ಚಾತುರ್ಮಾಸ್ಯ
From Wikipedia
ಚಾತುರ್ಮಾಸ್ಯವೆಂಬುದು ಒಂದು ವ್ರತ. ವೈದಿಕ ಧರ್ಮಾನುಯಾಯಿಗಳಲ್ಲೂ ಜೈನರಲ್ಲೂ, ವಿಶೇಷವಾಗಿ ಯತಿಗಳಲ್ಲಿ, ಆಚರಣೆಯಲ್ಲಿದೆ.
ಆಷಾಢದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕದ ಶುಕ್ಲ ಪಕ್ಷದ ದಶಮಿಯವರೆಗೆ, ನಾಲ್ಕು ತಿಂಗಳುಗಳ ಕಾಲ ಆಚರಿಸುವ ಕಾರಣ ಈ ವ್ರತಕ್ಕೆ ಚಾತುರ್ಮಾಸ್ಯವೆಂದು ಹೆಸರು. ಒಂದೊಂದು ತಿಂಗಳೂ ಒಂದೊಂದು ಬಗೆಯ ಆಹಾರವನ್ನು ವರ್ಜಿಸುವುದು ಈ ವ್ರತದ ಮುಖ್ಯಾಂಶ.
ಮೊದಲನೆಯ ತಿಂಗಳು (ಆಷಾಢ ಶುಕ್ಲ ಏಕಾದಶಿ - ಶ್ರಾವಣ ಶುಕ್ಲ ದಶಮಿ) ಕಾಯಿ ಪಲ್ಲೆ ತರಕಾರಿಗಳು ವರ್ಜ್ಯ. ಇದನ್ನು ಶಾಕವ್ರತವೆನ್ನುತ್ತಾರೆ. ಕಾಯಿಪಲ್ಲೆಗಳ ಬದಲಾಗಿ ಕಾಳುಗಳು, ಹುಳಿಯ ರುಚಿಗೆ ಮಾವಿನ ಹಣ್ಣು, ಮೆಣಸು ಜೀರಿಗೆಗಳು ಖಾರಕ್ಕೆ ಬಳಸಲ್ಪಡುತ್ತವೆ. ಸಾಸಿವೆ ಬಹುತೇಕ ವರ್ಜ್ಯ ಆದರೆ ಕೆಲ ಸಂಪ್ರದಾಯಗಳಲ್ಲಿ ಸಾಸಿವೆಯ ಬಳಕೆ ಉಂಟು.
ಎರಡನೆಯ ತಿಂಗಳು (ಶ್ರಾವಣ - ಭಾದ್ರಪದ) ಮೊಸರು ಬಳಸುವುದಿಲ್ಲ. ಇದು ದಧಿ ವ್ರತ. ಮಜ್ಜಿಗೆಗೆ ದೋಷವಿಲ್ಲ.
ಮೂರನೆಯ ತಿಂಗಳು (ಭಾದ್ರಪದ - ಆಶ್ವಯಜ, ಆಶ್ವೀನ) ಹಾಲಿನ ಬಳಕೆಯಿಲ್ಲ. ಇದು ಕ್ಷೀರವ್ರತ.
ನಾಲ್ಕನೆಯ ತಿಂಗಳು (ಆಶ್ವೀನ - ಕಾರ್ತಿಕ) ದ್ವಿದಳ ಧಾನ್ಯ, ಬೇಳೆಗಳು ವರ್ಜ್ಯ. ಇದು ದ್ವಿದಳ ವ್ರತ. ದ್ವಿದಳ ಸಸ್ಯಗಳಾಗಲೀ ಸಸ್ಯೋತ್ಪನ್ನಗಳಾಗಲಿ ಬಳಕೆಗೆ ಬಾರವು.
ನಾಲ್ಕು ತಿಂಗಳುಗಳು ಪೂರೈಸಿದ ಬಳಿಕ ಉತ್ಥಾನ ದ್ವಾದಶಿಯಂದು ವ್ರತ ಸಮಾಪ್ತಿಯಾಗುವುದು.
ಯತಿಗಳಲ್ಲಿ ಚಾತುರ್ಮಾಸ್ಯವನ್ನು ಒಂದು ಪಕ್ಷವನ್ನು ಒಂದು ಮಾಸದಂತೆ ಗಣಿಸಿ ಎರಡು ತಿಂಗಳುಗಳಲ್ಲಿ ವ್ರತವನ್ನು ಪೂರೈಸುವ ಪರಿಪಾಠವುಂಟು. ಚಾತುರ್ಮಾಸ್ಯಕ್ಕೆ ಸಂಕಲ್ಪಿಸಿದ ಯತಿಗಳು ವ್ರತ ಮುಗಿಯುವವರೆಗೆ ಸಂಚಾರ ಕೈಗೂಳ್ಳುವಂತಿಲ್ಲ. ವ್ರತಕ್ಕೆ ಕುಳಿತ ಕ್ಷೇತ್ರದ, ಊರಿನ ಸುತ್ತಿನ ಒಳಗೆಯೆ ವ್ರತಕಾಲವನ್ನು ಕಳೆಯುತ್ತಾರೆ. ವ್ರತಸಮಾಪ್ತಿಯ ನಂತರ ಸೀಮೋಲ್ಲಂಘನ ಮಾಡಿ ಮತ್ತೆ ಸಂಚಾರಕ್ಕೆ ತೊಡಗುತ್ತಾರೆ.
ಚಾತುರ್ಮಾಸ್ಯದ ಆಚರಣೆಯು ಯಾವಾಗ ಆರಂಭವಾಯಿತೆಂದು ಸುಲಭವಾಗಿ ಹೇಳಲು ಬಾರದು. ೧೦೦೦ ವರ್ಷಗಳ ಹಿಂದೆ, ಸಾಮಾನ್ಯ ಶಕೆಯ ೧೦-೧೧ ಶಕತಗಳಲ್ಲಿ, ಆಚರಣೆಯಲ್ಲಿತ್ತೆಂದು ಧಾರ್ಮಿಕ ಗ್ರಂಥಗಳಿಂದಲೂ ಲೌಕಿಕ ಸಾಹಿತ್ಯದಿಂದಲೂ ತಿಳಿದು ಬರುತ್ತದೆ.
ಚಾತುರ್ಮಾಸ್ಯ ವ್ರತಾಚರಣೆಯ ಮೂಲ ಉದ್ದೇಶಗಳು ಏನಿದ್ದಿರಬಹುದೆಂದು ಈಗ ಊಹಿಸಬೇಕಷ್ಟೆ. ಅದೇನೆ ಇರಲಿ, ಚಾತುರ್ಮಾಸ್ಯದ ನಾಲ್ಕು ತಿಂಗಳುಗಳೂ ದಿನಸಾಮಾನ್ಯದ ಅಡುಗೆಗಳಿಗಿಂತ ಬೇರೆಯಾದ, ಪರದೇಶೀ ತರಕಾರಿಗಳೂ ಧಾನ್ಯಗಳೂ ಭಾರತಕ್ಕೆ ಕಾಲಿಡುವ ಮುನ್ನಿನ ಅಡುಗೆಗಳ ತಿನಿಸುಗಳ ರುಚಿಯನ್ನು ಸವಿಯುವ, ಭಾರತದ ಲೌಕಿಕ ಸಂಸ್ಕೃತಿಯ ಮುಖ್ಯವಾದ ಅಂಶವೊಂದನ್ನು ಉಳಿಸಿಕೊಳ್ಳುವ, ಬೆಳೆಸುವ ಒಳ್ಳೆಯ ಅವಕಾಶ.