ಹೆಚ್.ಡಿ.ದೇವೇಗೌಡ
From Wikipedia
ಜನನ: | ಮೇ ೧೮, ೧೯೩೩ |
---|---|
ಜನಿಸಿದ ಸ್ಥಳ: | ಹರದನಹಳ್ಳಿ, ಕರ್ನಾಟಕ |
ಭಾರತದ ೧೧ ನೆ ಪ್ರಧಾನ ಮಂತ್ರಿ | |
ಸೇವೆ ಪ್ರಾರಂಭಿಸಿದ್ದು: | ಮೇ ೩೦, ೧೯೯೬ |
ಸೇವೆ ಕೊನೆಗೊಂಡಿದ್ದು: | ಏಪ್ರಿಲ್ ೨೧, ೧೯೯೭ |
ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ (ಜನನ: ಮೇ ೧೮,೧೯೩೩) ಭಾರತದ ೧೧ ನೆಯ ಪ್ರಧಾನಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು.
ದೇವೇಗೌಡರು ಮೇ ೧೮, ೧೯೩೩ ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪಡೆದ ಬಳಿಕ ೧೯೫೩ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೨ ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು. ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸಿಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ೧೯೭೨ ರಿಂದ ೧೯೭೬ ರ ವರೆಗೆ ಮತ್ತು ನವೆಂಬರ್ ೧೯೭೬ ರಿಂದ ೧೯೭೭ ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು.
೧೯೭೫-೭೬ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. ೧೯೮೭ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು.
೧೯೯೧ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು.
ಇದರ ನಂತರ ಜನತಾ ದಳಕ್ಕೆ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರಾದ ದೇವೇಗೌಡರು ೧೯೯೪ ರಲ್ಲಿ ಕರ್ನಾಟಕ ರಾಜ್ಯದ ೧೪ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
೧೯೯೬ ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ನೇರ ಬಹುಮತವಿರಲಿಲ್ಲ. ಆಗ ಅನೇಕ ರಾಜಕೀಯ ಪಕ್ಷಗಳ ಮೈತ್ರಿತ್ವವಾದ ತೃತೀಯ ರಂಗ ದೇವೇಗೌಡರನ್ನು ತಮ್ಮ ನಾಯಕರಾಗಿ ಚುನಾಯಿಸಿತು. ಎಲ್ಲರಿಗೂ ಆಶ್ಚರ್ಯ ತಂದ ಬೆಳವಣಿಗೆಯಲ್ಲಿ ದೇವೇಗೌಡರು ಮೇ ೩೦, ೧೯೯೬ ರಂದು ಭಾರತದ ೧೧ ನೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ೧೯೯೭ರವರೆಗೆ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದ ದೇವೇಗೌಡರು ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ಅಧ್ಯಕ್ಷರಾಗಿದ್ದಾರೆ.
[ಬದಲಾಯಿಸಿ] ಕರ್ನಾಟಕದ ಮುಖ್ಯಮಂತ್ರಿಗಳು
ಹೆಚ್.ಡಿ.ಕುಮಾರಸ್ವಾಮಿ | ಧರಮ್ ಸಿಂಗ್ | ಎಸ್.ಎಂ.ಕೃಷ್ಣ | ಜೆ ಹೆಚ್ ಪಟೇಲ್ | ಹೆಚ್.ಡಿ.ದೇವೇಗೌಡ | ವೀರಪ್ಪ ಮೊಯ್ಲಿ | ಬಂಗಾರಪ್ಪ | ವೀರೇಂದ್ರ ಪಾಟೀಲ್ | ಎಸ್ ಆರ್ ಬೊಮ್ಮಾಯಿ | ರಾಮಕೃಷ್ಣ ಹೆಗಡೆ | ಆರ್ ಗುಂಡೂರಾವ್ | ಡಿ ದೇವರಾಜ ಅರಸ್ | ಎಸ್. ನಿಜಲಿಂಗಪ್ಪ | ಎಸ್ ಆರ್ ಕಂಠಿ | ಬಿ ಡಿ ಜತ್ತಿ | ಕಡಿದಾಳ್ ಮಂಜಪ್ಪ | ಕೆಂಗಲ್ ಹನುಮಂತಯ್ಯ | ಚೆಂಗಲರಾಯ ರೆಡ್ಡಿ