ಶಾಂತಕವಿ
From Wikipedia
ಶಾಂತಕವಿಗಳ ಹೆಸರು ಸಕ್ಕರಿ ಬಾಳಾಚಾರ್ಯರೆಂದು. ಇವರ ತಂದೆ ಸಾತೇನಹಳ್ಳಿ ಗೋಪಾಲಾಚಾರ್ಯರು. ಈ ಮನೆತನದಲ್ಲಿಯ ಶ್ರೀನಿವಾಸಾಚಾರ್ಯರೆನ್ನುವವರು “ಶರ್ಕರಾ” ಎನ್ನುವ ಸಂಸ್ಕೃತ ಟೀಕೆಯನ್ನು ರಚಿಸಿದ್ದರಿಂದ ಇವರ ಮನೆತನಕ್ಕೆ “ಸಕ್ಕರಿ” ಎನ್ನುವ ಅಡ್ಡಹೆಸರು ರೂಢವಾಯಿತು. ಇವರ ಹುಟ್ಟೂರಾದ ಸಾತೇನಹಳ್ಳಿಯು ಹಾವೇರಿ ಜಿಲ್ಲೆಯಲ್ಲಿರುತ್ತದೆ. ಶಾಂತಕವಿಗಳು ೧೮೫೬ ಜನೆವರಿ ೧೫ರಂದು ಜನಿಸಿದರು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ / ಉದ್ಯೋಗ
ಮುಲ್ಕೀ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ , ೧೮೭೨ರಲ್ಲಿ ರಾಣಿಬೆನ್ನೂರಿನಲ್ಲಿ ಕನ್ನಡ ಶಾಲೆಯ ಉಪಾಧ್ಯಾಯರಾದರು. ಹಾವೇರಿ, ಧಾರವಾಡ, ಗದಗ, ಬೆಳಗಾವಿ, ಗೋಪನಕೊಪ್ಪ ಮೊದಲಾದ ಊರುಗಳಲ್ಲಿ ಕೆಲಸ ಮಾಡಿದರು.
[ಬದಲಾಯಿಸಿ] ಕನ್ನಡ ಸೇವೆ
ಗದಗ ಜಿಲ್ಲೆಯ ಮುಳಗುಂದದಲ್ಲಿ ಬಾಳಾಚಾರ್ಯರು ಒಮ್ಮೆ ಕೀರ್ತನ ಕೇಳುತ್ತಿದ್ದರು. ಆ ಕೀರ್ತನ ಮರಾಠಿ ಮಿಶ್ರಿತ ಕನ್ನಡದಲ್ಲಿತ್ತು ; ಮರಾಠಿ ಹಾಡುಗಳಿಂದ ತುಂಬಿತ್ತು. ಬಾಳಾಚಾರ್ಯರು ಇದಕ್ಕೆ ಆಕ್ಷೇಪವೆತ್ತಿದಾಗ ಕನ್ನಡದಲ್ಲಿ ಕೀರ್ತನೆಗಳು ಎಲ್ಲಿವೆ ಎನ್ನುವ ಟೀಕೆಯನ್ನು ಎದುರಿಸಬೇಕಾಯಿತು. ಇದೇ ಒಂದು ಆಹ್ವಾನವಾಗಿ ಬಾಳಾಚಾರ್ಯರು ಕೆಲ ದಿನಗಳಲ್ಲಿಯೆ “ಮುಕುಂದ ನಾಮಾಮೃತ” ಎನ್ನುವ ಅಚ್ಚ ಕನ್ನಡ ಕೀರ್ತನೆಯನ್ನು ರಚಿಸಿ, ತಾವೇ ಆ ಕೀರ್ತನೆಯನ್ನು ಪ್ರದರ್ಶಿಸಿದರು. ‘ಶಾಂತೇಶ ವಿಠಲ’, ‘ಶಾಂತ ವಿಠಲ’ ಎನ್ನುವ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಿದರು. (‘ಶಾಂತೇಶ’ ಎನ್ನುವದು ಸಾತೇನಹಳ್ಳಿಯಲ್ಲಿರುವ ಮಾರುತಿಯ ಅಭಿಧಾನ. ಅದರಂತೆ ಕಾಗಿನೆಲೆ ಮಾರುತಿಗೆ ‘ಕಾಂತೇಶ’ ಎಂದೂ, ಶಿಕಾರಿಪುರದಲ್ಲಿರುವ ಮಾರುತಿಗೆ ‘ಭ್ರಾಂತೇಶ’ ಎಂದೂ ಕರೆಯಲಾಗುತ್ತದೆ.)
೧೮೭೩ರಲ್ಲಿ ಬಾಳಾಚಾರ್ಯರು “ಉಷಾಕಿರಣ” ಎನ್ನುವ ನಾಟಕ ರಚಿಸಿ ಪ್ರದರ್ಶನ ಮಾಡಿಸಿದರು. ಇದು ಅವರಿಗೆ ಆದ್ಯ ನಾಟಕಕಾರ ಎನ್ನುವ ಗೌರವ ತಂದುಕೊಟ್ಟಿತು. ಗದಗಿನಿಂದ ಹೊಂಬಳಕ್ಕೆ ಅಲ್ಲಿಂದ ಅಗಡಿಗೆ ವರ್ಗಾವಣೆಯ ಮೇಲೆ ಹೋದ ಬಾಳಾಚಾರ್ಯರು, ಹೋದಲ್ಲೆಲ್ಲ ಕನ್ನಡ ಕೀರ್ತನೆ, ಲಾವಣಿ ಹಾಗು ನಾಟಕಗಳ ಮೂಲಕ ಜನಜಾಗೃತಿಯನ್ನು ಮಾಡುತ್ತ ನಡೆದರು. ೧೯೧೨ರಲ್ಲಿ ನಿವೃತ್ತರಾದ ಬಾಳಾಚಾರ್ಯರು ಮುಂದೆ ಎರಡು ವರ್ಷಗಳಲ್ಲಿ ಪತ್ನಿಯನ್ನು ಕಳೆದುಕೊಂಡರು. ಆ ಬಳಿಕ ತಮ್ಮನ್ನು ರಾಷ್ಟ್ರಕಾರ್ಯಕ್ಕೆ ಪೂರ್ಣವಾಗಿ ಸಮರ್ಪಿಸಿಕೊಂಡರು. ೧೯೧೮ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ, ‘ಬೇಡಲು ಬಂದಿಹೆ ದಾಸಯ್ಯ’ ಎನ್ನುತ್ತ ಮನೆಮನೆಗೆ ಹೋಗಿ ಹಣ ಸಂಗ್ರಹಿಸಿಕೊಟ್ಟರು.
೧೯೨೦ರಲ್ಲಿ ಶಾಂತಕವಿಗಳು ಶಾಂತರಾದರು.
[ಬದಲಾಯಿಸಿ] ಗೌರವ
ಧಾರವಾಡದಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಚನಾಲಯಕ್ಕೆ ಶಾಂತಕವಿಗಳ ಗೌರವದಲ್ಲಿ “ಶಾಂತೇಶ ವಾಚನಾಲಯ” ಎಂದು ಹೆಸರಿಸಲಾಗಿದೆ.
[ಬದಲಾಯಿಸಿ] ಚರಮಗೀತೆ
೧೯೨೦ರ “ವಾಗ್ಭೂಷಣ” ಪತ್ರಿಕೆಯಲ್ಲಿ “ವಿದ್ಯಾರ್ಥಿ” ಎನ್ನುವವರು ಬರೆದ ಕವನದಲ್ಲಿ ಹೀಗಿದೆ:
“ಎದ್ದರೆ ಕನ್ನಡ ಕುಳಿತರೆ ಕನ್ನಡ ನುಡಿದರೆ ಕನ್ನಡವು
ಹೃದ್ಯವು ಕನ್ನಡ ಉದ್ಯಮ ಕನ್ನಡ ಕನ್ನಡ ಕನ್ನಡವು
ಕನಸು ಮನಸಿನೊಳು ಕನ್ನಡ ಕನ್ನಡ ನಿದ್ದೆಯು ಕನ್ನಡವು
ತಿನಿಸು ಕನ್ನಡ ಜೀವಿತ ಕನ್ನಡ ಎದ್ದರು ಕನ್ನಡವು”
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾವ್ಯ
- ಆನಂದ ಲಹರಿ
- ಋತುಸಂಹಾರ
- ಪುಷ್ಪಬಾಣ ವಿಲಾಸ
- ಮುಕುಂದ ದಾನಾಮೃತ
- ಮೇಘದೂತ
- ರಘುವಂಶ (ಎರಡನೆಯ ಸರ್ಗ)
- ರಸಿಕಾರಸಿಕ ವಿಚಾರ
- ವಿರಹತರಂಗ
- ವಿಷಕಂಠ ಖಡ್ಗ
[ಬದಲಾಯಿಸಿ] ಕೀರ್ತನ
- ಗಜೇಂದ್ರ ಮೋಕ್ಷ(೧೮೯೧)
- ರಾವಣ ವೇದಾವತೀ
- ಶ್ರೀಮತಿ ಸ್ವಯಂವರ
- ಹರಿಮಿಶ್ರೋಪಾಖ್ಯಾನ
[ಬದಲಾಯಿಸಿ] ಶಾಸ್ತ್ರ
- ಅಲಂಕಾರ ಶಾಸ್ತ್ರ
- ಲಘು ಕವಿತಾ ಪದ್ಧತಿ (ಟಿಪ್ಪಣಿ)
[ಬದಲಾಯಿಸಿ] ನಾಟಕ
- ಅಂಜನೇಯ ವಿಜಯ
- ಉಷಾಹರಣ (೧೮೭೭?)
- ಕವಿಕಂಠಕುಠಾರ
- ಕಾಳಿದಾಸ
- ಕೀಚಕವಧಾ (೧೮೯೧)
- ಕೃಷ್ಣ ರಾಧಿಕಾ ವಿಲಾಸ
- ಗಾಲವ ಚಿತ್ರಸೇನೆ
- ಚಂದ್ರಾವಳಿ
- ಜರಾಸಂಧ ವಧಾ
- ನಾಗಾನಂದ
- ನಾರದ ಕುಚೇಷ್ಟಾ
- ಪಾರ್ವತೀ ಪರಿಣಯ (ಗಿರಿಜಾ ಕಲ್ಯಾಣ)
- ಬೃಹಜ್ಜಂಬೂ ಚರಿತ್ರ
- ಭುಜಂಗೋಪದೇಶ
- ಮಯೂರಧ್ವಜ ಪ್ರತಾಪ
- ರಾವಣ ವಧಾ
- ವತ್ಸಲಾಹರಣ
- ವಾಸಷ್ಟ ನಾಯಕರ ಫಾರ್ಸು
- ವಿಶ್ವಾಮಿತ್ರ ತಪೋಭಂಗ ಅಥವಾ ಶಕುಂತಲಾ ಉತ್ಪತ್ತಿ
- ವ್ಯಭಿಚಾರಣಾರ್ಥ ಸಿಂಧು
- ಶ್ರೀಯಾಳ ಸತ್ವ ಪರೀಕ್ಷಾ
- ಸೀತಾರಣ್ಯಪ್ರವೇಶ ನಾಟಕ (೧೮೮೬)
- ಸೀತಾಸ್ವಯಂವರ
- ಸುಂದೋಪಸುಂದ ವಧೆ
- ಸುಧನ್ವ ವಧೆ
- ಹರಗರ್ವಪರಿಹಾರ
- ಹರಿಶ್ಚಂದ್ರ ಸತ್ವಪರೀಕ್ಷಾ (೧,೨)
[ಬದಲಾಯಿಸಿ] ಇತರ
- ಅಡ್ಡ ಕಥೆಗಳ ಬುಕ್ಕು
- ಅಲಾವಿ ಜಂಗು
- ಬರಗಾಲರಸು
- ವೇಶ್ಯಾವಾಟಿಕಾ ಸಂಚಾರ
- ಶೃಂಗಾರ ವಚನ ಸಂಗ್ರಹ (೧,೨) (೧೮೯೧)
- ಶೃಂಗಾರಸಾಗರ
- ಶ್ರೀಕೃಷ್ಣ ಮೋಹಿನಿ ದುಂದುಮೆ
- ಸತ್ವದರ್ಶನ