ಫುಟ್‍ಬಾಲ್
From Wikipedia
'ಫುಟ್‍ಬಾಲ್ ಅಥವಾ ಕಾಲ್ಚೆಂಡಾಟ ಒಂದು ಹೊರಾಂಗಣ ಕ್ರೀಡೆ. ಈ ಕ್ರೀಡೆಯು ಜಗತ್ತಿನ ಅತ್ಯಂತ ಪ್ರಸಿದ್ಧವಾದ ಕ್ರೀಡೆಯಾಗಿದೆ. ಒಂದು ಅಂದಾಜಿನ ಪ್ರಕಾರ ಜಗತ್ತಿನ ೧.೫ ರಿಂದ ೨ ಬಿಲಿಯ ಜನರು ಈ ಕ್ರೀಡೆಯ ಪ್ರಿಯರು. ಫುಟ್‍ಬಾಲ್ ಎರಡು ತಂಡಗಳ ಮಧ್ಯೆ ನಡೆಯುವ ಆಟ. ಪ್ರತಿಯೊಂದು ತಂಡದಲ್ಲಿ ಹನ್ನೊಂದು ಆಟಗಾರರಿರುವರು. ಒಂದು ವಿಶಾಲವಾದ ಚೌಕ ಹುಲ್ಲಿನ ಕ್ರೀಡಾಂಗಣದಲ್ಲಿ ಆಡಲ್ಪಡುವ ಈ ಆಟದಲ್ಲಿ ಒಂದು ಗೋಳವಾದ ಚೆಂಡೆ(ಫುಟ್‍ಬಾಲ್) ಎಕೈಕ ಕ್ರೀಡಾ ಸಾಧನ. ಅತಿ ಸರಳವಾದ ನಿಯಮಗಳಿರುವುದೆ ಈ ಆಟದ ಪ್ರಸಿದ್ಧತೆಗೆ ಕಾರಣವೆನ್ನಲಾಗಿದೆ.
ಫುಟ್‍ಬಾಲ್ ಆಟವು ಅಂತರಾಷ್ಟ್ರೀಯ ಮಟ್ಟದಲ್ಲಿ ಫಿಫಾ (FIFA) ಎಂಬ ಮಂಡಳಿಯಿಂದ ನಿಯಂತ್ರಿತವಾಗಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್ ಫುಟ್‍ಬಾಲಿನ ಅತಿ ಶ್ರೇಷ್ಠವಾದ ಪಂದ್ಯಾವಳಿ. ಈ ಪ್ರಶಸ್ತಿಯನ್ನು ತಮ್ಮದಾಗಿಸಲು ಜಗತ್ತಿನ ವಿವಿಧ ದೇಶಗಳು ಸುಮಾರು ಒಂದು ತಿಂಗಳು ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರಯತ್ನಿಸುವರು. ಈ ಪಂದ್ಯಾವಳಿ ಕಡೆ ಬಾರಿ ೨೦೦೬ರ ಜೂನ್‍ನಲ್ಲಿ ಜರ್ಮನಿಯಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿಯ ಫೈನಲ್ ಆಟದಲ್ಲಿ ಇಟಲಿ ದೇಶವು ಫ್ರಾಂಸ್ ದೇಶವನ್ನು ಸೋಲಿಸಿ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯಾವಳಿಯ ಮುಂದಿನ ಸುತ್ತು ೨೦೧೦ ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ.
[ಬದಲಾಯಿಸಿ] ಫುಟ್‍ಬಾಲ್ ಆಟದ ಇತಿಹಾಸ
ಫುಟ್‍ಬಾಲ್ ಚೆಂಡನ್ನು ಒದೆಯುವ ಆಟ. ಇದರ ಇತಿಹಾಸ ಬಹಳ ಪ್ರಾಚೀನ. ಫಿಫಾ ಮಂಡಳಿಯ ಪ್ರಕಾರ, ಕ್ರಿ.ಪೂ ೨ನೇ ಶತಮಾನದಲ್ಲಿ ಚೀನಾ ದೇಶದಲ್ಲಿ ಒಂದು ಬಗೆಯ ಕಾಲ್ಚೆಂಡಾಟದ ಪುರಾವೆಳಿವೆ. ರೋಮನ್ ಸಾಮ್ರಾಜ್ಯದಲ್ಲಿ ಆಡಿಲ್ಪಡುತಿದ್ದ ಹರ್ಪಾಸ್ಟುಂ ( Harpastum ) ಆಟವು ಫುಟ್‍ಬಾಲಿನ ಪೂರ್ವಜ ಎನ್ನಬಹುದು.
ಆದರೆ, ಪ್ರಸ್ತುತ ಶೈಲಿಯ ಕಾಲ್ಚೆಂಡಾಟದ ಬಗೆ ಹಾಗೂ ನಿಯಮಗಳಿಗೆ ಬಹುತೇಕವಾಗಿ ಗ್ರೇಟ್ ಬ್ರಿಟನ್ ದೇಶವು ಕಾರಣ. ಇಂದಿನ ನಿಯಮಾವಳಿಗಳು ಮಧ್ಯ-೧೯ನೇ ಶತಮಾನದಲ್ಲಿ ಇಂಗ್ಲೆಂಡಿನ ಪಾಠಶಾಲೆಗಳಲ್ಲಿ ಕ್ರೀಡಾಶಿಕ್ಷಕರು ಹಾಗೂ ಪೂರ್ವವಿದ್ಯಾರ್ಥಿಗಳು ಶಾಲಾಮಟ್ಟದ ಪಂದ್ಯಗಳಿಗೋಸ್ಕರ ಬರೆದ ನಿಯಮಗಳನ್ನು ಹಿನ್ನಲೆಯಾಗಿಟ್ಟು ಬೆಳೆದಿರುತ್ತವೆ. ಹಾಗಾಗಿ ಈ ಆಟವು ಒಂದು "ದಂಗಾಖೋರರ" ಅಟದಿಂದ ಒಂದು ಶಿಸ್ತಿನ, ಜನಪ್ರಿಯ ಆಟಕ್ಕೆ ತಿರುಗಿತು. ಪ್ರಪ್ರಥಮ ಬಾರಿಗೆ ಫುಟ್‍ಬಾಲ್ ನಿಯಮಗಳನ್ನು ಇಂಗ್ಲೆಂಡಿನ ಎಟನ್ ಕಾಲೇಜಿನಲ್ಲಿ ೧೮೧೫ ರಲ್ಲಿ ಬರೆಯಲಾಯಿತು. ನಂತರ ಕೇಂಬ್ರಿಡ್ಜಿನ ಟ್ರಿನಿಟಿ ಕಾಲೇಜಿನಲ್ಲಿ ೧೮೪೮ ರಲ್ಲಿ ಅದರಲ್ಲಿ ಬದಲಾವನೆಗಳನ್ನು ಅನುಮೋದಿಸಲಾಯಿತು. ಇದೇ ಸಮಯದಲ್ಲಿ ಹಲವಾರು ಫುಟ್‍ಬಾಲ್ ತಂಡ(ಕ್ಲಬ್)ಗಳು ತಮ್ಮದೇ ನಿಯಮಗಳ ಪ್ರಕಾರ ಆಟವನ್ನು ಆಡುತ್ತಿದ್ದರು. ಇವೆಲ್ಲರ ಫಲವಾಗಿ ೧೮೬೩ರ ೨೬ ಅಕ್ಟೋಬರ್ಂದು ಫುಟ್‍ಬಾಲ್ ಅಸೋಸಿಯೇಷನ್ (ಎಫ್. ಏ) ವನ್ನು ಸ್ಥಾಪಿಸಿ ಒಂದು ಸಮಗ್ರ ನಿಯಮವಳಿಗಳನ್ನು ರೂಪಿಸಲಾಯಿತು. ಮುಂದೆ ೧೯೦೪ರಲ್ಲಿ ಫಿಫಾ ಅಂತರಾಷ್ಟ್ರೀಯ ಸಂಸ್ಥೆಯು ಪ್ಯಾರಿಸ ನಗರದಲ್ಲಿ ಸ್ಥಾಪಿತಗೊಂಡು ಎಫ್‍ಏ ಸಂಸ್ಥೆಯು ನಿರ್ಮಿಸಿದ ನಿಯಮಗಳನ್ನೆ ಅನುಸರಿಸಿತು. ಅಂದಿನಿಂದ ಇಂದಿನವರೆಗೆ ಈ ನಿಯಮಗಳನ್ನು ಅಡಿಪಾಯವಾಗಿಟ್ಟುಕೊಂಡು ಈ ಆಟವನ್ನು ಪ್ರಪಂಚದ ೨೪೦ ದಶಲಕ್ಷ ಜನರು ಆಡುತ್ತಿರುವರು. ಇಂದು ಜಗತ್ತಿನಲ್ಲಿ ಸಹಸ್ರಾರು ವೃತ್ತಿಪರ ಫುಟ್‍ಬಾಲ್ ತಂಡಗಳಿದ್ದಾವೆ. ಈ ತಂಡಗಳಿಗೆ ಲಕ್ಷಾಂತರ ಅಭಿಮಾನಿಗಳು ತಮ್ಮ ತಂಡಗಳನ್ನು ಪ್ರೋತ್ಸಾಹಿಸಲು ಅವರಾಡುವ ಆಟಗಳನ್ನು ವೀಕ್ಷೀಸುತ್ತಾರೆ. ಕೆಲವೊಮ್ಮೆ ಭಾವನೆಗಳು ಉದ್ರೇಕಗೊಂಡು ಎರಡು ತಂಡಗಳ ಆಭಿಮಾನಿಗಳು ಕಾದಾಡುವುದುಂಟು. ಆದರೆ, ಫಿಫಾ ಮಂಡಳಿಯ ಶಿಸ್ತು ಕ್ರಮಗಳು ಇಂತಹ ಘಟನೆಗಳನ್ನು ಬಹಳ ಕಡಿಮೆಗೊಳಿಸಿದೆ.