ಕರ್ನಾಟಕ
From Wikipedia
ಕರ್ನಾಟಕ | |
ರಾಜಧಾನಿ - ಸ್ಥಾನ |
ಬೆಂಗಳೂರು - |
ಅತಿ ದೊಡ್ಡ ನಗರ | ಬೆಂಗಳೂರು |
ಜನಸಂಖ್ಯೆ (2004) - ಸಾಂದ್ರತೆ |
55,868,200 (9th) - 290.98/km² |
ವಿಸ್ತಾರ - ಜಿಲ್ಲೆಗಳು |
192,000 km² (8th) - 27 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ನವೆಂಬರ್ ೧,೧೯೫೬ - ಟಿ.ಎನ್.ಚತುರ್ವೇದಿ - ಹೆಚ್.ಡಿ.ಕುಮಾರಸ್ವಾಮಿ - Bicameral (224 + 75) |
ಅಧಿಕೃತ ಭಾಷೆ(ಗಳು) | ಕನ್ನಡ |
Abbreviation (ISO) | IN-KA |
ಅಂತರ್ಜಾಲ ತಾಣ: www.karnataka.gov.in | |
ಕರ್ನಾಟಕ ರಾಜ್ಯದ ಮುದ್ರೆ |
ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
"ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಮತ್ತು ಬೆಳಗಾವಿ.
ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.
ಪರಿವಿಡಿ |
[ಬದಲಾಯಿಸಿ] ಚರಿತ್ರೆ
ಕರ್ನಾಟಕದ ಚರಿತ್ರೆಯನ್ನು ಅಶೋಕನ ಕಾಲದಿಂದ ಗುರುತಿಸಬಹುದು. ನಂತರದ ಶತಮಾನಗಳಲ್ಲಿ ಕರ್ನಾಟಕದ ಪ್ರದೇಶಗಳನ್ನು ಶಾತವಾಹನರು, ಕದಂಬರು, ಗಂಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೇಉಣರು, ವಿಜಯನಗರದ ಅರಸರು, ಟೀಪು ಸುಲ್ತಾನ್ ಮತ್ತು ಹೈದರ್ ಅಲಿ, ಮೈಸೂರು ಮಹಾರಾಜರು ಮತ್ತು ಬ್ರಿಟಿಷರು ಆಳಿದರು.
ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮಹಾರಾಜರು "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ನವೆಂಬರ್ ೧, ೧೯೫೬ ರಂದು ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
[ಬದಲಾಯಿಸಿ] ಭೌಗೋಳಿಕ
ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್, ವಾಯವ್ಯಕ್ಕೆ ಗೋವ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರ ಪ್ರದೇಶ ಆಗ್ನೇಯಕ್ಕೆ ತಮಿಳುನಾಡು ಮತ್ತು ನೈರುತ್ಯಕ್ಕೆ ಕೇರಳ ರಾಜ್ಯಗಳಿವೆ.
ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:
- ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
- ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
- ಬಯಲು ಸೀಮೆ - ದಖನ್ ಪ್ರಸ್ಥಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ.
ಕರ್ನಾಟಕದಲ್ಲಿ ಎರಡು ಜಲಾನಯನ ಪ್ರದೇಶಗಳಿವೆ (watershed, river system). ರಾಜ್ಯದ ಉತ್ತರ ಭಾಗದಲ್ಲಿರುವ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ತುಂಗಭದ್ರೆ, ಮಲಪ್ರಭೆ, ಘಟಪ್ರಭೆ, ವರದಾ ನದಿಗಳು ಹರಿದರೆ, ದಕ್ಷಿಣದ ಕಾವೇರೀ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ಹೇಮ(ಮಾ)ವತಿ, ಕಬಿನಿ, ಅರ್ಕ(ರ್ಕಾ)ವತಿ, ಲಕ್ಷ್ಮಣ ತೀರ್ಥ, ನುಗು ನದಿಗಳು ಹರಿಯುತ್ತವೆ. ಇವೇ ಅಲ್ಲದೆ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನೇತ್ರ(ತ್ರಾ)ವತಿ, ಶರ(ರಾ)ವತಿ, ಕಾಳಿ, ಅಘನಾಶಿನಿ, ಚಕ್ರಾ, ಸೀ(ಚೀ)ತಾ, ಮುಂತಾದ ನದಿಗಳೂ ರಾಜ್ಯದಲ್ಲಿ ಹರಿಯುತ್ತವೆ. ರಾಜ್ಯದ ಉತ್ತರ ಗಡಿನಾಡಿನಲ್ಲಿ ಗೋದಾವರಿಯ ಉಪನದಿಗಳೂ (ಉದಾ. ಬಿದರೆ ಜಿಲ್ಲೆಯಲ್ಲಿ ಮಂಜೀರಾ) ಹರಿಯುತ್ತವೆ.
[ಬದಲಾಯಿಸಿ] ಜಿಲ್ಲೆಗಳು
ಬಾಗಲಕೋಟೆ, ಬೆಂಗಳೂರು, ಬೆಂಗಳೂರು ಗ್ರಾಮೀಣ, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ್, ಗುಲ್ಬರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ - ಒಟ್ಟು ೨೭ ಜಿಲ್ಲೆಗಳು
ಮತ್ತಷ್ಟು ಮಾಹಿತಿಗಾಗಿ ನೋಡಿ: ಕರ್ನಾಟಕದ ಜಿಲ್ಲೆಗಳು
[ಬದಲಾಯಿಸಿ] ಭಾಷೆ
ಭಾರತದಲ್ಲಿ ಜಾರಿಯಲ್ಲಿರುವ ಭಾಷಾವಾರು ರಾಜ್ಯ ವಿಂಗಡಣೆಯ ಪರಿಣಾಮವಾಗಿ ಭಾಷೆ ಎಂಬುದು ಒಂದು ರಾಜ್ಯದ ವ್ಯಕ್ತಿತ್ವದ ಮುಖ್ಯ ಅಂಶವಾಗಿದೆ. ಈ ಪ್ರದೇಶದ ಪ್ರಧಾನ ಭಾಷೆ ಮತ್ತು ಅಧಿಕೃತ ಭಾಷೆ ಕನ್ನಡ. ಇತರ ಭಾಷೆಗಳೆಂದರೆ ಕೊಡವ, ತುಳು, ಕೊಂಕಣಿ, ಬ್ಯಾರಿ ಹಾಗೂ ಸ್ವಲ್ಪ ಮಟ್ಟಿಗೆ ಪಕ್ಕದ ರಾಜ್ಯಗಳಲ್ಲಿ ಉಪಯೋಗಿಸಲ್ಪಡುವ ಭಾಷೆಗಳು: ಮರಾಠಿ, ತೆಲುಗು, ತಮಿಳು ಮತ್ತು ಮಲಯಾಳಂ.
[ಬದಲಾಯಿಸಿ] ರಾಜಕೀಯ ವ್ಯವಸ್ಥೆ
ಕರ್ನಾಟಕದ ಶಾಸಕಾಂಗದ ವ್ಯವಸ್ಥೆ ಭಾರತದ ಸಂಸತ್ತಿನ ವ್ಯವಸ್ಥೆಯನ್ನು ಅನುಕರಿಸುತ್ತದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಕರ್ನಾಟಕ ಸರ್ಕಾರದ ಎರಡು ಮುಖ್ಯ ಮನೆಗಳು. ವಿಧಾನ ಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ ವಿಧಾನ ಪರಿಷತ್ತಿಗೆ ಪರೋಕ್ಷ ಚುನಾವಣೆಗಳು ನಡೆಯುತ್ತವೆ. ಮೊದಲ ವಿಧಾನ ಸಭೆ ಸೇರಿದದು ೧೯೫೨ ರಿಂದ ೧೯೫೭ ರ ವರೆಗೆ.
ವಿಧಾನ ಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದ ನಾಯಕರು ಮುಖ್ಯಮಂತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡಿದೆ.
ಕರ್ನಾಟಕದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಲ್ಲಿ ಕೆಲವೆಂದರೆ ಕಾಂಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ (ಬಿ ಜೆ ಪಿ), ಜನತಾ ದಳ(ಯು), ಜನತಾ ದಳ(ಎಸ್), ಇತ್ಯಾದಿ.
ಇದನ್ನೂ ನೋಡಿ: ಕರ್ನಾಟಕದ ಮುಖ್ಯಮಂತ್ರಿಗಳು
[ಬದಲಾಯಿಸಿ] ಪ್ರವಾಸೋದ್ಯಮ
ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯದ ಪ್ರದೇಶಗಳು, ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ.
ಶಿವನಸಮುದ್ರದ ಬರಚುಕ್ಕಿ ಜಲಪಾತ |
[ಬದಲಾಯಿಸಿ] ಸ್ವಾಭಾವಿಕ ಪ್ರದೇಶಗಳು
ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಮೈಸೂರು ಜಿಲ್ಲೆಯ ಬಂಡಿಪುರ ಅಭಯಾರಣ್ಯ, ಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಶಿ ಅಭಯಾರಣ್ಯ.
ಅನೇಕ ವನ್ಯಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ.
[ಬದಲಾಯಿಸಿ] ಐತಿಹಾಸಿಕ ಸ್ಥಳಗಳು
ಕರ್ನಾಟಕದಲ್ಲಿ ಐತಿಹಾಸಿಕ ಆಕರ್ಷಣೆಗಳನ್ನು ಒಳಗೊಂಡ ಕೆಲವು ಪ್ರದೇಶಗಳು:
- ಬಾದಾಮಿ, ಐಹೊಳೆ, ಪಟ್ಟದಕಲ್ಲು
- ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ
- ಹಂಪೆ
- ಬಿಜಾಪುರ
- ಮೈಸೂರು
- ಚಿತ್ರದುರ್ಗ
[ಬದಲಾಯಿಸಿ] ಸಂಸ್ಕೃತಿ
ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು:
- ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ.
- ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು.
ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.
[ಬದಲಾಯಿಸಿ] ಧಾರ್ಮಿಕ ಕ್ಷೇತ್ರಗಳು
ಕರ್ನಾಟಕ ಧರ್ಮಸ್ಥಳ, ಶೃಂಗೇರಿ, ಉಡುಪಿ, ಮೇಲುಕೋಟೆ, ಬಸವಕಲ್ಯಾಣ, ಆದಿಚುಂಚನಗಿರಿ, ಹೊರನಾಡು, ಕಟೀಲು, ಮುಂತಾದ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.
[ಬದಲಾಯಿಸಿ] ಪ್ರಮುಖರು
ನೋಡಿ: ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
ಬಸವಣ್ಣ, ಪುರಂದರದಾಸರು, ಕನಕದಾಸ, ಮಧ್ವಾಚಾರ್ಯ, ಮೋಕ್ಷಗುಂಡಂ ವಿಶ್ವೇಶ್ವರಯ್ಯ.
[ಬದಲಾಯಿಸಿ] ಈ ಲೇಖನಗಳನ್ನೂ ನೋಡಿ
[ಬದಲಾಯಿಸಿ] ಇತರ ತಾಣಗಳು
ದಕ್ಷಿಣ ಭಾರತದ ರಾಜ್ಯಗಳುಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ |
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಂಚಲ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಚತ್ತೀಸ್‍ಘಡ | ಜಮ್ಮು ಮತ್ತು ಕಾಶ್ಮೀರ | ಝಾರ್ಕಂಡ್ | ತಮಿಳು ನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ
ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪಾಂಡಿಚೆರಿ | ಲಕ್ಷದ್ವೀಪ
ರಾಷ್ಟ್ರೀಯ ಮುಖ್ಯ ಕ್ಷೇತ್ರ
ದೆಹಲಿ