ಮುಳಿಯ ತಿಮ್ಮಪ್ಪಯ್ಯ
From Wikipedia
ಮುಳಿಯ ತಿಮ್ಮಪ್ಪಯ್ಯ ನವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ವಿಟ್ಲ ಗ್ರಾಮದಲ್ಲಿ ೧೮೮೮ ಮಾರ್ಚ ೩ ರಂದು ಹುಟ್ಟಿದರು. ತಂದೆ ಕೇಶವ ಭಟ್ಟ; ತಾಯಿ ಮೂಕಾಂಬಿಕಾ.
ಪರಿವಿಡಿ |
[ಬದಲಾಯಿಸಿ] ವಿದ್ಯಾಭ್ಯಾಸ
ಬಡತನದ ಪರಿಸ್ಥಿತಿಯಿಂದಾಗಿ ೪ನೆಯ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ತಿಮ್ಮಪ್ಪಯ್ಯನವರು ಮನೆಯಲ್ಲಿಯೆ ಅಲ್ಪಸ್ವಲ್ಪ ಸಂಸ್ಕೃತ ಹಾಗು ಸಂಗೀತ ಕಲಿತರು. ೧೯೦೬ ರಲ್ಲಿ ಯಾರಿಗೂ ಹೇಳದೆ ತಿರುವನಂತಪುರಕ್ಕೆ, ಅಲ್ಲಿಂದ ಮೈಸೂರಿಗೆ ತೆರಳಿದರು. ವಾರಾನ್ನದ ಮೂಲಕವೆ ಜೀವನ ಸಾಗಿಸುತ್ತ ವಾಸುದೇವಾಚಾರ್ಯ ಎನ್ನುವವರಿಂದ ಸಂಗೀತ ಶಿಕ್ಷಣ ಪಡೆದರು.೧೯೧೦ ರಲ್ಲಿ ಮನೆಗೆ ಮರಳಿದರು.
[ಬದಲಾಯಿಸಿ] ಉದ್ಯೋಗ
ರಾಮಾಯಣ, ಮಹಾಭಾರತ ಮೊದಲಾದ ಕಾವ್ಯಗಳನ್ನು ಓದುವದು, ದಾಸರ ಪದಗಳನ್ನು ಹಾಡುವದು ಮಾಡುತ್ತ ತಿಮ್ಮಪ್ಪಯ್ಯನವರು ಸಂಸಾರ ಸಾಗಿಸಲಾರಂಭಿಸಿದರು. ಹಾರ್ಮೋನಿಯಮ್ ಶ್ರುತಿಯೊಂದಿಗೆ ಗಮಕ ಪದ್ಧತಿಯಲ್ಲಿ ಹಾಡುವದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸಿದವರು ಇವರೆ ಎಂದು ಹೇಳಬಹುದು. ಅಮ್ಮೆಂಬಳ ಶ್ರೀನಿವಾಸ ಪೈಗಳ ಎದುರು ಲಕ್ಷ್ಮೀಶ ನ ಜೈಮಿನಿ ಭಾರತ ವಾಚನ ಮಾಡಿದಾಗ ಸಂತೋಷಪಟ್ಟ ಪೈಗಳು ತಿಮ್ಮಪ್ಪಯ್ಯನವರನ್ನು ಕೆನರಾ ಹೈಸ್ಕೂಲಿನ ಕನ್ನಡ ಪಂಡಿತ ಹುದ್ದೆಗೆ ನೇಮಿಸಿದರು.
೧೯೧೮ರಲ್ಲಿ ತಿಮ್ಮಪ್ಪಯ್ಯನವರು ಸೇಂಟ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಪಂಡಿತರೆಂದು ನೇಮಕವಾದರು. ೧೯೪೮ ರಲ್ಲಿ ಅಲ್ಲಿಂದ ಸೇವಾನಿವೃತ್ತರಾದರು.
[ಬದಲಾಯಿಸಿ] ಕೌಟಂಬಿಕ ಜೀವನ
೧೯೧೬ರಲಿ ತಿಮ್ಮಪ್ಪಯ್ಯನವರ ಮದುವೆ ಕರೋಪಾಡಿ ಗ್ರಾಮದ ಮಹಾಬಲಭಟ್ಟರ ಮಗಳು ದೇವಕಿಯೊಡನೆ ಜರುಗಿತು. ಇವರಿಗೆ ನಾಲ್ಕು ಗಂಡು ಮಕ್ಕಳು ಹಾಗು ಇಬ್ಬರು ಹೆಣ್ಣು ಮಕ್ಕಳು.
ತಿಮ್ಮಪ್ಪಯ್ಯನವರ ತಾಯಿ ೧೯೧೯ ರಲ್ಲಿ ನಿಧನರಾದರು; ಹೆಂಡತಿ ೧೯೪೫ ರಲ್ಲಿ ತೀರಿಕೊಂಡರು.
[ಬದಲಾಯಿಸಿ] ಸಾಹಿತ್ಯ ಸಾಧನೆ
ತಿಮ್ಮಪ್ಪಯ್ಯನವರು ೧೯೧೦ ಕ್ಕೂ ಮೊದಲೆ ಸೂರ್ಯಕಾಂತಿ ಕಲ್ಯಾಣ ವೆಂಬ ಯಕ್ಷಗಾನ ಪ್ರಸಂಗವನ್ನೂ, ಅಜೋದಯ ವೆಂಬ ವಾರ್ಧಕ ಷಟ್ಪದಿಯನ್ನೂ ರಚಿಸಿದ್ದರು. ೧೯೧೪ ರಲ್ಲಿ ಪೇಜಾವರ ಭೋಜರಾಯರೊಂದಿಗೆ ಕನ್ನಡ ಕೋಗಿಲೆಎನ್ನುವ ಸಾಹಿತ್ಯಿಕ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಹಣದ ತೊಂದರೆಯಿಂದಾಗಿ ಈ ಪತ್ರಿಕೆಯನ್ನು ೧೯೧೯ರಲ್ಲಿ ನಿಲ್ಲಿಸಬೇಕಾಯಿತು.
[ಬದಲಾಯಿಸಿ] ಕೃತಿಗಳು
- ಚಂದ್ರಾವಲೀ ವಿಲಾಸ (ಹಳೆಗನ್ನಡ ಗದ್ಯಕಾವ್ಯ)
- ಸೊಬಗಿನ ಬಳ್ಳಿ (ಕಾವ್ಯ)
- ಹಗಲಿರುಳು (ನಾಟಕ)
- ಪಶ್ಚಾತ್ತಾಪ (ಸಾಮಾಜಿಕ ಕಾದಂಬರಿ)
- ಪ್ರೇಮಪಾಶ (ಸಾಮಾಜಿಕ ಕಾದಂಬರಿ)
- ವೀರ ಬಂಕೆಯ (ಐತಿಹಾಸಿಕ ಕಾದಂಬರಿ)
- ತ್ರಿಪುರದಾಹ
- ಸಾಹಿತ್ಯ ಸರೋವರ (ಲಕ್ಷಣ ಗ್ರಂಥ)
- ನಾಡೋಜ ಪಂಪ (ಸಂಶೋಧನೆ)
- ಆದಿಪುರಾಣ ಸಂಗ್ರಹ (ಸಂಪಾದನೆ)
- ಸಮಸ್ತ ಭಾರತ ಸಾರ (ಸಂಪಾದನೆ)
- ಕವಿರಾಜ ಮಾರ್ಗ ವಿವೇಕ (ಸಂಪಾದನೆ)
- ಪಾರ್ತಿ ಸುಬ್ಬ (ಸಂಪಾದನೆ)
ಮೊತ್ತಮೊದಲ ಬಾರಿಗೆ ಕವಿರಾಜ ಮಾರ್ಗ ವಿವೇಕ ವನ್ನು ಬರೆದವನು ನೃಪತುಂಗ ನಲ್ಲ, ಜಯಾಳ್ವನೆಂದು ಕಾವ್ಯದ ಆಂತರಿಕ ಸಾಕ್ಷ್ಯಗಳಿಂದಲೆ ತೋರಿಸಿಕೊಟ್ಟವರು ತಿಮ್ಮಪ್ಪಯ್ಯನವರು. ಅವರ ಬೃಹತ್ ಗ್ರಂಥ ನಾಡೋಜ ಪಂಪದಿಂದಾಗಿ ಅವರು ಖ್ಯಾತರಾದರು.
[ಬದಲಾಯಿಸಿ] ಪುರಸ್ಕಾರ
೧೯೩೧ ರಲ್ಲಿ ಕಾರವಾರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಮುಳಿಯ ತಿಮ್ಮಪ್ಪಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಲಾಯಿತು. ೧೯೪೧ ರಲ್ಲಿ ಲಕ್ಷ್ಮೇಶ್ವರ ದಲ್ಲಿ ಜರುಗಿದ ಪಂಪ ನ ಸಹಸ್ರ ಸಾಂವತ್ಸರಿಕೋತ್ಸವಕ್ಕೆ ತಿಮ್ಮಪ್ಪಯ್ಯನವರೆ ಅಧ್ಯಕ್ಷರಾಗಿದ್ದರು.
ಮುಳಿಯ ತಿಮ್ಮಪ್ಪಯ್ಯನವರು ೧೯೫೦ ಜನೆವರಿ ೧೬ ರಂದು ತೀರಿಕೊಂಡರು.