ನಾ.ಕಸ್ತೂರಿ
From Wikipedia
ನಾರಾಯಣ ಕಸ್ತೂರಿ ರಂಗನಾಥ ಶರ್ಮ ನಾ.ಕಸ್ತೂರಿ - ( ಡಿಸೆಂಬರ್ ೨೫-೧೮೮೭ - ಅಗಸ್ಟ ೧೪ - ೧೯೮೭)
ನಾ.ಕಸ್ತೂರಿ ಎಂದು ಖ್ಯಾತರಾದ ನಾರಾಯಣ ಕಸ್ತೂರಿ ರಂಗನಾಥ ಶರ್ಮ ಹುಟ್ಟಿದ್ದು ಕೇರಳದ ತ್ರಿಪುನಿತ್ತೂರ್ ಎಂಬ ಗ್ರಾಮದಲ್ಲಿ. ಜನ್ಮದಿನ ೧೮೯೭ ಡಿಸೆಂಬರ್ ೨೫; ಕ್ರಿಸ್ಮಸ್ ದಿನದಂದು.ಇವರ ತಂದೆ ವಕೀಲರೊಬ್ಬರ ಬಳಿ ಕಾರಕೂನರಾಗಿದ್ದರು. ಕಸ್ತೂರಿ ೬ ವರ್ಷದ ಬಾಲಕನಾಗಿದ್ದಾಗ ಮೈಲಿ ಬೇನೆಯಿಂದಾಗಿ ತಂದೆ ತೀರಿಕೊಂಡರು. ಕಸ್ತೂರಿ ತಾಯಿಯ ತಂದೆಯ ಆಶ್ರಯದಲ್ಲಿ ಬೆಳೆಯಬೇಕಾಯಿತು. ತಾಯಿಗೆ ಆಗ ಕೇವಲ ೨೨ ವರ್ಷ.
ಪರಿವಿಡಿ |
[ಬದಲಾಯಿಸಿ] ವಿದ್ಯಾಭ್ಯಾಸ
ಆರ್ಥಿಕ ಕಾರಣಗಳಿಂದಾಗಿ ಮೊಮ್ಮಗನನ್ನು ಸಂಸ್ಕೃತ ಪಾಠಶಾಲೆಗೆ ಸೇರಿಸುವ ವಿಚಾರ ಮಾಡಿದ್ದರು ಅಜ್ಜ. ಆದರೆ ತಾಯಿ ತನ್ನ ಒಡವೆಗಳನ್ನು ಮಾರಿ ಮಗನನ್ನು ವ್ಯಾವಹಾರಿಕ ಶಾಲೆಗೆ ಸೇರಿಸಿದಳು. ತಮ್ಮ ಪ್ರತಿಭೆ ಹಾಗು ಪರಿಶ್ರಮದ ಫಲದಿಂದ ಕಸ್ತೂರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ೫ನೆಯ ಶ್ರೇಣಿ ಪಡೆದರು. ಮುಂದಿನ ಎರಡು ವರ್ಷ ವಿದ್ಯಾರ್ಥಿವೇತನದ ಸಹಾಯದಿಂದ ಎರ್ನಾಕುಲಮ್ ಮಹಾರಾಜಾ ಕಾಲೇಜಿನಲ್ಲಿ ಇಂಟರ್‍ಮೀಡಿಯೇಟ್ ಓದಿದರು (೧೯೧೪-೧೬). ರಾಜ್ಯಕ್ಕೆ ೨ನೆಯ ಶ್ರೇಣಿ ಪಡೆದ ಕಸ್ತೂರಿ ತಿರುವನಂತಪುರದ ಮಹಾರಾಜಾ ಕಾಲೇಜಿನಲ್ಲಿ ಬಿ.ಏ.(ಆನರ್ಸ್) ಪದವಿ ಪಡೆದರು.
[ಬದಲಾಯಿಸಿ] ಉದ್ಯೋಗ ಹಾಗು ಕೌಟಂಬಿಕ ಜೀವನ
ಕಸ್ತೂರಿ ೧೪ ವರ್ಷದವರಿದ್ದಾಗಲೆ ಅವರ ವಿವಾಹ ೯ ವರ್ಷದ ಹುಡುಗಿಯೊಂದಿಗೆ ಜರುಗಿತು. ಕಸ್ತೂರಿಯವರ ತಂದೆಯ ಸೋದರಿ ಪತಿಗೃಹದಿಂದ ಪರಿತ್ಯಕ್ತಳಾಗಿ, ತನ್ನ ಇಬ್ಬರು ಮಕ್ಕಳೊಂದಿಗೆ ತಂದೆಯ ಆಶ್ರಯ ಪಡೆದಿದ್ದಳು. ಅವಳ ಮಗಳೆ ಕಸ್ತೂರಿಯವರ ವಧು.
ಕಸ್ತೂರಿ ಕಾಲೇಜಿನ ಕೊನೆಯ ವರ್ಷದಲ್ಲಿದ್ದಾಗ ಅಜ್ಜ ತೀರಿಕೊಂಡರು. ತಿರುವನಂತಪುರದಲ್ಲಿಯೆ ಕಸ್ತೂರಿ ಹೈಸ್ಕೂಲು ಅಧ್ಯಾಪಕನ ನೌಕರಿ ಹಿಡಿದು, ದೊಡ್ಡ ಸಂಸಾರವನ್ನು ನಡೆಯಿಸಹತ್ತಿದರು. ಸಂಜೆ ಕಾಲೇಜಿನಲ್ಲಿ ಕಾನೂನುಶಾಸ್ತ್ರದ ವ್ಯಾಸಂಗ ಮಾಡಹತ್ತಿದರು. ಅದೇ ಸಮಯದಲ್ಲಿ ದಾಮೋದರನ್ ಪೊಟ್ಟಿ ಎನ್ನುವವರು ನಡೆಯಿಸುತ್ತಿದ್ದ " ಪೀಪಲ್ಸ್ ಫ್ರೆಂಡ " ಎನ್ನುವ ಮಾಸಪತ್ರಿಕೆಗೆ ಇವರು ಭೂತಲೇಖಕ(!) ರಾದರು. ತಮ್ಮ ಹೈಸ್ಕೂಲು ಹಾಗು ಕಾನೂನು ಕಾಲೇಜುಗಳಲ್ಲಿ ನಾಟಕ ಬರೆದು ಆಡಿದರು ಹಾಗು ಆಡಿಸಿದರು. ನಾಟಕದಿಂದ ಕೂಡಿದ ನಿಧಿಯನ್ನು ಬಡ ವಿದ್ಯಾರ್ಥಿಗಳ ನೆರವಿಗಾಗಿ ನೀಡಿದರು.
[ಬದಲಾಯಿಸಿ] ಕರ್ನಾಟಕ ಪ್ರವೇಶ
ಕನ್ನಡ ನಾಡು ತನ್ನ ಕಸ್ತೂರಿಯನ್ನು ಸೆಳೆಯಿತು. ಮೈಸೂರಿನ ಡಿ.ಬಿ.ಸಿ. ಹೈಸ್ಕೂಲಿನಲ್ಲಿ ಅಧ್ಯಾಪಕನಾಗಿ ನೌಕರಿ ಪಡೆದ ಕಸ್ತೂರಿ, ಆಬಳಿಕ ಡಿ.ಬನುಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾದರು. ಚರಿತ್ರೆ, ಇಂಗ್ಲಿಷ್ ಹಾಗು ಅರ್ಥಶಾಸ್ತ್ರ ಬೋಧಿಸುವದರ ಜೊತೆಗೆ ಕಾಲೇಜು ಪತ್ರಿಕೆಯನ್ನು ನಡೆಯಿಸಿದರು; ವಿದ್ಯಾರ್ಥಿ ಪಾರ್ಲಿಮೆಂಟ್ ರಚಿಸಿದರು; ನಾಟಕಗಳನ್ನು ಆಡಿಸಿದರು; ಸ್ವತಃ ತಾವೂ ನಟಿಸಿದರು. ಕಸ್ತೂರಿಯವರ ಮೊದಲ ಮಗ ಮೈಸೂರಿನಲ್ಲಿ ೧೯೨೩ ರಲ್ಲಿ ಜನಿಸಿದರು.
[ಬದಲಾಯಿಸಿ] ಸಮಾಜಸೇವೆ ಹಾಗು ಸಾಹಿತ್ಯರಚನೆ
ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮ ಸ್ಥಾಪಿಸಿದ ಸ್ವಾಮಿ ಸಿದ್ಧೇಶ್ವರಾನಂದರು ಕಸ್ತೂರಿಯವರ ಸಹಪಾಠಿಗಳು. ರಾಮಕೃಷ್ಣಾಶ್ರಮದ ಸ್ಥಾಪನೆಗಾಗಿ ಸ್ವಾಮೀಜಿಯವರೊಂದಿಗೆ ಕಸ್ತೂರಿಯವರು ಅಹೋರಾತ್ರಿ ಶ್ರಮಿಸಿದರು. ರೋವರ್ ಲೀಡರ್ ತರಬೇತಿ ಪಡೆದು ವಿವೇಕಾನಂದ ರೋವರ್ಸ್ ದಳ ವನ್ನು ಸ್ಥಾಪಿಸಿದರು. ನಾಟಕಗಳನ್ನು ಆಡಿ ಆಶ್ರಮಕ್ಕಾಗಿ ನಿಧಿ ಕೂಡಿಸಿದರು. ಆಶ್ರಮದ ಗ್ಯಾರೇಜಿನಲ್ಲಿ ಕುಸ್ತಿಯ ಅಖಾಡಾ ಮಾಡಿ ಹಲವಾರು ಪೈಲವಾನರನ್ನು ತಯಾರು ಮಾಡಿಸಿದರು. ಅಧ್ಯಾತ್ಮಿಕ ಶಿಬಿರಗಳನ್ನು ಹಾಗು ಉಪನ್ಯಾಸಗಳನ್ನು ಏರ್ಪಡಿಸಿದರು.
ಇದಲ್ಲದೆ ವಯಸ್ಕರ ಶಿಕ್ಷಣ ಪ್ರಸಾರ, ದಲಿತರಿಗಾಗಿ ಶಿಕ್ಷಣ, ಬಾಲಬೋಧೆ ಪಠ್ಯಗಳ ರಚನೆ, ಹಳ್ಳಿಗಳಲ್ಲಿ ಹರಿಕೀರ್ತನೆ ಹಾಗು ಸಂಗೀತ ನಾಟಕಗಳ ಮೂಲಕ ಜ್ಞಾನಪ್ರಸಾರವನ್ನು ಕೈಗೊಂಡರು. ತಾವೆ ಸ್ವತಃ ಹರಿದಾಸರ ವೇಷದಲ್ಲಿ ಸಾಮಾಜಿಕ ಕೀರ್ತನೆಗಳನ್ನು ರಚಿಸಿ ಹಾಡಿದರು. ಸಾಮೂಹಿಕ ಭಜನೆ ಹಾಗು ವಾಚನಾಲಯಗಳ ಸ್ಥಾಪನೆಗೆ ಪ್ರೇರಣೆ ನೀಡಿದರು. ದಿವಾನ್ ಮಿರ್ಜಾ ರವರ ಕಾಲದಲ್ಲಿ ಮೈಸೂರಿನಲ್ಲಿ ನಡೆದ ಜನಗಣತಿಯ ಕಾರ್ಯದಲ್ಲಿ ಆದಿಕರ್ನಾಟಕ ಕಾಲೊನಿಯನ್ನು ಆರಿಸಿಕೊಂಡು ಅಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆಗೆ ಕಾರ್ಯಕ್ರಮ ನಡೆಯಿಸಿದರು.
ಕನ್ನಡದ ಹಾಸ್ಯಬ್ರಹ್ಮ ರಾ.ಶಿ (ಡಾ|ಎಮ್.ಶಿವರಾಮ) ಅವರು ಕಸ್ತೂರಿಯವರನ್ನು ತಮ್ಮ ಹಾಸ್ಯ ಮಾಸಿಕ ಕೊರವಂಜಿ ಯತ್ತ ಸೆಳೆದುಕೊಂಡರು.
ನಾಕ, ತಾರಕ, ರುದ್ರಮ್ಮ, ಶ್ರೀಮತಿ ಕೇಸರಿ, ಪಾಟಾಳಿ ಇತ್ಯಾದಿ ಕಾವ್ಯನಾಮಗಳಲ್ಲಿ ಕಸ್ತೂರಿಯವರು 'ಕೊರವಂಜಿ'ಗಾಗಿ ವಿಪುಲ ವಿನೋದ ಸಾಹಿತ್ಯ ರಚನೆ ಮಾಡಿದರು. ಇದೇ ಕಾಲಕ್ಕೆ ಶಂಕರ್ಸ್ ವೀಕ್ಲಿ ಯಲ್ಲಿ ಸಹ ಮಿಯರ್ ಪ್ರ್ಯಾಟಲ್ ಎನ್ನುವ ಅಂಕಣವನ್ನು ಬರೆಯುತ್ತಿದ್ದರು. ಕನ್ನಡದಲ್ಲಿ ಹಾಸ್ಯಲೇಖನ, ನಾಟಕ, ಕಾದಂಬರಿ, ಕವನಗಳನ್ನಲ್ಲದೆ ಅನರ್ಥಕೋಶ ವೆಂಬ ಹೊಸ ಪ್ರಕಾರವನ್ನೆ ಸೃಷ್ಟಿಸಿದರು.
ಈ ಸಮಯದಲ್ಲಿ ಡಾ| ಎಮ್.ವಿ.ಗೋಪಾಲಸ್ವಾಮಿಯವರ ಪ್ರಯತ್ನದ ಫಲವಾಗಿ ಮೈಸೂರು ಆಕಾಶವಾಣಿ ಪ್ರಾರಂಭವಾಯಿತು. ಆಕಾಶವಾಣಿ ಎನ್ನುವ ಹೆಸರನ್ನು ಸೂಚಿಸಿದವರೂ ಕಸ್ತೂರಿಯವರೆ. ಕಸ್ತೂರಿಯವರು ಪೂರ್ಣಾವಧಿಯ ಅಸಿಸ್ಟಂಟ್ ಡೈರೆಕ್ಟರ್ ಆಗಿ ಮೈಸೂರು ಆಕಾಶವಾಣಿಯಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದ ಬಳಿಕ ತಮ್ಮ ಮೂಲ ಹುದ್ದೆಗೆ ಮತ್ತೆ ಮರಳಿದರು; ಆದರೆ ಶಿವಮೊಗ್ಗಾಕ್ಕೆ ವರ್ಗವಾಗಿ ಹೋಗಬೇಕಾಯಿತು. ಅಲ್ಲೂ ಸಹ ಕಸ್ತೂರಿಯವರು 'ವರ್ಷಾಗಮ ಮಹೋತ್ಸವ, ಆಶುನಾಟಕ ಸ್ಪರ್ಧೆ, ಹಾಸ್ಯಚಟಾಕಿ ' ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ತುಂಬ ಜನಪ್ರಿಯರಾದರು. ೧೯೪೬ ರವರೆಗೆ ಶಿವಮೊಗ್ಗಾದಲ್ಲಿದ್ದ ಕಸ್ತೂರಿಯವರು, ಬೆಂಗಳೂರಿಗೆ ಮರಳಿ, ೧೯೪೯ರಲ್ಲಿ ಸೂಪರಿಂಟೆಂಡಂಟ್ ಎಂದು ಬಡ್ತಿ ಪಡೆದು, ದಾವಣಗೆರೆ ಇಂಟರ್‍ಮೀಡಿಯೆಟ್ ಕಾಲೇಜಿಗೆ ವರ್ಗವಾಗಿ ಹೋದರು. ೧೯೫೪ ರಲ್ಲಿ ವಿಶ್ವವಿದ್ಯಾಲಯದ ಸೇವೆಯಿಂದ ಕಸ್ತೂರಿ ನಿವೃತ್ತರಾದರು.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಆಧ್ಯಾತ್ಮಿಕ ಜೀವನ
ಕಸ್ತೂರಿಯವರು ೧೯೨೭ ರಲ್ಲಿಯೆ ಶಿವಾನಂದ ಸ್ವಾಮಿಗಳಿಂದ 'ಶ್ರೀ ರಾಮಕೃಷ್ಣ ಮಂತ್ರೋಪದೇಶ' ಪಡೆದಿದ್ದರು. ೧೯೪೭ ಅಗಸ್ಟ ನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ೯ ದಿನಗಳ ಬಳಿಕ ಅವರ ಕಿರಿಯ ಮಗ, ೧೮ರ ಪ್ರಾಯದ, ವೆಂಕಟಾದ್ರಿ ವಿಷಮಶೀತ ಜ್ವರದಿಂದ ಅಸು ನೀಗಿದ. ಕಸ್ತೂರಿಯವರಿಗೆ ಬದುಕೇ ಶೂನ್ಯವಾಯಿತು. ಈ ಸಂದರ್ಭದಲ್ಲಿ ಅವರಿಗೆ ಸಮಾಧಾನ ನೀಡಿದ್ದು ಸತ್ಯ ಸಾಯಿಬಾಬಾರ ಆಶ್ರಯ ಹಾಗು ಆಶ್ರಮ.[1]