ಸೋಂದಾ
From Wikipedia
ಸೋಂದಾ ಕ್ಷೇತ್ರವು ಕರ್ನಾಟಕದಲ್ಲಿರುವ ಪವಿತ್ರ ಸ್ಥಳಗಳಲ್ಲಿ ಒಂದು. ವಿವಿಧ ಪ್ರದೇಶದ ಜನರಿಂದ ಸೋಂದಾ, ಸೋದೆ, ಸ್ವಾದಿ ಮುಂತಾದ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಸಮೀಪವಿದೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದಲ್ಲಿಯೂ ಕೊಡುಗೆ ಸಲ್ಲಿಸಿರುವ ವಾದಿರಾಜರ ಬೃಂದಾವನವಿದೆ. ಇದು ಪ್ರಕೃತಿ ಸೌಂದರ್ಯ ವೀಕ್ಷಣಿಗೂ ಸೂಕ್ತ ಸ್ಥಳವಾಗಿದೆ.
ಈ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ. ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ.
[ಬದಲಾಯಿಸಿ] ಭೂತರಾಜರ ಗುಡಿ
ಇಲ್ಲಿರುವ ಭೂತರಾಜರ ಗುಡಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ತನ್ನ ಪ್ರಶ್ನೆಗಳ ಮೂಲಕ ವಾದಿರಾಜರನ್ನು ಸೋಲಿಸಿ, ಅವರಿಗೆ ಉಪದ್ರ ಕೊಡಬೇಕೆಂದು ಬಂದ ಭೂತಕ್ಕೆ ತಕ್ಕ ಉತ್ತರ ಕೊಟ್ಟು ವಾದಿರಾಜರು ಅದನ್ನು ಸೋಲಿಸಿದರೆಂದು ನಂಬಲಾಗುತ್ತದೆ. ಆ ಕಾರಣದಿಂದ ಭೂತ ವಾದಿರಾಜರ ಸೇವಕನಾಗಿ, ಈ ಕ್ಷೇತ್ರದಲ್ಲಿ ನೆಲೆಸಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಈಗಲೂ ಮಾನಸಿಕ ಭ್ರಾಂತಿಯಿಂದ ನರಳುತ್ತಿರುವ( ದೆವ್ವ ಹಿಡಿದವರು ಎಂದು ಹೇಳಲಾಗುವವರು) ಜನರನ್ನು ಈ ಸ್ಥಳಕ್ಕೆ ಕರೆತರಲಾಗುತ್ತದೆ. ಅವರು ಭೂತರಾಜರಿಗೆ ಹರಕೆ,ಸೇವೆಗಳನ್ನು ಸಲ್ಲಿಸುವುದರಿಂದ ಅವರ ಮನೋವಿಕಾರಗಳು ದೂರವಾಗುತ್ತದೆ ಎಂದು ಜನರ ನಂಬಿಕೆಯಾಗಿದೆ.
ವಾದಿರಾಜರ ಬೃಂದಾವನದ ಸಮೀಪದಲ್ಲಿ ಧವಳ ಗಂಗಾ ಎಂಬ ಸರೋವರವಿದೆ. ಈ ಕೊಳದ ಒಂದು ಮೂಲೆಯನ್ನು ಭೂತರಾಜರ ಸ್ಥಳ ಎಂದು ಕರೆಯಲಾಗುತ್ತದೆ. ಆ ಸ್ಥಳವನ್ನು ಜನರು ಉಪಯೋಗಿಸುವುದಿಲ್ಲ. ವಾದಿರಾಜರು ಧವಳ ಗಂಗೆಯ ಗಂಗಾಧರ ಮಹಾಲಿಂಗ ಎಂದು ಶಿವನನ್ನು ಸ್ತುತಿಸಿರುವ ಕೀರ್ತನೆಯು ಇದೇ ಸರೋವರದ ಕುರಿತಾಗಿದೆ.
[ಬದಲಾಯಿಸಿ] ತಪೋವನ
ದಟ್ಟ ಕಾಡಿನ ನಡುವೆ ಇರುವ ಒಂದು ಪ್ರದೇಶದಲ್ಲಿ ವಾದಿರಾಜರು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಶಾಲ್ಮಲಾ ನದಿ ಇಲ್ಲಿ ಸಣ್ಣದಾಗಿ ಹರಿಯತ್ತದೆ. ನದಿ ತೀರದ ಬಂಡೆಯೊಂದರೆಲ್ಲಿ ವಾದಿರಾಜರ ಇಷ್ಟ ದೈವವಾದ ಹಯಗ್ರೀವ ದೇವರ ಚಿತ್ರವನ್ನು ಕಾಣಬಹುದಾಗಿದೆ.