ಕೆಳದಿಯ ಚೆನ್ನಮ್ಮ
From Wikipedia
ಕೆಳದಿಯ ಚನ್ನಮ್ಮ ಕ್ರಿ.ಶ.೧೬೭೨ರಿಂದ ಕ್ರಿ.ಶ.೧೬೯೭ರವರೆಗೆ ರಾಜ್ಯವಾಳಿದಳು. ಇವಳು ಕೋಟಿಪುರದ ಸಿದ್ದಪ್ಪಶೆಟ್ಟರ ಮಗಳು ಹಾಗು ಸೋಮಶೇಖರನಾಯಕನ ಮಡದಿ. ರಾಜದ್ರೋಹಿಗಳು ನಿಷ್ಪುತ್ರಕನಾದ ಸೋಮಶೇಖರ ನಾಯಕನ ಕೊಲೆ ಮಾಡಿದ ಬಳಿಕ ಪಟ್ಟಕ್ಕಾಗಿ ನಡೆದ ಕಲಹದಲ್ಲಿ ಇವಳು ಎಲ್ಲ ರಾಜದ್ರೋಹಿ ಬಣಗಳನ್ನು ಸದೆಬಡಿದು, ೧೬೭೨ರಲ್ಲಿ ಪಟ್ಟವನ್ನೇರಿದಳು. ರಾಜ್ಯದ ಶತ್ರುಗಳನ್ನೆಲ್ಲ ಸೋಲಿಸಿ ರಾಜ್ಯವನ್ನು ವಿಸ್ತರಿಸಿದಳು.
ಛತ್ರಪತಿ ಶಿವಾಜಿಯ ನಿಧನದ ನಂತರ ಮರಾಠಾ ರಾಜ್ಯವನ್ನು ಕೈವಶ ಮಾಡಿಕೊಳ್ಳುವ ಉದ್ದೇಶದಿಂದ ಔರಂಗಜೇಬನು ಸಂಭಾಜಿಯನ್ನು ೧೬೮೯ ಮಾರ್ಚ ೧೧ರಂದು ಕೊಲ್ಲಿಸಿದನು. ಶಿವಾಜಿಯ ಎರಡನೆಯ ಮಗ ರಾಜಾರಾಮನು ಬಂಧನವನ್ನು ತಪ್ಪಿಸಿಕೊಳ್ಳಲು ದಕ್ಷಿಣಕ್ಕೆ ಓಡಿದನು. ಬೆನ್ನೆಟ್ಟಿದ ಮೊಗಲ ಸೈನ್ಯವನ್ನು ತಪ್ಪಿಸುತ್ತ ರಾಜಾರಾಮನು ಕೆಳದಿಗೆ ಬಂದು ಚೆನ್ನಮ್ಮನ ಆಶ್ರಯ ಕೋರಿದನು. ಚೆನ್ನಮ್ಮನು ರಾಜಾರಾಮನನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಟ್ಟಳು. ಔರಂಗಜೇಬನ ಎರಡನೆಯ ಮಗ ಆಝಮ್ ಶಹಾನ ನೇತೃತ್ವದ ವಿಶಾಲ ಸೈನ್ಯ ಕೆಳದಿಯನ್ನು ಕೈವಶ ಮಾಡಿಕೊಳ್ಳಲು ಬಂದಿತು.ಜಾನ್ ನಿಸಾರ ಖಾನ ಎನ್ನುವ ಸರದಾರನು ೧೬೮೯ ಎಪ್ರಿಲ್ ೨೫ ಮತ್ತು ಮೇ ೯ ಈ ಮಧ್ಯದ ಅವಧಿಯಲ್ಲಿ ಬಿದನೂರಿಗೆ ಮುತ್ತಿಗೆ ಹಾಕಿದನು. ಚನ್ನಮ್ಮ ಮೊಗಲರ ಈ ಪ್ರಚಂಡ ಸೈನ್ಯವನ್ನು ಸೋಲಿಸಿ ಅವರು ರಣರಂಗದಿಂದ ಕಾಲ್ತೆಗೆಯುವಂತೆ ಮಾಡಿದಳು. ಕಣಿವೆಗಳಲ್ಲಿ ವೈರಿಸೈನ್ಯವನ್ನು ಸಿಲುಕಿಸಿ ಔರಂಗಜೇಬನು ಒಪ್ಪಂದಕ್ಕೆ ಬರುವಂತೆ ಮಾಡಿದಳು.
ಚನ್ನಮ್ಮ ಅನೇಕ ದಾನ ಧರ್ಮಗಳನ್ನು ಮಾಡಿದ್ದಾಳೆ. ಮಠಗಳನ್ನು, ದೇವಾಲಯಗಳನ್ನು ಸ್ಥಾಪಿಸಿದ್ದಾಳೆ. ಅವುಗಳಲ್ಲಿ ಬಾಬಾ ಬುಡನ್‍ಗಿರಿಯ ದೇವಾಲಯವೂ ಒಂದಾಗಿದೆ.