ಗುಂಡಾ ಜೋಯಿಸ
From Wikipedia
ಕೆಳದಿಯ ಶ್ರೀ ಗುಂಡಾ ಜೋಯಿಸರು ೧೯೩೧ ಸಪ್ಟಂಬರ ೨೭ರಂದು ಕೆಳದಿಯಲ್ಲಿ ಜನಿಸಿದರು. ಇವರ ತಾಯಿ ಮೂಕಾಂಬಿಕಾ;ತಂದೆ ನಂಜುಂಡ ಜೋಯಿಸರು. ಇವರ ನಿಜನಾಮ ಲಕ್ಷ್ಮೀನಾರಾಯಣ. ಇವರ ಮೇಲಿನ ಎರಡು ಮಕ್ಕಳು ತೀರಿಕೊಂಡಿದ್ದರಿಂದ ಇವರಾದರೂ ಕಲ್ಲುಗುಂಡಿನಂತೆ ಬದುಕಲಿ ಎಂದು ಇವರ ಅಜ್ಜಿ ಇವರಿಗೆ ಗುಂಡಾ ಎಂದು ಕರೆದಳು!
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಜೋಯಿಸರ ಪ್ರಾಥಮಿಕ ಶಿಕ್ಷಣ ಹುರಳಿ, ಕೆಳದಿ,ಸೊರಬ ಹಾಗು ಸಾಗರದಲ್ಲಿ ನಡೆಯಿತು. ಪ್ರೌಢಶಾಲಾ ವಿದ್ಯಾಭ್ಯಾಸವು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ನಂತರ ಜೋಯಿಸರು ವಿದ್ಯಾಭ್ಯಾಸವನ್ನು ಮುಕ್ತಾಯಗೊಳಿಸಿ ಉದ್ಯೋಗವನ್ನು ಅರಸಬೇಕಾಯಿತು. ಆದರೆ ಸುಮಾರಾಗಿ ತಮ್ಮ ೫೦ನೆಯ ವಯಸ್ಸಿನಲ್ಲಿ ಜೋಯಿಸರು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಮ್.ಎ. (ಇತಿಹಾಸ) ಪದವಿಯನ್ನು ಪಡೆದರು. ಇದಲ್ಲದೆ ಬೆಂಗಳೂರಿನ ಕರಣಿಕರ ವೇದಶಾಲೆಯಲ್ಲಿ ವೇದಾಭ್ಯಾಸವನ್ನು ಮಾಡಿದ್ದಾರೆ.
[ಬದಲಾಯಿಸಿ] ವೃತ್ತಿ
ಗುಂಡಾ ಜೋಯಿಸರು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಗ್ರಾಮಲೆಕ್ಕಿಗರಾಗಿ, ಪೋಸ್ಟ ಮಾಸ್ತರ ಆಗಿ, ವಿದ್ಯುತ್ ಇಲಾಖೆಯಲ್ಲಿ, ಆಕಾಶವಾಣಿಯಲ್ಲಿ, ವಯಸ್ಕರ ಶಿಕ್ಷಣ ಸಮಿತಿಯಲ್ಲಿ , ಕನ್ನಡ ಸಂಸ್ಕೃತಿ ಪ್ರಸಾರದ ಉಪನ್ಯಾಸಕರಾಗಿ, ಶಿವಮೊಗ್ಗಾದ ಸರಕಾರಿ ವಸ್ತು ಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿಯಾಗಿ, ಗೋವಾ ಪರ್ತಗಾಳಿ ಮಠದಲ್ಲಿ ಸಂಶೋಧನೆ ನಡೆಯಿಸಲು ರಾಜ್ಯದಿಂದ ನಿಯುಕ್ತರಾಗಿ, ತಮಿಳುನಾಡಿಗೆ ಸರಕಾರದ ಸಾಂಸ್ಕೃತಿಕ ನಿಯೋಗಿಯಾಗಿ, ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉಪನ್ಯಾಸಕರಾಗಿ,ರಾಜ್ಯದ ಚಾರಿತ್ರಿಕ ಸರ್ವೇಕ್ಷಣ ಸಮಿತಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಕರಾಗಿ, ಕೆಳದಿ ದೇವಾಲಯದ ಉಚ್ಚಾಧಿಕಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೬ ಬಾರಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ!
[ಬದಲಾಯಿಸಿ] ಪ್ರವೃತ್ತಿ
೧೯೪೮ರಿಂದಲೆ ಅಂದರೆ ತಮ್ಮ ೧೭ನೆಯ ವಯಸ್ಸಿನಿಂದಲೆ ಜೋಯಿಸರು ಕೆಳದಿಯ ಇತಿಹಾಸದ ಸಂಶೋಧನೆಯನ್ನು ಮಾಡುತ್ತಲಿದ್ದಾರೆ. ೧೯೬೦ರಲ್ಲಿ ತಮ್ಮ ಮನೆಯಲ್ಲಿಯೆ ಐತಿಹಾಸಿಕ ವಸ್ತು ಸಂಗ್ರಹಾಲಯ ಪ್ರಾರಂಭಿಸಿದರು. ೧೯೭೮ರಲ್ಲಿ ಒಂದು ವಿಶ್ವಸ್ಥಸಮಿತಿಯನ್ನು ಮಾಡಿದರು. ಈ ಸಂಗ್ರಹಾಲಯವನ್ನು ೧೯೮೯ರ ನಂತರ ಸರಕಾರಕ್ಕೆ ಒಪ್ಪಿಸಿದರು. ಈ ಸಂಗ್ರಹಾಲಯದಲ್ಲಿ ೨೬೦೦ ತಾಳೆಗರಿ ಗ್ರಂಥಗಳಲ್ಲದೆ ಐತಿಹಾಸಿಕ ಮಹತ್ವದ ಶಾಸನಗಳು ಹಾಗು ಇತರ ವಸ್ತುಗಳಿವೆ. ಕೆಳದಿಯ ಇತಿಹಾಸ ಸಂಗ್ರಹಕ್ಕಾಗಿ ಊರೂರು ಅಲೆದರು. ಲಂಡನ್, ಅಸ್ಯನ್ ಹಾಗು ಇಟಲಿಯಲ್ಲಿರುವ ಗ್ರಂಥಾಲಯ ಹಾಗು ವಸ್ತು ಸಂಗ್ರಹಾಲಯಗಳಿಗೆ ಭೇಟಿ ಕೊಟ್ಟರು. ಅನೇಕ ಜನ ಗ್ರಾಮಸ್ಥರನ್ನು ಹಾಗು. ವಿದ್ವಾಂಸರನ್ನು ಸಂಪರ್ಕಿಸಿದರು. ಕೆಳದಿಯ ಇತಿಹಾಸಕ್ಕೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅನೇಕ ಲೇಖಕರಿಗೆ ಸಹಾಯ ಮಾಡಿದ್ದಾರೆ. ಕೆಲವೊಂದು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದ ಪ್ರಾಚೀನ ಓಲೆಗರಿ ಹಸ್ತಪ್ರತಿ ಸೂಚಿಯನ್ನು ತಯಾರಿಸಿದ್ದಾರೆ.
[ಬದಲಾಯಿಸಿ] ಪುರಸ್ಕಾರ
ಕರ್ನಾಟಕ ರಾಜ್ಯ ಸರಕಾರವು ೧೯೯೫ರಲ್ಲಿಶ್ರೇಷ್ಠ ಸಂಶೋಧಕರೆಂದು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.