ಶಾರದಾದೇವಿ
From Wikipedia
ಪರಿವಿಡಿ |
[ಬದಲಾಯಿಸಿ] ಜೀವನ
ಶ್ರೀಮಾತೆ ಶಾರದಾದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ ೨೨ ನೇ ಡಿಸೆಂಬರ್ ೧೮೫೩ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ.
೫ ವರ್ಷದ ಶಾರದೆಯ ಮದುವೆ ೨೩ ವರ್ಷದ ಶ್ರೀರಾಮಕೃಷ್ಣರೊಂದಿಗಾಯಿತು (ಅಂದಿನ ಬಾಲ್ಯವಿವಾಹದ ಈ ವಿಧಿಯು ಇಂದಿನ ನಿಶ್ಚಿತಾರ್ಥಕ್ಕೆ ಸಮ). ಈ ಸಮಯದಲ್ಲಿ ಶ್ರೀರಾಮಕೃಷ್ಣರು ಹಲವಾರು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು.
ತಮ್ಮ ೧೮ನೇ ವಯಸ್ಸಿನಲ್ಲಿ ಶಾರದಾದೇವಿಯವರು, ಶ್ರೀರಾಮಕೃಷ್ಣರು ಅರ್ಚಕರಾಗಿದ್ದ ದಕ್ಷಿಣೇಶ್ವರದ ಕಾಳೀ ಮಂದಿರಕ್ಕೆ ಆಗವಿಸಿದರು. ಅವರನ್ನು ಪ್ರೀತಿ ಮತ್ತು ಆದರದಿಂದ ಬರಮಾಡಿಕೊಂಡ ಶ್ರೀರಾಮಕೃಷ್ಣರು, ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು.
ತಮ್ಮನ್ನು ಮಾತೃ ಭಾವದಿಂದ ಕಾಣುತ್ತಿದ್ದ ಪತಿಯ ಆಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗದೆ, ಅವರ ಸಾಧನೆಗಳಿಗೆ ಪೂರಕವಾಗಿರುವುದರಲ್ಲಿ ಅವರಿಗೆ ತಮ್ಮ ಜೀವನಪಥ ಕಂಡುಬಂದಿತು. ಶ್ರೀರಾಮಕೃಷ್ಣರು ಫಲಹಾರಿಣಿ ಕಾಳೀ ಪೂಜೆಯ ದಿನ ಶ್ರೀಶಾರದಾದೇವಿಯವರನ್ನು ಜೀವಂತ ದುರ್ಗೆಯಾಗಿ ಭಾವಿಸಿ ಪೂಜೆಗೈದರು. ಇದರೊಂದಿಗೆ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಸಾಧನೆಯ ಜೀವನಘಟ್ಟ ಕೊನೆಗೊಂಡಿತು; ಮುಂದೆ ಒಬ್ಬ ಆಚಾರ್ಯರಾಗಿ, ಅವತಾರಪುರುಷರೆಂದು ಅವರು ಪ್ರಸಿದ್ಧರಾದರು.
ಶ್ರೀರಾಮಕೃಷ್ಣರನ್ನು ಕೇಳಲು, ಕಾಣಲು ಬರುತ್ತಿದ್ದ ಭಕ್ತಾದಿಗಳ ಆಹಾರ/ವಸತಿಗಳ ವ್ಯವಸ್ಥೆಯನ್ನು ಮಾಡುತ್ತ ಶಾರದಾದೇವಿಯವರು ಜಪವೇ ಮೊದಲಾದ ಮೌನ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದರು. ಜೀವನದಲ್ಲಿ ನೊಂದ ಮಹಿಳಾ ಭಕ್ತರಿಗೆ ಸಾಂತ್ವನ ನೀಡುತ್ತ, ಎಲ್ಲರ ತಾಯಾಗಿ 'ಶ್ರೀಮಾತೆ' ಎಂದೆನಿಸಿದರು.
ಶ್ರೀರಾಮಕೃಷ್ಣರ ಮಹಾಸಮಾಧಿಯ ನಂತರ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಮುನ್ನಡೆಸುವ, ಭಕ್ತರಿಗೆ ಮತ್ತು ಸಾಧಕರಿಗೆ ಮಾರ್ಗದರ್ಶನ ನೀಡುವ ಗುರುತರ ಹೊಣೆಯನ್ನು ಅವರು ವಹಿಸಿಕೊಂಡರು. ಸನ್ಯಾಸಿ-ಗೃಹಸ್ಥ, ಬಡವ-ಬಲ್ಲಿದ, ಬಾಲಕ-ವೃದ್ಧ, ಪತಿತ-ಪಾವನ ಮೊದಲಾದ ಯಾವುದೇ ಭೇದ-ಭಾವಗಳನ್ನು ಕಾಣದೇ ವಾತ್ಸಲ್ಯ ಪ್ರೇಮಪ್ರವಾಹವನ್ನೇ ಹರಿಸ ತೊಡಗಿದರು.
೧೯೧೧ ರಲ್ಲಿ ದಕ್ಷಿಣ ಭಾರತದ ತೀರ್ಥಯಾತ್ರೆಯನ್ನು ಕೈಗೊಂಡಾಗ, ಬೆಂಗಳೂರಿನ ಬಸವನಗುಡಿಯ ಶ್ರೀರಾಮಕೃಷ್ಣ ಮಠಕ್ಕೆ ಆಗಮಿಸಿ ಭಕ್ತರನ್ನು ಆಶೀರ್ವದಿಸಿದರು. ಅಲ್ಲಿ ಅವರು ಧ್ಯಾನಮಾಡಿದ ಶಿಲಾಸನವಿಂದು ಭಕ್ತರ ತೀರ್ಥಸ್ಥಾನವಾಗಿದೆ.
೧೯೨೦ರ ಜುಲೈ ೨೧ರಂದು ಅವರು ತಮ್ಮ ಶರೀರವನ್ನು ತ್ಯಜಿಸಿದರು.
ಸಾಮಾನ್ಯ ಸ್ತ್ರೀಯಂತೆ ಬಾಳಿದ ಅವರ ಜೀವನ ಕರ್ಮಯೋಗಕ್ಕೊಂದು ಶ್ರೇಷ್ಠ ವ್ಯಾಖ್ಯಾನದಂತಿತ್ತು. ಅಂದಿನ ಜಾತಿ, ಅತಿಯಾದ ಮಡಿ-ಮೈಲಿಗೆಯೇ ಮೊದಲಾದ ಕಂದಾಚಾರಗಳನ್ನು ತಮ್ಮ ಮಾತೃಪ್ರೇಮದ ಮೂಲಕ ಇಲ್ಲದಂತೆ ಮಾಡಿ ಅಸಂಖ್ಯ ಭಕ್ತರಿಗೆ ಸಾಂತ್ವನ ಒದಗಿಸಿದರು.
ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಆಚಾರ್ಯ ರಜನೀಶ ಮೊದಲಾದ ಚಿಂತಕರು ಶಾರದಾದೇವಿಯವರ ಜೀವನ, ಆಧುನಿಕ ಭಾರತೀಯ ಮಹಿಳೆಯ ಮುಂದಿರುವ ಅನುಸರಿಸಲು ಯೋಗ್ಯವಾದ ಆದರ್ಶ ಎಂದಿದ್ದಾರೆ.
ಎಲೆಮರೆಯ ಹೂವಿನಂತೆ ಆಧ್ಯಾತ್ಮಿಕ ಸೌರಭವನ್ನು ಸೂಸಿದ ಶಾರದಾದೇವಿಯವರ ಹೆಸರಿನಲ್ಲಿ ಶ್ರೀಶಾರದಾ ಮಠ ಎಂಬ ಸಂನ್ಯಾಸಿನಿಯರ ಸಂಘವೊಂದು ಜನ್ಮತಾಳಿತು. ಬೆಂಗಳೂರಿನ ನಂದಿದುರ್ಗದ ಬಳಿ ಅದರ ಶಾಖೆಯೊಂದು ಸೇವೆಸಲ್ಲಿಸುತ್ತಿದೆ.
[ಬದಲಾಯಿಸಿ] ಪುಸ್ತಕಗಳು
- ಶ್ರೀಶಾರದಾದೇವಿ ಜೀವನಗಂಗಾ - ಸ್ವಾಮಿ ಪುರುಷೋತ್ತಮಾನಂದ
- ಶ್ರೀಮಾತೆ ಶಾರದಾದೇವಿ - ಸ್ವಾಮಿ ನಿತ್ಯಸ್ಥಾನಂದ
- ಶ್ರೀಶಾರದಾದೇವಿ ಸಂದೇಶಮಂದಾರ
- ಬೆಂಗಳೂರಿನಲ್ಲಿ ಶ್ರೀಮಾತೆ - ಸ್ವಾಮಿ ರಾಘವೇಶಾನಂದ
[ಬದಲಾಯಿಸಿ] ಶ್ರೀಮಾತೆಯವರು ಹೇಳುತ್ತಾರೆ
- ಮನಸ್ಸಿನ ಶಾಂತಿ ಬೇಕಾಗಿದ್ದರೆ, ಯಾರಲ್ಲೂ ತಪ್ಪನ್ನು ಹುಡುಕ ಬೇಡ. ಈ ಜಗತ್ತೆಲ್ಲ ನಿನ್ನದೇ. ಯಾರೂ ಅನ್ಯರಲ್ಲ.
- ನೀನು ಯಾರನ್ನು ಪ್ರೀತಿಸುತ್ತೀಯೋ ಅವರಿಂದ ಏನನ್ನೂ ಬಯಸಬೇಡ. ನೀನು ಏನನ್ನಾದರೂ ಬಯಸಿದೆ ಎಂದಿಟ್ಟುಕೋ, ಆಗ ಕೆಲವರು ಹೆಚ್ಚು ಕೊಡುತ್ತಾರೆ, ಕೆಲವರು ಕಡಮೆಕೊಡುತ್ತಾರೆ. ನೀನಾಗ ಹೆಚ್ಚು ಕೊಟ್ಟವರನ್ನು ಹೆಚ್ಚು ಪ್ರೀತಿಸುತ್ತೀಯ, ಕಡಮೆ ಕೊಟ್ಟವರನ್ನು ಕಡಮೆ ಪ್ರೀತಿಸುತ್ತೀಯ. ಹೀಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸಲು ಆಗುವುದಿಲ್ಲ.
- ಇದ್ದಲ್ಲೇ ಮನಸ್ಸು ಶಾಂತವಾಗಿರಲು ಸಾಧ್ಯವಾದರೆ, ತೀರ್ಥಯಾತ್ರೆಯ ಅಗತ್ಯವಾದರೂ ಏನಿದೆ ?
- ಈ ಮನಸ್ಸಿನಿಂದ ಬರೀ ತೊಂದರೆ ಅಂದುಕೊಂಡೆಯಾ, ಮೊದಲಿಗೆ ಮನಸ್ಸಿನ ಸಹಕಾರ ತುಂಬ ಮುಖ್ಯ. ಶುದ್ಧ ಮನಸ್ಸೇ ಮನುಷ್ಯನಿಗೆ ದಾರಿಯನ್ನು ತೋರಿಸುವದು.
- ಭಗವಂತನನ್ನು ಕಾಣದಿದ್ದರೂ ಆತನನ್ನು ನಮ್ಮವನೆಂದೇ ಕರೆಯಲು ಸಾಧ್ಯವಾದರೆ, ಅದೇ ಅವನ ಕೃಪೆ.
- ಪ್ರಾಮಾಣಿಕವಾದ ಪ್ರೀತಿಲ್ಲದೆ ಭಗವಂತನನ್ನು ಪಡೆಯಲು ಸಾಧ್ಯವಿಲ್ಲ. ಭಗವಂತನನ್ನು ಪ್ರೀತಿಗಾಗಿ ಪ್ರೀತಿಸು. ಅದು ಬೇರೆಯವರ ಕಣ್ಣಿಗೆ ಬೀಳಬೇಕಾಗಿಲ್ಲ.
- ಒಳ್ಳೆಯ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಛಲ ಹಾಗೂ ಸತತ ಪ್ರಯತ್ನ ಅಗತ್ಯ.
- ಶ್ರದ್ಧೆ ಮತ್ತು ನಿಷ್ಠೆ , ಇವೇ ಮೊದಲು ಬೇಕಾದವು. ಮನಸ್ಸು ಶುದ್ಧವಾಗಿದ್ದರೆ, ಏಕಾಗ್ರತೆ, ಧ್ಯಾನ ಏಕೆ ಸಾಧ್ಯವಾಗುವುದಿಲ್ಲ ?
[ಬದಲಾಯಿಸಿ] ಕಾವ್ಯ ಪುಷ್ಪ
ರಾಮಕೃಷ್ಣ ತಪೋಸೂರ್ಯ
- ಕಿರಣಬಿಂಬ ಚಂದ್ರಿಕೆ
- ಓ ತಾಯಿ ಅಂಬಿಕೆ ||
- ಓ ತಾಯಿ ಅಂಬಿಕೆ ||
ಗಿರಿಯ ದರಿಯ ನೆಲವ ಜಲವ
- ತಬ್ಬಿ ನಿಂತ ಕರುಣೆಯೆ
- ವಾತ್ಸಲ್ಯವರಣೆಯೆ ||
- ವಾತ್ಸಲ್ಯವರಣೆಯೆ ||
ರಾಮಕೃಷ್ಣ ತಪೋವನದ
- ಪರ್ಣಕುಟಿಯ ದೀಪವೆ |
ಬಳಿಗೆ ಬಂದ ಹಣತೆಗಳಿಗೆ
- ಬೆಳಕನಿತ್ತ ಕಿರಣವೆ
- ಮೌನಪ್ರಭಾವಲಯವೆ ||
- ಮೌನಪ್ರಭಾವಲಯವೆ ||
ಸಂಕಟಗಳ ವನವಸನವ-
- ನುಟ್ಟುನಿಂತ ಶಿಖರವೆ |
ನದನದಿಗಳ ವಾತ್ಸಲ್ಯದ
- ಹಾಲೂಡಿದ ತೀರ್ಥವೆ
- ದಿವ್ಯಕೃಪಾರೂಪವೆ ||
- ದಿವ್ಯಕೃಪಾರೂಪವೆ ||
- ಜಿ. ಎಸ್. ಶಿವರುದ್ರಪ್ಪ