ಇಮ್ಮಡಿ ಪುಲಿಕೇಶಿ
From Wikipedia
'ಇಮ್ಮಡಿ ಪುಲಿಕೇಶಿ' ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.
ಚಾಲುಕ್ಯ ವಂಶದ ಅತಿ ಪ್ರಸಿದ್ದ ಚಕ್ರವರ್ತಿಇಮ್ಮಡಿ ಪುಲಿಕೇಶಿ. ತಂದೆ ಕೀರ್ತಿವರ್ಮ. ತನ್ನ ಚಿಕ್ಕಪ್ಪ ಮಂಗಳೇಶನ ನಂತರ ಪಟ್ಟಕ್ಕೆ ಬಂದನು. ಕ್ರಿ.ಶ.೬೦೯ ರಿಂದ ಕ್ರಿ.ಶ.೬೪೨ ರ ತನಕ ೩೩ ವರ್ಷಗಳ ಕಾಲ ಆಳ್ವಿಕೆ ನಡೆಸಿದನು.
[ಬದಲಾಯಿಸಿ] ರಾಜ್ಯ ವಿಸ್ತಾರ
ಇಮ್ಮಡಿ ಪುಲಿಕೇಶಿ ತನ್ನ ಸಾಮ್ರಾಜ್ಯವನ್ನು ಸಣ್ಣ ದಂಡಯಾತ್ರೆಗಳ ಮೂಲಕ ಮೊದಲು ಬಲಗೊಳಿಸಿದನು. ಅಲೂಪ, ಗಂಗ ಮೊದಲಾದ ರಾಜವಂಶಗಳನ್ನು ಸೋಲಿಸಿದ ನಂತರ ತಮಿಳು ನಾಡಿನ ಪಲ್ಲವರನ್ನು ಸಹ ಗೆದ್ದನು. ಇದರ ನಂತರ ಚೇರ ಮತ್ತು ಪಾಂಡ್ಯ ವಂಶಗಳ ಮೇಲೆ ಯಶಸ್ವಿಯಾಗಿ ದಂಡಯಾತ್ರೆ ನಡೆಸಿದನು. ಕ್ರಿ.ಶ. ೬೦೯ ರಲ್ಲಿ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ವೆಂಗಿಯ ನಾಯಕನಾಗಿ ನೇಮಿಸಿದ - ವಿಷ್ಣುವರ್ಧನ ನಂತರದ ವರ್ಷಗಳಲ್ಲಿ ಸ್ವಾತಂತ್ರ್ಯ ಘೋಷಿಸಿ ಪೂರ್ವ ಚಾಲುಕ್ಯ ವಂಶವನ್ನು ಸ್ಥಾಪಿಸಿದ.
ಉತ್ತರ ಭಾರತದ ಪ್ರಸಿದ್ಧ ಚಕ್ರವರ್ತಿಯಾದ ಹರ್ಷವರ್ಧನನೊಂದಿಗೆ ಇಮ್ಮಡಿ ಪುಲಿಕೇಶಿಯ ಅತಿ ಪ್ರಸಿದ್ಧ ಯುದ್ಧ ಸುಮಾರು ಕ್ರಿ.ಶ. ೬೧೫ ರಲ್ಲಿ ನಡೆಯಿತು. ಪುಲಿಕೇಶಿ ಈ ಯುದ್ಧದಲ್ಲಿ ಗೆದ್ದು ನರ್ಮದಾ ನದಿಯನ್ನು ಚಾಲುಕ್ಯ ಸಾಮ್ರಾಜ್ಯದ ಗಡಿಯಾಗಿ ನಿರ್ಧರಿಸಲಾಯಿತು. ಈ ವಿಜಯದ ನಂತರ ಪುಲಿಕೇಶಿಯ ಆಡಳಿತ ಇಡಿಯ ದಕ್ಷಿಣ ಭಾರತ, ಮಹಾರಾಷ್ಟ್ರ, ಮತ್ತು ಗುಜರಾತ್-ಮಧ್ಯಪ್ರದೇಶಗಳ ಕೆಲ ಭಾಗಗಳ ವರೆಗೆ ಹಬ್ಬಿತು. ಈ ಯುದ್ಧದ ನಂತರ ಪುಲಿಕೇಶಿಗೆ ದಕ್ಷಿಣಾಪಥೇಶ್ವರ ಎಂಬ ಬಿರುದು ಬಂದಿತು. ಆದರೆ ಈ ಯುದ್ಧದ ಪರಿಣಾಮವಾಗಿ ಪುಲಿಕೇಶಿಯ ರಾಜಬೊಕ್ಕಸ ಸಾಕಷ್ಟು ಕಡಿಮೆಯಾಗಿ ಇಲ್ಲಿಂದ ಮುಂದೆ ಪುಲಿಕೇಶಿ ಯಾವುದೇ ದೀರ್ಘ ದಂಡಯಾತ್ರೆ ಕೈಗೊಳ್ಳಲಿಲ್ಲ.
[ಬದಲಾಯಿಸಿ] ಪರದೇಶೀಯರೊಂದಿಗೆ ಸಂಪರ್ಕ
ಪುಲಿಕೇಶಿ ಪರ್ಷಿಯಾದ ರಾಯಭಾರಿಯನ್ನು ಬರಮಾಡಿಕೊಂಡದ್ದಲ್ಲದೆ ತನ್ನ ರಾಯಭಾರಿಯನ್ನು 'ಪರ್ಷಿಯಾ'ದ ಆಸ್ಥಾನಕ್ಕೆ ಕಳಿಸಿಕೊಟ್ಟ. ಚೀನಾ ದೇಶದ ಯಾತ್ರಿಕ ಹ್ಯೂ ಯೆನ್-ತ್ಸಾಂಗ್ ಭಾರತದಲ್ಲೆ ಪ್ರಯಾಣಿಸುತ್ತಿದ್ದಾಗ ಪುಲಿಕೇಶಿಯ ರಾಜ್ಯಕ್ಕೆ ಭೇಟಿ ಕೊಟ್ಟು ಅದರ ಬಗ್ಗೆ ಮೆಚ್ಚಿಗೆಯ ಮಾತುಗಳನ್ನು ಸಹ ಬರೆದಿದ್ದಾನೆ. ಪರ್ಷಿಯಾದ ರಾಯಭಾರಿಯನ್ನು ಪುಲಿಕೇಶಿ ಬರಮಾಡಿಕೊಂಡ ಪ್ರಸಂಗ ಅಜಂತಾ ಗುಹೆಗಳ ಭಿತ್ತಿಪತ್ರಗಳಲ್ಲಿ ಸಹ ಮೂಡಿಬಂದಿದೆ.
ಪಲ್ಲವ ರಾಜರೊಂದಿಗೆ ಪುಲಿಕೇಶಿಯ ಯುದ್ಧಗಳು ನಡುನಡುವೆ ನಡೆಯುತ್ತಲೇ ಬಂದವು. ಅಂತಿಮವಾಗಿ ಪುಲಿಕೇಶಿಯು ಪಲ್ಲವ ನರಸಿಂಹವರ್ಮನಿಂದ ಕ್ರಿ.ಶ. ೬೪೨ ರಲ್ಲಿ ಸೋಲಿಸಲ್ಪಟ್ಟು, ಸಾವನ್ನಪ್ಪಿದನು.