ಐಹೊಳೆ
From Wikipedia
'ಭಾರತೀಯ ಶಿಲ್ಪಕಲೆಯ ತೊಟ್ಟಿಲು' ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ ೪೮೩ ಕಿ. ಮೀ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ.ಬಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ. ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು.ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ.ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು.ಐಹೊಳೆ ಒಂದು "ಅಧಿಷ್ಠಾನ" ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು.ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ.ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿ ಐಹೊಳೆಯಾಯಿತು.
[ಬದಲಾಯಿಸಿ] ದೇವಾಲಯಗಳು
ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ.
೧.ಕ್ರಿ.ಶ.೪೫೦ರಲ್ಲಿ ನಿರ್ಮಿತವಾದ ಲಡ್‌ಖಾನದ್ದೇ ಇಲ್ಲಿನ ಪ್ರಾಚೀನ ದೇವಾಲಯ.ವಿಷ್ಣುವಿಗೆ ಸಮರ್ಪಿತವಾಗಿದ್ದ ದೇವಾಲಯದ ರಚನೆಯಲ್ಲಿ ಗುಪ್ತ ಸಂಪ್ರದಾಯದ ಪ್ರಭಾವವು ಕಂಡು ಬರುತ್ತದೆ.ಏಕೆಂದರೆ ಪೂರ್ಣ ಕಲಶ ಮತ್ತು ನಿಂತ ನಿಲುವಿನ ಗಂಗೆ-ಯಮುನೆಯರ ಆಕೃತಿಗಳು ಇಲ್ಲಿವೆ.
೨.ಕ್ರಿ.ಶ.೬೩೪ರಲ್ಲಿ ೨ನೆಯ ಪುಲಿಕೇಶಿಯ ಕಾಲದಲ್ಲಿ ಅವನ ಆಶ್ರಯದಲ್ಲಿದ್ದ ರವಿಕೀರ್ತಿಯಿಂದ ಮೇಗುಟಿ(ಮೇಗುಡಿ ಅಂದರೆ ಮೇಲಿನ ಗುಡಿ) ದೇವಾಲಯವು ನಿರ್ಮಾಣವಾಯಿತು.ಎತ್ತರವಾದ ಸ್ಥಳದಲ್ಲಿರುವ ಕಾರಣ ದೇವಾಲಯಕ್ಕೆ ಈ ಹೆಸರು ಬಂದಿದೆ.ಜಿನನಿಗೆ ಸಮರ್ಪಿತವಾಗಿದ್ದ ಈ ಗುಡಿಯು ಗರ್ಭಗೃಹ ಮತ್ತು ನವರಂಗಗಳನ್ನು ಹೊಂದಿದೆ.
೩.ಕೊಂಟಿಗುಡಿ (ಕೊಂಟ ಅಥವಾ ತ್ರಿಶೂಲವನ್ನು ಸದಾ ಹೊಂದಿದವನೊಬ್ಬನು ವಾಸಿಸುತ್ತಿದ್ದ ಕಾರಣ ಈ ಹೆಸರು) ಎಂದು ಹೆಸರು ಪಡೆದ ದೇವಾಲಯದ ೪ ಕಂಭಗಳಿಗೆ ಆಧಾರವೇ ಇಲ್ಲ ;ಅವು ಅಡಿಯಿಂದ ಗುಂಡಾದ ಬೋದಿಗೆಯವರೆಗೆ ಚೌಕಾಕಾರವಾಗಿವೆ.
೪.ಐಹೊಳೆಯ ಅತ್ಯಂತ ಸುಂದರ ದೇವಾಲಯವೆಂದರೆ ದುರ್ಗದೇವಾಲಯ.ಇದು ದುರ್ಗ ಅಥವಾ ಕೋಟೆಯ ಬಳಿಯಿದ್ದುದರಿಂದ ಈ ಹೆಸರು ಬಂದಿದೆ.ಬೌದ್ಧರ ಚೈತ್ಯಗಳಂತೆ ಲಾಳದ ಆಕಾರದ ಈ ದೇವಾಲಯದ ಗೋಡೆಗಳ ಮಾಡಗಳಲ್ಲಿ ಶಿವ ಹಾಗೂ ವಿಷ್ನುವಿನ ಪ್ರತಿಮೆಗಳಿವೆ.ಇದರ ಅತ್ಯಂತ ಪ್ರಮುಖ ಲಕ್ಷಣವೆಂದರೆ ಉತ್ತರ ದಿಕ್ಕಿನಲ್ಲಿರುವ ಅದರ ಶಿಖರ.
೫.ಮೇಲೆ ಹೇಳಿದ ದುರ್ಗದೇವಾಲಯದ ಲಕ್ಷಣಗಳ ಪರಿಪೂರ್ಣ ಉದಾಹರಣೆಯಾಗಿರುವುದು ಹುಚ್ಚಿಮಲ್ಲಿಗುಡಿ.