ಜೋಗ
From Wikipedia
ಜೋಗ ಅಥವ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಅತಿ ಎತ್ತರದ ಜಲಪಾತ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸೀ ತಾಣ. ಇಲ್ಲಿ ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ದುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯ ರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದು ಕೊಂಡಿದೆ ಏಂದು ಅನೇಕರು ಹೇಳುತ್ತಾರೆ.
[ಬದಲಾಯಿಸಿ] ಮಹಾತ್ಮ ಗಾಂಧಿ ಜಲ ವಿದ್ಯುತ್ ಯೊಜನೆ
ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ "ಎಂತಹ ವ್ಯರ್ಥ" ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗಾರ. ೧೯೩೦ರ ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲ ವಿದ್ಯುತ್ ಯೋಜನಾ ಕಾರ್ಯ ಶುರುವಯಿತು. ಮೊದಲ ಹಂತದ ಕೆಲಸ ೧೯೩೯ರಲ್ಲಿ ಜೋಗ ಜಲಪಾತದಿಂದ ೨೪ ಕಿ. ಮಿ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. ಫೆಬ್ರುವರಿ ೨೧ ೧೯೪೯ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ ೧೨೦ ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೊಜನೆಗೆ ನೀರಿನ ಸರಬರಾಜಾಗುತ್ತಿತ್ತು, ೬೦ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ಪ್ರಾರಂಭವಾದ ನಂತರ ಅದೆ ಈ ಯೋಜನೆಗೆ ನೀರಿನ ಮೂಲ.