ಫ.ಗು.ಹಳಕಟ್ಟಿ
From Wikipedia
ವಚನ ಪಿತಾಮಹರೆಂದು ಪ್ರಸಿದ್ಧಿ ಪಡೆದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ೧೮೮೦ ಜುಲೈ ೨ರಂದು ಧಾರವಾಡದಲ್ಲಿ ಜನಿಸಿದರು. ಇವರ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರು. ಹಳಕಟ್ಟಿಯವರು ಬಾಲ್ಯದಲ್ಲಿಯೆ ತಮ್ಮ ತಾಯಿಯನ್ನು ಕಳೆದುಕೊಂಡು, ಮಲತಾಯಿಯ ಅಧೀನದಲ್ಲಿ ಬೆಳೆಯಬೇಕಾಯಿತು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಹಳಕಟ್ಟಿಯವರು ೧೮೯೪ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾಗಿ ಮುಂಬಯಿಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ೧೯೦೪ರಲ್ಲಿ ಎಲ್ಎಲ್.ಬಿ. ಪದವಿ ಪದವಿ ಪಡೆದರು.
[ಬದಲಾಯಿಸಿ] ವೃತ್ತಿ
ಕಾನೂನು ಪದವಿ ಪಡೆದ ಬಳಿಕ,ಹಳಕಟ್ಟಿಯವರು ಬೆಳಗಾವಿಯಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ಕೆಲಕಾಲ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. ಕೊನೆಗೊಮ್ಮೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ವಚನ ಸಂಪಾದನೆಯ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು
[ಬದಲಾಯಿಸಿ] ವಚನ ಸಂಪಾದನೆ
ಹಳಕಟ್ಟಿಯವರು ವಿಜಾಪುರವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡು, ಊರೂರು ತಿರುಗಿ ವಚನಗಳ ಹಸ್ತಪ್ರತಿಗಳನ್ನು, ತಾಳೆಯೋಲೆಗಳನ್ನು ಸಂಗ್ರಹಿಸಿದರು. ೧೯೨೦ರಲ್ಲಿ ಒಂದು ಪ್ರದರ್ಶನವನ್ನೇ ಏರ್ಪಡಿಸಿದರು. ಸುಮಾರು ೨೫೦ ವಚನಕಾರರನ್ನು ಗುರುತಿಸಿ, ಅವರ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು.
ಇದಲ್ಲದೆ, ಹರಿಹರನ ೪೦ಕ್ಕೂ ಹೆಚ್ಚು ರಗಳೆಗಳನ್ನು ಸಂಪಾದಿಸಿ ಪ್ರಕಟಿಸಿದರು.
‘ಶಿವಾನುಭವ’ ಎನ್ನುವ ಪತ್ರಿಕೆಯನ್ನು ಹೊರಡಿಸಿ, ಆ ಪತ್ರಿಕೆಯ ಮೂಲಕ ತಮ್ಮ ಸಂಶೋಧನೆಗಳನ್ನು ಪ್ರಕಟಿಸಿದರು.
[ಬದಲಾಯಿಸಿ] ಶಿಕ್ಷಣ ಕ್ಷೇತ್ರ
ಹಳಕಟ್ಟಿಯವರ ಕಾರ್ಯಕ್ಷೇತ್ರ ವಚನ ಸಂಪಾದನೆಗಷ್ಟೆ ಸೀಮಿತವಾಗಿರದೆ, ಶಿಕ್ಷಣ ಕ್ಷೇತ್ರಕ್ಕೂ ಪಸರಿಸಿತ್ತು. ವಿಜಾಪುರದಲ್ಲಿ ಬಿ.ಎಲ್.ಡಿ.ಇ. ಎನ್ನುವ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಗಳನ್ನು ನಡೆಯಿಸಿದರು.
[ಬದಲಾಯಿಸಿ] ಸಾಮಾಜಿಕ ಚಟುವಟಿಕೆ
ಹಳಕಟ್ಟಿಯವರು ಭೂತನಾಳ ಕೆರೆಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿದ್ದರು. ಅದರಂತೆ ಜಿಲ್ಲಾ ಲೋಕಲ್ ಬೋರ್ಡಿನ ಸದಸ್ಯ, ಜಿಲ್ಲಾ ಅಬಿವೃದ್ಧಿ ಮಂಡಲ ಹಾಗು ವಿಲ್ಸನ್ ಬರಗಾಲ ನಿವಾರಣಾ ಸಂಸ್ಥೆಯ ಕಾರ್ಯದರ್ಶಿ ಸಹ ಆಗಿದ್ದರು. ನೇಕಾರರ ಸಹಕಾರ ಸಂಘ, ಹತ್ತಿ ಮಾರಾಟ ಸಂಘ, ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ ಇವೆಲ್ಲವುಗಳ ಸ್ಥಾಪನೆಯಲ್ಲಿ ಪ್ರಯತ್ನಪಟ್ಟರು.
ಹಳಕಟ್ಟಿಯವರು ೧೯೨೦ರಲ್ಲಿ ಮುಂಬಯಿ ಪ್ರಾಂತದ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದರು. ೧೯೨೮ರಲ್ಲಿ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಏಕೀಕರಣದ ಉದ್ದೇಶಕ್ಕಾಗಿಯೇ ‘ನವಕರ್ನಾಟಕ’ ಎನ್ನುವ ವಾರಪತ್ರಿಕೆಯನ್ನು ಪ್ರಾರಂಭಿಸಿದರು.
೧೯೩೧ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸೆನೇಟ್ ಸದಸ್ಯರಾಗಿದ್ದರು.
೧೯೩೩ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದರು.
[ಬದಲಾಯಿಸಿ] ಗೌರವ
- ೧೯೨೬ರಲ್ಲಿ ಬಳ್ಳಾರಿಯಲ್ಲಿ ಜರುಗಿದ ೧೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಮೂಲಕ ಹಳಕಟ್ಟಿಯವರನ್ನು ಗೌರವಿಸಲಾಯಿತು.
- ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತು.
[ಬದಲಾಯಿಸಿ] ಕುಟುಂಬ ಜೀವನ
ಹಳಕಟ್ಟಿಯವರ ಪತ್ನಿ ಶ್ರೀಮತಿ ಭಾಗೀರಥಿಬಾಯಿ. ಇವರದು ೫೯ ವರ್ಷಗಳ ದೀರ್ಘ ದಾಂಪತ್ಯ ಜೀವನ. ಇವರಿಗೆ ಐವರು ಮಕ್ಕಳು.
ಶ್ರೀ ಹಳಕಟ್ಟಿಯವರು ೧೯೬೪ ಜೂನ್ ೨೯ರಂದು ನಿಧನರಾದರು.
[ಬದಲಾಯಿಸಿ] ಕೃತಿಗಳು
- ವಚನ ಶಾಸ್ತ್ರಸಾರ ಸಂಪುಟ (೧,೨,೩)
- ಶರಣರ ಚರಿತ್ರೆಗಳು (೧,೨,೩)
- ಶಿವಶರಣೆಯರ ಚರಿತ್ರೆ
- ಅಮರಗಣಾಧೀಶ್ವರ ಚರಿತ್ರೆ
- ಶಿವಾನುಭವ ಶಬ್ದಕೋಶ
- ಕೆಳದಿ ಸಂಸ್ಥಾನದ ರಾಯರ ವಂಶಾವಳಿ
- ಕೊಡಗು ಸಂಸ್ಥಾನದ ರಾಜೇಂದ್ರನಾಮ
- ಬಿಳಗಿ ಅರಸುಗಳ ವಂಶಾವಳಿ
- ನಿರಂಜನ ವಂಶರತ್ನಾಕರ
- ಆದಿಶೆಟ್ಟಿ ಪುರಾಣ
- ವಚನ ಹಾಗು ರಗಳೆಗಳ ಸಂಪಾದಿತ ಗ್ರಂಥಗಳು (೭೦ಕ್ಕೂ ಹೆಚ್ಚು)
- ೨೫೦ ವಚನಕಾರರ ವಚನ ಸಂಗ್ರಹ
- ಹರಿಹರನ ೪೨ ರಗಳೆಗಳ ಪ್ರಕಟಣೆ (೭ ಸಂಪುಟಗಳು)