ಮುತ್ತುಸ್ವಾಮಿ ದೀಕ್ಷಿತ
From Wikipedia
ಮುತ್ತುಸ್ವಾಮಿ ದೀಕ್ಷಿತ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು (ಶ್ರೀ ತ್ಯಾಗರಾಜ ಮತ್ತು ಶ್ಯಾಮಾ ಶಾಸ್ತ್ರಿ ಅವರೊಂದಿಗೆ). ಅಪರೂಪದ ರಾಗಗಳಲ್ಲಿ ಅನೇಕ ಕೃತಿಗಳನ್ನು ರಚಿಸಿರುವುದಕ್ಕೆ ಇವರು ಪ್ರಸಿದ್ಧರು. ಇವರ ಎಲ್ಲ ಕೃತಿಗಳಲ್ಲಿ "ಗುರುಗುಹ" ಎ೦ಬ ಮುದ್ರೆ ಇರುತ್ತದೆ. ಇವರ ಪೂರ್ವಜರು ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿ ಪ್ರದೇಶವಾದ ವಿರಿಂಚಿಪುರಂ ನಲ್ಲಿದ್ದವರು. ಇವರ ತಂದೆ ರಾಮಸ್ವಾಮಿ ದೀಕ್ಷಿತರೂ ಮಹಾನ್ ಮೇಧಾವಿ ಸಂಗೀತ ವಿದ್ವಾಂಸರು. ಇನ್ನೆರಡು ಸಂಗೀತ ತ್ರಿಮೂರ್ತಿಗಳಂತೆ ಮುತ್ತುಸ್ವಾಮಿ ದೀಕ್ಷಿತರು ಜನಿಸಿದ್ದೂ ತಮಿಳುನಾಡಿನ ತಿರುವಾರೂರಿನಲ್ಲಿ. ತಮ್ಮ ಜೀವನಕಾಲದಲ್ಲಿ ಹಲವಾರುಕಡೆ ಪ್ರಯಾಣಿಸಿ, ಹಲವೆಡೆ ವಾಸಿಸಿ, ಕೊನೆಗೆ ತಿರುನೆಲ್ವೇಲಿ ಬಳಿಯ ಎಟ್ಟಯಪುರಮ್ ನ ಆಸ್ಥಾನದಲ್ಲಿ ಆಶ್ರಯ ಪಡೆದವರು.
ಇವರ ಸಂಗೀತ ಶೈಲಿಯನ್ನು ನಾರಿಕೇಳಪಾಕಕ್ಕೆ ಹೋಲಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ, ಹೇಗೆ ಹೊರಗೆ ಕಠಿಣವಾದ ಕರಟವಿದ್ದು ಒಳಗೆ ಸವಿಯಾದ ಎಳನೀರೂ, ರುಚಿಯಾದ ಕಾಯಿಯೂ ಇರುತ್ತದೋ ಅದೇ ರೀತಿ, ಮೇಲ್ನೋಟಕ್ಕೆ ಇವರ ಕೃತಿಗಳು ಕಠಿಣವಾಗಿ ತೋರಿದರೂ,ಅವುಗಳಲ್ಲಿನ ಸಂಗೀತ ಸಾಹಿತ್ಯದ ಅಂಶಗಳಿಂದಾಗಿ, ಅವರ ಅತಿ ಉತ್ತಮ ದರ್ಜೆಯ ವಾಗ್ಗೇಯಕಾರತ್ವಕ್ಕೆ ನಿದರ್ಶನವಾಗಿವೆ.