ನಾಡ ಗೀತೆ
From Wikipedia
ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡ ಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು ) ಈ ಪದ್ಯವನ್ನು ೧೯೨೪ರಲ್ಲಿ ಕಿಶೋರಚಂದ್ರವಾಣಿ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು. ಮಧ್ವಾಚಾರ್ಯರ ಹೆಸರು ಸೇರ್ಪಡೆ ಮತ್ತು ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಬಸವೇಶ್ವರರ ಹೆಸರು ಕೈ ಬಿಡಬೇಕೆಂಬ ವಿಚಾರಗಳ ಕುರಿತು ಧರ್ಮ ಗುರುಗಳು, ಸಾಹಿತಿಗಳು ಮತ್ತು ರಾಜಕಾರಣಿಗಳ ನೆಡುವೆ ತೀವ್ರ ಚರ್ಚೆ ನಡೆದು ವಿಷಯ ವಿವಾದ ಸ್ವರೂಪ ಪಡೆಯಿತು. ಕೆಲವರು ಈ ಗೀತೆ ನಾಡ ಗೀತೆಯಾಗಲು ಅರ್ಹವಾಗಿಲ್ಲವೆಂದು ಕೂಡ ವಾದಿಸಿದರು. ಮೂಲ ಕೃತಿಯ ೨೩ ಸಾಲುಗಳು ಮಾತ್ರ ನಾಡ ಗೀತೆಯಲ್ಲಿರುವುದು ಎಂದಾಗಿತ್ತು ಆದರೆ ಕೊನೆಯಲ್ಲಿ ಕರ್ನಾಟಕ ಸರ್ಕಾರ ಗೀತೆಗೆ ಯಾವುದೆ ಬದಲಾವಣೆ ಮಾಡದೆ ಕವಿ ಬರೆದ ಮೂಲ ಕೃತಿಯನ್ನು ಹಾಗೆ ಉಳಿಸಿಕೊಂಡಿತು.
ನಾಡ ಗೀತೆ ಹೀಗಿದೆ.
ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೆ |
ಜಯ ಹೇ ರಸಋಷಿಗಳ ಬೀಡೆ |
ಭೂದೇವಿಯ ಮುಕುಟದ ನವ ಮಣಿಯೆ |
ಗಂಧದ ಚಂದದ ಹೊನ್ನಿನ ಗಣಿಯೆ |
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
ಜನನಿಯ ಜೋಗುಳ ವೇದದ ಘೋಷ |
ಜನನಿಗೆ ಜೀವವು ನಿನ್ನಾವೇಶ |
ಹಸುರಿನ ಗಿರಿಗಳ ಸಾಲೆ |
ನಿನ್ನಯ ಕೊರಳಿನ ಮಾಲೆ |
ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
ಶಂಕರ ರಾಮಾನುಜ ವಿದ್ಯಾರಣ್ಯ |
ಬಸವೇಶ್ವರರಿಹ ದಿವ್ಯಾರಣ್ಯ |
ರನ್ನ ಷಡಕ್ಷರಿ ಪೊನ್ನ |
ಪಂಪ ಲಕುಮಿಪತಿ ಜನ್ನ |
ಕಬ್ಬಿಗರುದಿಸಿದ ಮಂಗಳ ಧಾಮ |
ಕವಿ ಕೋಗಿಲೆಗಳ ಪುಣ್ಯಾರಾಮ |
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
ತೈಲಪ ಹೊಯ್ಸಳರಾಳಿದ ನಾಡೆ |
ಡಂಕಣ ಜಕಣರ ನೆಚ್ಚಿನ ಬೇಡೆ |
ಕೃಷ್ಣ ಶರಾವತಿ ತುಂಗಾ |
ಕಾವೇರಿಯ ವರ ರಂಗಾ |
ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ
ಸರ್ವಜನಾಂಗದ ಶಾಂತಿಯ ತೋಟ |
ರಸಿಕರ ಕಂಗಳ ಸೆಳೆಯುವ ನೋಟ |
ಹಿಂದೂ ಕ್ರೈಸ್ತ ಮುಸಲ್ಮಾನ |
ಪಾರಸಿಕ ಜೈನರುದ್ಯಾನ |
ಜನಕನ ಹೋಲುವ ದೊರೆಗಳ ಧಾಮ |
ಗಾಯಕ ವೈಣಿಕರಾರಾಮ |
ಕನ್ನಡ ನುಡಿ ಕುಣಿದಾಡುವ ದೇಹ |
ಕನ್ನಡ ತಾಯಿಯ ಮಕ್ಕಳ ಗೇಹ |
ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ