ತಳುಕಿನ ವೆಂಕಣ್ಣಯ್ಯ
From Wikipedia
ತಳುಕಿನ ವೆಂಕಣ್ಣಯ್ಯನವರು ಕನ್ನಡದ ಮೊದಲ ಪ್ರಾಧ್ಯಾಪಕರು. ಅಲ್ಲಿಯವರೆವಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮದರಾಸಿಗೆ (ಈಗಿನ ಚೆನ್ನೈ) ಹೋಗಬೇಕಿತ್ತು. ಡಿ.ವಿ.ಜಿ. ಯವರು ಹೆಸರಿಸಿರುವ ಕನ್ನಡದ ಮೂವರು ಮೇರು ಗಿರಿಗಳಲ್ಲಿ ತಳುಕಿನ ವೆಂಕಣ್ಣಯ್ಯನವರು ಮೊದಲಿಗರು. ಟಿ.ಎಸ್.ವಿ ಮತ್ತು ಎ.ಆರ್. ಕೃಷ್ಣ ಶಾಸ್ತ್ರೀಗಳನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯುತ್ತಿದ್ದರು. ಇವರು ಪ್ರಾರಂಭಿಸಿದ ಕನ್ನಡ ಎಂ.ಎ. ತರಗತಿಯ ಪ್ರಥಮ ಬ್ಯಾಚಿನಲ್ಲಿದ್ದವರುಗಳಲ್ಲಿ ಒಬ್ಬರು ಕುವೆಂಪುರವರು. ಪುಟ್ಟಪ್ಪನವರು ತಮ್ಮ ಗುರುಗಳನ್ನು ದೇವರೆಂದೇ ತಿಳಿದಿದ್ದರಂತೆ.
[ಬದಲಾಯಿಸಿ] ಜೀವನ
ತಂದೆ ದೊಡ್ಡ ಸುಬ್ಬಣ್ಣನವರು. ತಾಯಿ ಮಹಾಲಕ್ಷ್ಮಮ್ಮನವರು. ತಂದೆ ಶ್ರೀ ರಾಮ ಭಕ್ತರು ಮತ್ತು ಚುಟುಕಗಳನ್ನು ರಚಿಸುವುದರಲ್ಲಿ ಪರಿಣಿತರಾಗಿದ್ದವರು. ತೆಲುಗಿನಲ್ಲಿ ಮತ್ತು ಕನ್ನಡದಲ್ಲಿ ಚುಟುಕಗಳನ್ನು ಹೊಸೆಯುತ್ತಿದ್ದರಂತೆ. ಕೊಡುಗೈ ದಾನಿ ಸುಬ್ಬಣ್ಣನವರು. ಮನೆಯ ಒಳಗೆ ಏನಿದೆ ಏನಿಲ್ಲ ಎಂಬುದರ ಬಗ್ಗೆ ಚಿಂತೆಯಿಲ್ಲ. ಮನೆ ಮುಂದೆ ಬಂದವರಿಗೆ ಒಂದು ತುತ್ತು ಊಟ ಹಾಕದೆಯೇ ಕಳುಹಿಸುತ್ತಿರಲಿಲ್ಲವಂತೆ. ಹಿರಿಮಗನ ಓದಿನ ಬಗ್ಗೆ ಅವರ ತಮ್ಮನವರಾದ ಶ್ರೀನಿವಾಸರಾಯರು ನೋಡಿಕೊಳ್ಳುತ್ತಿದ್ದರು. ರಾಯರನ್ನು ಎಲ್ಲರೂ ಕಾಕಾ ಎಂದೇ ಸಂಭೋಧಿಸುತ್ತಿದ್ದರು. ಮೊದಲ ಮಗ ಟಿ.ಎಸ್.ವಿಯವರು ಜನಿಸಿದ್ದು ೧೮೮೫ರಲ್ಲಿ. ಅವರ ಮೊದಲ ಪತ್ನಿ ಭಾಗೀರಥಮ್ಮನವರು. ಅವರು ದೈವಾಧೀನರಾದ ಬಳಿಕ ರುಕ್ಮಿಣಿಯಮ್ಮನವರನ್ನು ಮದುವೆಯಾಗಿದ್ದರು. ಟಿ.ಎಸ್.ವಿಯವರು ಬಹಳ ಚಿಕ್ಕ ವಯಸ್ಸಿಗೇ ಅಂದ್ರೆ ೫೦ ತುಂಬುವ ವೇಳೆಗೆ ೧೯೩೫ ರಲ್ಲಿ ನಿಧನರಾದರು.
ನೋಡಲು ಎತ್ತರದ ಆಳು, ಟಿ.ಎಸ್.ವಿಯವರು. ಬಿ.ಎ. ಮುಗಿಸಿದ ತರುವಾಯ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಮಾಡಿ ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ತಮ್ಮ ಶಿಷ್ಯರೆಲ್ಲರನ್ನೂ ತಮ್ಮ ಮಕ್ಕಳಂತೆ ಕಂಡು, ಕೈಲಾಗದವರಿಗೆ ಊಟ ವಸತಿಗಳನ್ನೂ ಕೊಟ್ಟು ಪಾಠ ಹೇಳಿಕೊಟ್ಟರು. ಕನ್ನಡ ಎಂ.ಎ.ನ ಮೊದಲನೆಯ ಬ್ಯಾಚಿನಲ್ಲಿ ಕುವೆಂಪು ಸೇರಿದಂತೆ ಹಲವರಿದ್ದರು. ಎಲ್ಲರನ್ನೂ ತಮ್ಮ ಮನೆಗೆ ಕರೆದೊಯ್ದು ಊಟ ಹಾಕಿ, ಪಾಠ ಹೇಳಿಕೊಟ್ಟವರು. ಅವರಂತೆಯೇ ಅಷ್ಟೇ ಎತ್ತರಕ್ಕೇರಿದವರು ಅವರ ತಮ್ಮಂದಿರಲ್ಲೊಬ್ಬರಾದ ತ.ಸು.ಶಾಮರಾಯರು. ಅವರಲ್ಲೂ ಇದೇ ಗುಣವನ್ನು ಕಂಡು, ಅವರ ಶಿಷ್ಯರಾಗಿದ್ದ ಜಿ.ಎಸ್.ಶಿವರುದ್ರಪ್ಪನವರು ಅವರ ಬಗ್ಗೆ ಒಂದು ಕವನವನ್ನೇ ರಚಿಸಿದ್ದರು. ಅದು ಬಹಳ ಜನಪ್ರಿಯವೂ ಹೌದು. ಅದೇ - ಎದೆ ತುಂಬಿ ಹಾಡಿದೆನು ಅಂದು ನಾನು ...
ಇವರ ಮನೆಯಲ್ಲಿ ಪ್ರತಿನಿತ್ಯವೂ ಸಾಹಿತ್ಯ ಗೋಷ್ಠಿ ನಡೆಯುತ್ತಿತ್ತಂತೆ. ಅದರಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ಬಿ.ಎಂ.ಶ್ರೀ, ತೀ.ನಂ.ಶ್ರೀ, ಎ.ಆರ್.ಕೃ ಮುಂತಾದವರನ್ನು ಹೆಸರಿಸಬಹುದು. ಡಿ.ವಿ.ಗುಂಡಪ್ಪನವರು ಮಂಕುತಿಮ್ಮನ ಕಗ್ಗದ ಮುಖಪುಟದಲ್ಲಿ ಟಿ.ಎಸ್.ವಿ, ಎ.ಆರ್.ಕೃ ಮತ್ತು ಮೋಕ್ಷಗುಂಡಂ ಕೃಷ್ಣಮೂರ್ತಿಗಳನ್ನು (ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಕು ಮಗ) ಮೂವರು ಮೇರು ಪರ್ವಗಳೆಂದು ಹೆಸರಿಸಿದ್ದಾರೆ. ಇವರ ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಯಲ್ಲಿ ಟಿ.ಎಸ್.ವಿ.ಯವರು ಎಷ್ಟರ ಮಟ್ಟಿಗೆ ತಲ್ಲೀನರಾಗುತ್ತಿದ್ದರೆಂದರೆ, ಒಮ್ಮೆ ಅವರ ನವಜಾತ ಕೂಸು ಮರಣ ಹೊಂದಿ ಮನೆಯವರೆಲ್ಲರೂ ಗೊಳೋ ಎಂದು ಅಳುತ್ತಿದ್ದರೆ, ಒಳಗೆ ಹೋಗಿ ಮತ್ತೆ ಬಂದು ಸಾಹಿತ್ಯ ಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದರಂತೆ. ಅದಕ್ಕೆ ಅಲ್ಲಿದ್ದ ಒಬ್ಬರು ಯಾರೋ ಹೇಳಿದ್ದರಂತೆ, 'ಒಳಗೆ ಅಳುತ್ತಿದ್ದಾರೆ, ಏನೋ ಅಚಾತುರ್ಯವಾಗಿದೆ, ನೀವು ನೋಡುವುದಿಲ್ಲವೇ'. ಅದಕ್ಕಿವರು ಎಲ್ಲ ದೈವನಿಯಾಮಕ - ನಡೆಯುವುದೆಲ್ಲವೂ ನಡೆಯುತ್ತಲೇ ಇರುತ್ತದೆ ಎಂದಿದ್ದರಂತೆ. ಎಂದಿಗೂ ಹೆಚ್ಚಿನ ಸಂತೋಷ ಅಥವಾ ದು:ಖ ವ್ಯಕ್ತಪಡಿಸದ ವ್ಯಕ್ತಿತ್ವ ಅವರದ್ದು.
ಒಮ್ಮೆ ಒಬ್ಬರು ಸ್ವಾಮಿಗಳು ಅವರಿಗೆ ಹೇಳಿದ್ದರಂತೆ - ವೆಂಕಣ್ಣಯ್ಯ ನಿನಗೆ ಪುನರ್ಜನ್ಮವಿಲ್ಲ ಎಂದು. ಅದೆಷ್ಟರ ಮಟ್ಟಿಗೆ ಸತ್ಯವೋ ಬಲ್ಲವರಾರು? ಆದರೆ ಆ ಆತ್ಮದ ನಿರ್ಲಿಪ್ತತೆಯನ್ನು ನೋಡಿದರೆ ಆತ್ಮದ ಬಗ್ಗೆ ನಂಬಿಕೆ ಇರುವವರು ಈ ಮಾತುಗಳನ್ನು ನಂಬುವರೇನೋ.
ಹಾಗೆಯೇ ತಮಾಷೆಗಾಗಿ ಒಮ್ಮೆ ಕೈಲಾಸಂರವರು ಇವರ ಎತ್ತರವನ್ನು ಚುಡಾಯಿಸಲು, 'ಸಾರ್ ಅಲ್ಲೇ ಮೇಲೆ ಸ್ವರ್ಗದಲ್ಲಿ ನನ್ನ ಪೂರ್ವಜರು ಕ್ಷೇಮವೇ ಸ್ವಲ್ಪ ನೋಡಿಬಿಡಿ', ಎಂದಿದ್ದರಂತೆ.