ಭಾರತದ ವಿಭಜನೆ
From Wikipedia
ಭಾರತದ ವಿಭಜನೆ ಎಂದರೆ ಆಗಸ್ಟ್ ೧೫, ೧೯೪೭ರಂದು ಬ್ರಿಟಿಷರ್ಯ್ ಸ್ವಾತಂತ್ರ್ಯ ಕೊಟ್ಟ ಮೇಲೆ ಭಾರತ ಮತ್ತು ಪಾಕಿಸ್ತಾನ ದೇಶಗಳಾಗಿ ಹೊಂದಿದ ವಿಭಜನೆ. ಇನ್ನೂ ಸ್ಪಷ್ಟವಾಗಿ ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳು ವಿಭಜನೆಯಾಗಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶಗಳ ಉದಯ.
ಪರಿವಿಡಿ |
[ಬದಲಾಯಿಸಿ] ವಿಭಜನೆಯ ಹಿನ್ನೆಲೆ
ವಿಭಜನೆಯ ಬೀಜ ಸ್ವಾತಂತ್ರ್ಯಕ್ಕಿಂತ ಮುಂಚೆ, ಭಾರತ ರಾಷ್ಟ್ರೀಯವಾದಿ ಗುಂಪುಗಳ ವೈರುಧ್ಯಗಳ ಕಾರಣದಿಂದ ಬಿತ್ತಲಾಯಿತು. ಹಿಂದೂ ಬಹುಮತದಿಂದ ಮುಸ್ಲಿಮರು ಬೆದರಿದರೆ, ರಾಷ್ಟ್ರೀಯ ನಾಯಕರು ಮುಸ್ಲಿಮರನ್ನು ಓಲೈಸುವುದನ್ನು ಕಂಡು ಹಿಂದೂಗಳಿಗೆ ಅಸಮಾಧಾನ.
೧೯೦೬ರಲ್ಲಿ ಢಾಕಾದಲ್ಲಿ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ಮುಸ್ಲಿಂ ಲೀಗ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಅಸಮಾಧಾನಗೊಂಡ ಮುಸ್ಲಿಮರು ಹುಟ್ಟುಹಾಕಿದ ಪಕ್ಷ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಟ್ಟವರಲ್ಲಿ ಅಲ್ಲಮ ಇಕ್ಬಾಲ್ ಮೊದಲಿಗರಾಗಿದ್ದರು. ಸಿಂಧ್ ವಿಧಾನ ಪರಿಷತ್ತು ೧೯೩೫ರಲ್ಲಿ ಇಂತಹ ಒಂದು ನಿರ್ಣಯ ಕೈಗೊಂಡಿತು. ಇಕ್ಬಾಲ್ ಮತ್ತಿತರ ನಾಯಕರು ಕೊನೆಗೂ ಹಿಂದೂ-ಮುಸ್ಲಿಂ ಏಕತೆಗೆ ಹೋರಾಡುತ್ತಿದ್ದ ಮೊಹಮ್ಮದ್ ಅಲಿ ಜಿನ್ನಾರನ್ನು ತಮ್ಮತ್ತ ಸೆಳೆಯುವುದರಲ್ಲಿ ಸಫಲರಾದರು. ಇದರ ನಂತರ ಪ್ರತ್ಯೇಕತಾವಾದಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಜಿನ್ನಾ, ಹಿಂದೂ ಮತ್ತು ಮುಸ್ಲಿಮರ ವೈಪರೀತ್ಯಗಳನ್ನು ಎತ್ತಿ ತೋರಿಸಿ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗನ್ನು ಜೋರು ಮಾಡಿದರು. ಆದರೆ ಜಾತ್ಯತೀತವಾದಿಗಳಾದ ಕಾಂಗ್ರೆಸ್ ನಾಯಕರು ಧರ್ಮದ ಆಧಾರದ ಮೇಲೆ ದೇಶದ ವಿಭಜನೆಯ ಕಲ್ಪನೆಯನ್ನು ವಿರೋಧಿಸಿದರು. ಬಹು ವರ್ಷಗಳ ಕಾಲ ಮಹಾತ್ಮಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ತೊರೆಯದಂತೆ ಮನವೊಲಿಸುವ ಕಾರ್ಯದಲ್ಲಿ ತೊಡಗಿದರು. ಇದು ಹಿಂದೂ-ಮುಸ್ಲಿಂ ಇಬ್ಬರಲ್ಲೂ ಅಸಮಾಧಾನದ ಹೊಗೆಯಾಡುವಂತೆ ಮಾಡಿತು. ಇದರಿಂದ ಹೊರಹೊಮ್ಮಿದ ಜ್ವಾಲೆ ಆಗಸ್ಟ್ ೧೯೪೬ರಲ್ಲಿ ಕಲ್ಕತ್ತಾದಲ್ಲಿ ಡೈರೆಕ್ಟ್ ಆಕ್ಷನ್ ಡೇ (ನೇರ ಕಾರ್ಯಾಚರಣೆಯ ದಿನ) ೫೦೦೦ ಜನರನ್ನು ಬಲಿ ತೆಗೆದುಕೊಂಡಿತು. ಉತ್ತರ ಭಾರತ ಮತ್ತು ಬಂಗಾಳದಾದ್ಯಂತ ಮತೀಯ ಗಲಭೆಗಳು ಉಂಟಾದ ಹಿನ್ನೆಲೆಯಲ್ಲಿ ಸಂಪೂರ್ಣ ಅಂತಃಕಲಹವನ್ನು ತಡೆಯುವ ಸಲುವಾಗಿ ದೇಶದ ವಿಭಜನೆಯ ಕೂಗು ತಾರಕಕ್ಕೇರಿತು.
[ಬದಲಾಯಿಸಿ] ವಿಭಜನೆಯ ಪ್ರಕ್ರಿಯೆ
ಎರಡು ರಾಷ್ಟ್ರಗಳ ವಿಭಜನೆಯು ಮೌಂಟ್‌ಬ್ಯಾಟನ್ ಯೋಜನೆಯಡಿ ನಡೆಯಿತು. ಭಾರತ ಮತ್ತು ಪಾಕಿಸ್ತಾನದ ನಡುವಣ ಗಡಿಯನ್ನು ಬ್ರಿಟಿಷ್ ಸರಕಾರ ನಿಯೋಜಿಸಿದ ಸಿರಿಲ್ ರಾಡ್‌ಕ್ಲಿಫ್ ಕಲ್ಪಿಸಿದನು. ಭೌಗೋಳಿಕವಾಗಿ ಭಾರತದಿಂದ ಪ್ರತ್ಯೇಕಿಸಲ್ಪಟ್ಟ ಎರಡು ರಾಜ್ಯಗಳಾಗಿ ಪಾಕಿಸ್ತಾನವು ಉದಯಗೊಂಡಿತು. ಜುಲೈ ೧೮, ೧೯೪೭ರಂದು ಬ್ರಿಟಿಷ್ ಸಂಸತ್ತಿನಲ್ಲಿ ಭಾರತದ ಸ್ವಾತಂತ್ರ್ಯ ಕಾಯ್ದೆಯನ್ನು ತರಲಾಯಿತು. ೧೯೩೫ರ ಭಾರತ ಸರಕಾರ ಕಾಯ್ದೆ ಇವೆರಡು ದೇಶಗಳ ಸಾಂವಿಧಾನಿಕ ಚೌಕಟ್ಟಾಯಿತು. ಬ್ರಿಟಿಷರ ಅಧೀನವಾಗದೇ ಉಳಿದಿದ್ದ ೫೬೫ ಸ್ಚತಂತ್ರ ರಾಜ್ಯಗಳಿಗೆ ಎರಡು ರಾಷ್ಟ್ರಗಳಲ್ಲಿ ಯಾವ ರಾಷ್ಟ್ರಕ್ಕಾದರೂ ಸೇರಿಕೊಳ್ಳುವ ಆಯ್ಕೆ ನೀಡಲಾಯಿತು. ಜುನಾಗಢ, ಹೈದರಾಬಾದ್ ರಾಜ್ಯ, ಮತ್ತು ವಿಶೇಷತಃ ಕಾಶ್ಮೀರ ರಾಜ್ಯಗಳು ವಿವಾದಿತವಾದವು.
[ಬದಲಾಯಿಸಿ] ಜನರ ವಲಸೆ
ವಿಭಜನೆಯ ನಂತರದ ದಿನಗಳಲ್ಲಿ ಬೃಹತ್ ಪ್ರಮಾಣಗಳಲ್ಲಿ ಜನತೆಯ ವಲಸೆ ಪ್ರಾರಂಭವಾಯಿತು. ಸುಮಾರು ೧.೪೫ ಕೋಟಿ ಜನ ಗಡಿಯನ್ನು ದಾಟಿ ತಮ್ಮ ಬಹುಸಂಖ್ಯಾತ ಧರ್ಮದ ಪ್ರದೇಶಕ್ಕೆ ತೆರಳಿದರು. ೧೯೫೧ರ ಜನಗಣತಿಯ ಪ್ರಕಾರ ಭಾರತದಿಂದ ೭೨ ಲಕ್ಷ ಮುಸ್ಲಿಮರು ಪಾಕಿಸ್ತಾನಕ್ಕೂ ಮತ್ತು ೭೨ ಲಕ್ಷ ಹಿಂದೂಗಳು ಮತ್ತು ಸಿಕ್ಖರು ಪಾಕಿಸ್ತಾನದಿಂದ ಭಾರತಕ್ಕೂ ವಲಸೆ ಬಂದರು. ಎರಡು ಕಡೆಗೂ ಅಗಾಧ ಪ್ರಮಾಣದಲ್ಲಿ ಮಾರಣ ಹೋಮ ನಡೆಯುತ್ತಿದ್ದರೂ ಹೊಸದಾಗಿ ರಚಿಸಲ್ಪಟ್ಟ ಸರಕಾರಗಳು ಇವನ್ನು ತಡೆಯಲು ವಿಫಲವಾದವು. ಇದರಲ್ಲಿ ಮೃತರಾದವರ ಸಂಖ್ಯೆಯ ಅಂದಾಜು ಎರಡರಿಂದ ಹತ್ತು ಲಕ್ಷ.
[ಬದಲಾಯಿಸಿ] ಇಂದಿನ ಧಾರ್ಮಿಕ ಜನಸಂಖ್ಯೆ
ವಿಭಜನೆಯ ನಂತರದ ಬೃಹತ್ ಪ್ರಮಾಣದ ಜನವಲಸೆಯ ನಂತರವೂ ಜಾತ್ಯತೀತ ಭಾರತದಲ್ಲಿ (ಇಂಡೊನೇಷ್ಯಾದ ನಂತರ) ಪ್ರಪಂಚದ ಎರಡನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯಿದೆ. ಇಸ್ಲಾಮೀಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಕನಿಷ್ಠ ಪ್ರಮಾಣದ ಅಲ್ಪಮತೀಯ ಜನರಿದ್ದಾರೆ.
[ಬದಲಾಯಿಸಿ] ಭಾರತದಲ್ಲಿ ಬಂದಿಳಿದ ನಿರಾಶ್ರಿತರು
ಭಾರತಕ್ಕೆ ವಲಸೆ ಬಂದ ಬಹಳ ಹಿಂದೂಗಳು ಮತ್ತು ಸಿಕ್ಖರು ಪಂಜಾಬ್ ಮತ್ತು ದೆಹಲಿ ಪ್ರದೇಶಗಳಲ್ಲಿ ನೆಲೆಯೂರಿದರು. ಹಿಂದೂ ಸಿಂಧಿಗಳು ಇಡೀ ಭಾರತದಲ್ಲಿ ಹಂಚಿ ಹೋದರೂ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಮುಖವಾಗಿ ನೆಲೆಸಿದ್ದಾರೆ. ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ)ದಿಂದ ಬಂದ ಬಂಗಾಳಿ ಹಿಂದೂಗಳು ಪೂರ್ವ ಭಾರತದ ಬಹು ಪ್ರದೇಶಗಳಲ್ಲಿ ಹಂಚಿ ಹೋದರು.
ಪೂರ್ವ ವಲಸಿಗರು ಇಂದಿನ ಭಾರತದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಇಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪಶ್ಚಿಮ ಪಂಜಾಬಿನ ಸಿಖ್ ಕುಟುಂಬಕ್ಕೆ ಸೇರಿದವರು. ಪೂರ್ವ ಪ್ರಧಾನ ಮಂತ್ರಿ ಇಂದ್ರ ಕುಮಾರ್ ಗುಜ್ರಾಲ್ ಪಾಕಿಸ್ತಾನದ ಝೇಲಂ ನಗರದಲ್ಲಿ ಹುಟ್ಟಿದ ಪಂಜಾಬಿ ಹಿಂದೂ. ಭಾರತೀಯ ಜನತಾ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕರಾಚಿ ನಗರದಲ್ಲಿ ಜನಿಸಿದ ಸಿಂಧಿ. ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ ಜ್ಯೋತಿ ಬಸು ಪೂರ್ವ ಬಂಗಾಳದಿಂದ ವಲಸೆ ಬಂದ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
[ಬದಲಾಯಿಸಿ] ಪಾಕಿಸ್ತಾನಕ್ಕೆ ಬಂದಿಳಿದ ನಿರಾಶ್ರಿತರು
ಪಾಕಿಸ್ತಾನಕ್ಕೆ ಬಂದ ವಲಸೆಗಾರರು ಭಾರತದ ವಿವಿಧ ಭಾಗಗಳಿಂದ ಆಗಮಿಸಿದರು. ಅಧಿಕ ಪ್ರಮಾಣದಲ್ಲಿ ವಲಸೆ ಹೋದ ಪಂಜಾಬಿ ಮುಸ್ಲಿಮರು ಅಲ್ಲಿನ ಜನರಲ್ಲಿ ಲೀನರಾದರು. ಆದರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಬಿಹಾರ ಮತ್ತಿತರ ರಾಜ್ಯಗಳಿಂದ ಪಾಕಿಸ್ತಾನಕ್ಕೆ ತೆರಳಿದ ವಲಸೆಗಾರರು ತಮ್ಮನ್ನು ಮುಹಾಜಿರ್ ಗಳೆಂದು ಕರೆದುಕೊಳ್ಳುತ್ತಾರೆ.
ಪಾಕಿಸ್ತಾನದ ಇಂದಿನ ಅಧ್ಯಕ್ಷ ಪರ್ವೆಜ್ ಮುಷರಫ್ ದೆಹಲಿಯ ದರಿಯಾ ಗಂಜ್ ಪ್ರದೇಶದಲ್ಲಿ ಜನಿಸಿದವರು. ಪಾಕಿಸ್ತಾನದ ಪ್ರಥಮ ಪ್ರಧಾನ ಮಂತ್ರಿ ಲಿಯಾಕತ್ ಅಲಿ ಖಾನ್ ಹರಿಯಾಣ ರಾಜ್ಯದ ಕರ್ನಾಲ್‌ನಲ್ಲಿ ಹುಟ್ಟಿದವರಾಗಿದ್ದಾರೆ.
[ಬದಲಾಯಿಸಿ] ಪರಿಣಾಮಗಳು
ಹಿಂದೂ-ಮುಸ್ಲಿಂ ಹಿಂಸಾಚಾರ ವಿಭಜನೆಯ ನಂತರವೂ ಮುಂದುವರಿಯಿತು.
- ಲಕ್ಷಾಂತರ ಬಂಗಾಳಿ ಹಿಂದೂಗಳು ಮತ್ತು ಮುಸ್ಲಿಮರನ್ನು ೧೯೭೧ರಲ್ಲಿ ಪಾಕಿಸ್ತಾನಿ ಸೇನೆ ಮತ್ತು ಮುಸ್ಲಿಂ ಮೂಲಭೂತವಾದಿಗಳು ಕೊಂದು ಹಾಕಿದರು.
- ಪಾಕಿಸ್ತಾನದಲ್ಲಿ ಉಳಿದ ಹಿಂದೂಗಳನ್ನು ವಿವಿಧ ರೀತಿಯಲ್ಲಿ ಹಿಂಸಿಸಲಾಯಿತು.
- ಭಾರತದಲ್ಲಿ ಕಾಲಕಾಲಕ್ಕೆ ಮತೀಯ ಗಲಭೆಗಳು ಹೆಡೆಯೆತ್ತುತ್ತವೆ.
- ಭಾರತ ಮತ್ತು ಪಾಕಿಸ್ತಾನಗಳು ನಾಲ್ಕು ಯುದ್ಧಗಳನ್ನು ಸೆಣೆಸಿವೆ.
- ವಿಭಜನೆಯ ನಂತರ ಅಸ್ತಿತ್ವಕ್ಕೆ ಬಂದ ಎಲ್ಲ ನಾಲ್ಕು ರಾಷ್ಟ್ರಗಳೂ ಕಾಲಕಾಲಕ್ಕೆ ಅಂತಃಕಲಹ ಎದುರಿಸಬೇಕಾಗಿ ಬಂದಿದೆ:
- ೧೯೭೧ರ ಬಾಂಗ್ಲಾದೇಶ ವಿಮೋಚನೆ ಯುದ್ಧ ಮತ್ತು ನಂತರ ೧೯೭೧ರ ಭಾರತ-ಪಾಕಿಸ್ತಾನ ಯುದ್ಧ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದವು
- ಸಿಕ್ಕರ ಪ್ರತ್ಯೇಕತಾವಾದಿ ಖಲಿಸ್ತಾನ ಚಳುವಳಿ ೧೯೮೪ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಗೆ ಕಾರಣವಾಯಿತು
- ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಪಾಕಿಸ್ತಾನ ಬೆಂಬಲಿತ ಉಗ್ರವಾದ
- ಆಂಧ್ರ ಪ್ರದೇಶದಲ್ಲಿ ನಕ್ಸ್ಲಲರ ಕಾಳಗ
- ಈಶಾನ್ಯ ಭಾರತದಲ್ಲಿ ಮಾವೋವಾದಿಗಳ ಹಿಂಸಾಚಾರ
- ಪಾಕಿಸ್ತಾನದ ಮುಹಾಜಿರ್ ಚಳುವಳಿ
[ಬದಲಾಯಿಸಿ] ಇವುಗಳನ್ನೂ ನೋಡಿ
- ಭಾರತದ ಸ್ವಾತಂತ್ರ್ಯ ಚಳುವಳಿ
- ಬ್ರಿಟಿಷ್ ಸಾಮ್ರಾಜ್ಯ
- ಬಾಂಗ್ಲಾದೇಶದ ಇತಿಹಾಸ
- ಭಾರತದ ಇತಿಹಾಸ
- ಪಾಕಿಸ್ತಾನದ ಇತಿಹಾಸ
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಭಾರತದ ಸ್ವಾತಂತ್ರ್ಯ | |
---|---|
ಚರಿತ್ರೆ: | ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ |
ತತ್ವಗಳು: | ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ |
ಘಟನೆ-ಚಳುವಳಿಗಳು: | ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ |
ಸಂಘಟನೆಗಳು: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ |
ನಾಯಕರು: | ಮಂಗಲ ಪಾಂಡೆ - ಝಾನ್ಸಿ ರಾಣಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್ |
ಬ್ರಿಟಿಷ್ ಆಡಳಿತ: | ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್ |
ಸ್ವಾತಂತ್ರ್ಯ: | ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ |