದ ಕೋತಿಗಳ ಕಥೆಗಳು, ಬೀರಬಲ್ ನ ಕಥೆಗಳು) . ಮತ್ತೆ ಕೆಲವು ದೀರ್ಘವಾದ ಕಥೆಗಳಾಗಿದ್ದವು ( ಉದಾ: ಜೀಸಸ್ ಕ್ರಿಸ್ತ, ರಾಮನ ಕಥೆ). ಪೌರಾಣಿಕ ಕಥೆಗಳು ಹೆಚ್ಚು ಜನಪ್ರಿಯವಾಗುತ್ತಿದ್ದಂತೆ ತಂಡವು ಇತಿಹಾಸದ ಕಥೆಗಳನ್ನು , ಬೇರೆ ಬೇರೆ ಪ್ರದೇಶಗಳಿಗೆ , ಧರ್ಮಗಳಿಗೆ ಸೇರಿದ ಸ್ತ್ರೀಪುರುಷರ ಕಥೆಗಳನ್ನು, ಸಂಸ್ಕೃತ ಮತ್ತು ಪ್ರಾದೇಶಿಕ ಭಾಷೆಗಳ ಪ್ರಸಿದ್ಧ ಕೃತಿಗಳನ್ನಾಧರಿಸಿದ ಕಥೆಗಳನ್ನು ಪ್ರಕಟಿಸಲು ಆರಂಬಿಸಿತು . ಕಾಮಿಕ್ಸನ ಸತತ ಜನಪ್ರಿಯತೆಯಿಂದಾಗಿ ಮರುಮುದ್ರಣಗಳು ಆಗಾಗ ಪ್ರಕಟವಾದವು ಅದರಿಂದಾಗಿ ಹಳೆಯ ಸಂಚಿಕೆಗಳು ಎಪ್ಪತ್ತರ ಮತ್ತು ಎಂಬತ್ತರ ದಶಕಗಳುದ್ದಕ್ಕೂ ಮುದ್ರಣದಲ್ಲಿದ್ದವು . ತನ್ನ ಜನಪ್ರಿಯತೆಯ ತುತ್ತತುದಿಯಲ್ಲಿ ಅಂದರೆ ಎಂಬತ್ತರ ದಶಕದ ಮಧ್ಯಭಾಗದಲ್ಲಿ ಅವು ಬೆಂಗಾಲಿ , ಮರಾಠಿ , ಆಸ್ಸಾಮೀ , ಗುಜರಾತಿ , ಪಂಜಾಬೀ , ಕನ್ನಡ , ತಮಿಳು ಮತ್ತು ಉರ್ದು ಭಾಷೆಗಳಿಗೆ ಅನುವಾದವಾಗಿ ಪ್ರತಿ ಪಕ್ಷಕ್ಕೂ ( ಅರ್ಧ ತಿಂಗಳಿಗೂ ) ಹತ್ತು ಲಕ್ಷದಷ್ಟು ಸಂಖ್ಯೆಯಲ್ಲಿ ಮಾರಾಟವಾದವು. ಕೆಲವು ಶೀರ್ಷಿಕೆಗಳು ಫ್ರೆಂಚ್, ಸ್ಪ್ಯಾನಿಶ್, ಜರ್ಮನ್, ಸ್ವಾಹಿಲಿ, ಫಿಜಿ, ಬಹಾಸ ಮತ್ತು ಸೆರ್ಬೊ-ಕ್ರೋಟ್ ಭಾಷೆಗಳಿಗೂ ಅನುವಾದವಾದವು .
ತೊಂಬತ್ತರ ದಶಕದ ಮಧ್ಯದ ಹೊತ್ತಿಗೆ ಮೂಲದ ಕಾಮಿಕ್ಸುಗಳೂ ಗಟ್ಟಿಮುಟ್ಟಾದ ಹೊದಿಕೆಗಳನ್ನು ಮತ್ತು ಉತ್ತಮ ಬಣ್ಣಗಳ ಮುದ್ರಣದಿಂದೊಡಗೂಡಿ ಇನ್ನಷ್ಟು ಅಚ್ಚುಕಟ್ಟಾದ ಮತ್ತು ಬಾಳಿಕೆ ಬರುವ ಆವೃತ್ತಿಗಳಾಗಿ ಮರುಮುದ್ರಣ ಹೊಂದಿದವು .ಈ ಹೊಸ ಅವೃತ್ತಿಗಳಿಗೆ ಸುಧಾರಿತ ಅನುಕ್ರಮ ಸಂಖ್ಯಾ ನೀಡಿಕೆ ಪದ್ಧತಿಯ ಅಳವಡಿಕೆಯಿಂದಾಗಿ ಶೀರ್ಷಿಕೆಗಳ ಸಂಖ್ಯೆ ೭೦೦ ಅನ್ನು ಮೀರಿತು. ಈ ಆವೃತ್ತಿಗಳು ಇಂದಿಗೂ ಅಂತರ್ಜಾಲದಲ್ಲೂ ಪುಸ್ತಕಮಳಿಗೆಗಳಲ್ಲೂ ಮಾರಾಟವಾಗುತ್ತಿವೆ .
[ಬದಲಾಯಿಸಿ] ಸಾಂಸ್ಕೃತಿಕ ಮಹತ್ವ
ನಗರೀಕರಣ , ಆರ್ಥಿಕ, ಸಾಮಾಜಿಕ ಒತ್ತಡಗಳು ಮತ್ತಿತರ ಕಾರಣಗಳಿಂದ ಭಾರತೀಯ ಸಮಾಜವು ಸಾಂಪ್ರದಾಯಿಕ ಕೂಡುಕುಟುಂಬ (ಅವಿಭಕ್ತ ಕುಟುಂಬ) ಪದ್ಧತಿಯಿಂದ ನಿಧಾನವಾಗಿ ದೂರವಾಗುತ್ತಿರುವ ಸಮಯದಲ್ಲಿ ಅಮರಚಿತ್ರಕಥಾ ಅನ್ನು ಪ್ರಾರಂಭಿಸಲಾಯಿತು. ಕೂಡುಕುಟುಂಬದಲ್ಲಿ ಅಜ್ಜ-ಅಜ್ಜಿಯರು ಮನೆಯ ಮಕ್ಕಳಿಗೆ ಜನಪದ ಮತ್ತು ಪುರಾಣಗಳ ಕಥೆಗಳನ್ನು ಹೇಳಿ ಸಂತೋಷಪಡಿಸುತ್ತಿದ್ದರು. ಅಮರಚಿತ್ರಕಥಾ ಸರಣಿಯು ಪಟ್ಟಣಗಳಲ್ಲಿನ ಸಣ್ಣ ಕುಟುಂಬಗಳಲ್ಲಿ ಅಜ್ಜಅಜ್ಜಿಯರಿಲ್ಲದ ಕೊರತೆಯನ್ನು ತುಂಬಿತು . ಮೊದಲಿಗೆ ಇಂಗ್ಲೀಷ್ ಭಾಷೆಯನ್ನು ಉಪಯೋಗಿಸಿದ್ದರಿಂದ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಿದ್ದ ಬಹ್ವಂಶ ಮಕ್ಕಳನ್ನು ತಲುಪಲು ಸಾಧ್ಯವಾಯಿತು .
ನಂತರ ಕಾಮಿಕ್ಕುಗಳು ಇತಿಹಾಸದತ್ತ ಹೊರಳಿದಾಗ ವಿದ್ಯಾರ್ಥಿಗಳಿಗೆ ಬಹಳ ಸಹಾಯಕ ಎಂದು ಸಿದ್ಧವಾಯಿತು . ಬಹಳಷ್ಟು ವಿದ್ಯಾರ್ಥಿಗಳಿಗೆ ಇತಿಹಾಸವೆಂದರೆ ಹೆಸರುಗಳು ಮತ್ತು ಇಸವಿಗಳು ಇರುವ ಗೊಂದಲಮಯ ಕಥೆ. ಶಿಲ್ಪಕಲೆ , ಬಟ್ಟೆಬರೆ , ಪ್ರಾದೇಶಿಕ ವೈಶಿಷ್ಟ್ಯಗಳ ಮತ್ತು ನಿಜಸಂಗತಿಗಳ ವಿವರವಾದ ಸಂಶೋಧನೆ ಇದನ್ನು ಬಹುಜನರಿಗೆ ಸ್ವೀಕಾರಾರ್ಹವಾಗಿ ಮಾಡಿದವು . ಪಾಲಕರು -ಶಿಕ್ಷಕರಿಬ್ಬರೂ ಅವುಗಳನ್ನು ಶಿಕ್ಷಣಕ್ಕೆ ಸಹಕಾರಿಯಾಗಿ ಉಪಯೋಗಿಸುವರು . ಈ ಪುಸ್ತಕಗಳು ತಮ್ಮ ಪೂರ್ವಾಗ್ರಹಪೀಡಿತವಲ್ಲದ ಮತ್ತು ಏಕರೂಪದ ಪಾತ್ರವಿವರಣೆಗಳಿಂದ ದೇಶಾದ್ಯಂತ ರಾಷ್ಟ್ರೀಯ ಸಮಗ್ರತೆಯನ್ನು ರೂಢಿಸುವಲ್ಲಿ ಮತ್ತು ವಿಭಿನ್ನ ಪ್ರದೇಶಗಳ ಬಗ್ಗೆ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ಬಹಳಷ್ಟು ಸಹಕಾರಿಯಾದವು .
ಈ ಸರಣಿಯು ಕಠೋರ ಸ್ವ-ನಿಯಂತ್ರಣಕ್ಕೊಳಪಟ್ಟು ಹಿಂಸೆಯಂಥ ವಿಷಯಗಳನ್ನು ತೆಳುವಾಗಿಸಿ ವಿವಾದಗಳಿಂದ ದೂರವುಳಿದಿದೆ ಎಂಬುದು ಉಲ್ಲೇಖಯೋಗ್ಯವಾಗಿದೆ. ಈ ಕಥೆಗಳು ಬಹುಮಟ್ಟಿಗೆ ಭಾರತಕೇಂದ್ರಿತವೂ ಆದರ್ಶಮಯವೂ ಅಗಿವೆ ಎಂದು ಹೇಳಬಹುದಾದ್ದರಿಂದ ಶಬ್ದಶ: "ಇತಿಹಾಸ"ವಾಗಿರಲಿಕ್ಕಿಲ್ಲ .
[ಬದಲಾಯಿಸಿ] ಪ್ರಮುಖ ಪ್ರಕಾಶನಗಳು
ಪ್ರಮುಖ ಪ್ರಕಾಶನಗಳ ಪಟ್ಟಿಯು ಈ ಲೇಖನದಲ್ಲಿ ನೋಡಬಹುದು.