ಯಕ್ಷಗಾನ
From Wikipedia
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ) ಹಾಗೂ ಈ ಜಿಲ್ಲೆಗಳಿಗೆ ಅಂಟಿಕೊಂಡಿರುವ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.
ಪರಿವಿಡಿ |
[ಬದಲಾಯಿಸಿ] ಯಕ್ಷಗಾನದ ಪ್ರಮುಖ ಅಂಶಗಳು
ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.
- ಪ್ರಸಂಗ: ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗಧಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು "ಗಧಾಯುದ್ದ ಪ್ರಸಂಗ" ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕಾವೂ ಆಗಿರಬಹುದು.
- ಪಾತ್ರಧಾರಿಗಳು:ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ - ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.
- ವೇಷಭೂಷಣ:ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀತವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕು ತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗು ತಿಟ್ಟಿನಲ್ಲಿ ಉಪಯೋಗಿಸುವ ವೇಷಭೂಷಣಗಳಿಗಿಂತ ಭಿನ್ನವಾಗಿರುತ್ತವೆ.
- ಭಾಗವತಿಕೆ: ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.
- ಮಾತುಗಾರಿಕೆ:ಭಾಗವತರು ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.
- ಹಿಮ್ಮೇಳ:ಹಿಮ್ಮೇಳವೆಂದರೆ ಚಂಡೆ, ಮದ್ದಲೆ, ಮೃದಂಗ, ತಾಳ, ಜಾಗಟೆ ಮುಂತಾದ ಸಂಗೀತ ಉಪಕರಣಗಳನ್ನು ಇಲ್ಲಿನ ನೃತ್ಯ, ಭಾಗವತಿಕೆ ಮತ್ತು ಮಾತುಗಾರಿಕೆಯ ವೇಳೆ ಸಂದರ್ಭೋಚಿತವಾಗಿ ಬಳಸುವಿಕೆ. ಒಂದು ಯಕ್ಷಗಾನವು ಪರಿಣಾಮಕಾರಿಯಾಗಿ ಮೂಡಿಬರಬೇಕಾರರೆ ಪಾತ್ರಧಾರಿಗಳ ಅಭಿನಯ, ನೃತ್ಯ, ಭಾಗವತಿಕೆ ಎಷ್ಟು ಮುಖ್ಯವೋ, ಹಿಮ್ಮೇಳವೂ ಸಹಾ ಅಷ್ಟೇ ಪ್ರಮುಖವಾದುದು. ಪಾತ್ರಧಾರಿಗಳ ಅಭಿನಯವು ಇನ್ನಷ್ಟು ಛಾಪು ಮೂಡಿಸಲು, ಭಾಗವತರ ಹಾಡು ಇನ್ನಷ್ಟು ಸುಂದರವಾಗಿ ಹೊರಹೊಮ್ಮಲು ಸರಿಯಾದ ಹಿಮ್ಮೇಳ ಬೇಕೇ ಬೇಕು.
[ಬದಲಾಯಿಸಿ] ಯಕ್ಷಗಾನದ ಪ್ರಭೇದಗಳು
ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಮೊದ ಮೊದಲು ಹಬ್ಬ ಹರಿ ದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯಿತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ "ಆಟ" ಎಂದೂ ಕರೆಯುತ್ತಾರೆ. ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ.ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯ. ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ಎರಡು ವಿಭಾಗಗಳಿವೆ.ಅವು "ತೆಂಕುತಿಟ್ಟು" ಮತ್ತು "ಬಡಗುತಿಟ್ಟು. ಉತ್ತರ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಡಗುತಿಟ್ಟು ಶೈಲಿಯ ಬಯಲಾಟಗಳು ಕಂಡುಬಂದರೆ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕು ತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡನೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ಎರಡೂ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.
[ಬದಲಾಯಿಸಿ] ತಾಳ ಮದ್ದಲೆ
ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗವೆಂದರೆ "ತಾಳ ಮದ್ದಲೆ". ಬಯಲಾಟಗಳಿಗಿಂತ ಇವು ವಿಭಿನ್ನವಾದವುಗಳು. ಇಲ್ಲಿ ವೇಷಭೂಷಣ, ನೃತ್ಯ ಮತ್ತು ಭಾವಾಭಿನಯಗಳು ಕಂಡು ಬರುವುದಿಲ್ಲ. ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆಗಳು ಮಾತ್ರ ಇಲ್ಲಿರುತ್ತವೆ. ಬಯಲಾಟದಂತೆ ಇಲ್ಲಿಯೂ ಒಂದು ಪ್ರಸಂಗವನ್ನು ಆಯ್ದುಕೊಳ್ಳಲಾಗುತ್ತದೆ. ಭಾಗವತರು ಹಾಡುಗಾರಿಕೆಯ ಮೂಲಕ ಕಥಾನಕವನ್ನು ಹೇಳುತ್ತಾ ಹೋಗುತ್ತಾರೆ. ಇಲ್ಲಿ ಪಾತ್ರಧಾರಿಗಳ ಬದಲು ಅರ್ಥಧಾರಿಗಳಿರುತ್ತಾರೆ. ಅರ್ಥಧಾರಿಗಳು ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಭಾಗವನ್ನು ಮಾತುಗಾರಿಕೆಯ ಮೂಲಕ ಚರ್ಚಿಸುತ್ತಾರೆ. ಬಯಲಾಟಕ್ಕೂ ತಾಳ ಮದ್ದಲೆಗೂ ಪ್ರಮುಖ ವ್ಯತ್ಯಾಸವಿರುವುದೇ ಈ ಮಾತುಗಾರಿಕೆಯಲ್ಲಿ. ಬಯಲಾಟಗಳಲ್ಲಿ ನೃತ್ಯ ಮತ್ತು ಅಭಿನಯಗಳೇ ಪ್ರಧಾನ. ಮಾತುಗಾರಿಕೆ ಇದ್ದರೂ ಅದು ಕೇವಲ ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥಾನಕದ ಸಾರಾಂಶವಷ್ಟೇ ಆಗಿರುತ್ತದೆಯೇ ವಿನಃ ವಾದ ಮಂಡನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಅದೂ ಅಲ್ಲದೇ ಬಯಲಾಟದಲ್ಲಿ ಬರುವ ಸಂಭಾಷಣೆಗಳನ್ನು ಸಾಮಾನ್ಯವಾಗಿ ಮೊದಲೇ ಸಿಧ್ಧಪಡಿಸಿರುತ್ತಾರೆ. ಹಾಗಾಗಿ ಈ ಮಾತುಗಾರಿಕೆಯು ಭಾಗವತಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಚೌಕಟ್ಟನ್ನು ದಾಟಿ ಆಚೆ ಹೋಗುವುದಿಲ್ಲ. ಆದರೆ ತಾಳ ಮದ್ದಲೆಗಳು ಹಾಗಲ್ಲ. ತಾಳ ಮದ್ದಲೆಯಲ್ಲಿ ವಾದವೇ ಪ್ರಮುಖವಾದದ್ದು. ಇಲ್ಲಿ ಈ ಭಾಗವತರು ಹೇಳುವ ಒಂದು ಹಾಡಿಗೆ ಇಂತಿಷ್ಟೇ ಸಂಭಾಷಣೆಗಳನ್ನು ಹೇಳಬೇಕು ಎಂದು ಪೂರ್ವ ನಿರ್ಧಾರವಾಗಿರುವಿದಿಲ್ಲ. ಭಾಗವತರು ಹಾಡುಗಾರಿಕೆಯ ಮೂಲಕ ವಾದಕ್ಕೆ ಒಂದು ಪೀಠಿಕೆ ಹಾಕಿ ಕೊಡುತ್ತಾರೆ. ಆಮೇಲೆ ಆ ಕಥಾನಕದ ಭಾಗದ ಮೇಲೆ ಅರ್ಥಧಾರಿಗಳಿಂದ ವಾದ ಆರಂಭವಾಗುತ್ತದೆ. ಈ ವಾದ ಸಂಧರ್ಭಕ್ಕನುಗುಣವಾಗಿ ಪ್ರಸಂಗದಿಂದ ಪ್ರಸಂಗಕ್ಕೆ ಬದಲಾಗುತ್ತಲೂ ಹೋಗಬಹುದು. ವಾದವೇ ತಾಳ ಮದ್ದಲೆಗಳ ಜೀವಾಳವಾಗಿರುತ್ತದೆ.
[ಬದಲಾಯಿಸಿ] ಯಕ್ಷಗಾನದ ಪ್ರಮುಖರು
- ಭಾಗವತಿಕೆ: ನೆಬ್ಬೂರು ನಾರಾಯಣ, ದಿ. ಉಪ್ಪೂರು ನಾರಣಪ್ಪ, ಕಡತೋಕ ಮಂಜುನಾಥ ಭಾಗವತ, ದಿ. ಗುಂಡ್ಮಿ ಕಾಳಿಂಗ ನಾವುಡ, ಸುಬ್ರಹ್ಮಣ್ಯ ಧಾರೇಶ್ವರ, ನಾರಾಯಣ ಶಬರಾಯ, ಬಲಿಪ ನಾರಾಯಣ ಭಾಗವತರು, ದಾಮೋದರ ಮಂಡೆಚ್ಚ, ಪೋಳ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಕೊಳಗಿ ಕೇಶವ ಹೆಗಡೆ, ಲೀಲಾವತಿ ಬೈಪಾಡಿತ್ತಾಯ (ಏಕೈಕ ವೃತ್ತಿಪರ ಮಹಿಳಾ ಭಾಗವತರು), ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ.
- ಹಿಮ್ಮೇಳ ಕಲಾವಿದರು: ದಿ. ನೆಡ್ಲೆ ನರಸಿಂಹ ಭಟ್, ಕೆ.ಹರಿನಾರಾಯಣ ಬೈಪಾಡಿತ್ತಾಯ, ಕುದ್ರೆಕೂಡ್ಲು ರಾಂ ಭಟ್, ಕೇಶವ ಬೈಪಾಡಿತ್ತಾಯ, ಮೋಹನ ಬೈಪಾಡಿತ್ತಾಯ, ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ್ ರಾವ್.
- ಪಾತ್ರಧಾರಿಗಳು: ದಿ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಐರೋಡಿ ರಾಮ ಗಾಣಿಗ, ಮಂಟಪ ಪ್ರಭಾಕರ ಉಪಾಧ್ಯಾಯ, ಗೋಡೆ ನಾರಾಯಣ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಜಲವಳ್ಳಿ, ಕಣ್ಣಿಮನೆ ಗಣಪತಿ ಹೆಗಡೆ, ಭಾಸ್ಕರ ಜೋಶಿ, ಕುಂಬ್ಳೆ ಸುಂದರ ರಾವ್, ವಾಸುದೇವ ಸಾಮಗ, ಬಣ್ಣದ ಮಹಾಲಿಂಗ, ಚಂದ್ರಗಿರಿ ಅಂಬು, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಕೆ. ಗೋವಿಂದ ಭಟ್, ಕೋಳ್ಯೂರು ರಾಮಚಂದ್ರ ರಾವ್.
- ತಾಳ ಮದ್ದಲೆ: ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಲಕ್ಷ್ಮೀನಾರಾಯಣ ಸಾಮಗ, ಡಾ.ಪ್ರಭಾಕರ ಜೋಶಿ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ದೇರಾಜೆ ಸೀತಾರಾಮಯ್ಯ, ಡಾ. ರಮಾನಂದ ಬನಾರಿ, ಯು. ಬಿ. ಗೋವಿಂದ ಭಟ್, ಜಬ್ಬರ್ ಸಮೋ ಸಂಪಾಜೆ, Amachi MR