ಗೃಹಭಂಗ
From Wikipedia
ಗೃಹಭಂಗ ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್.ಭೈರಪ್ಪನವರ ಒಂದು ಪ್ರಸಿಧ್ಧ ಕಾದಂಬರಿ. ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ.
ಕಾದಂಬರಿಕಾರರು ತಮ್ಮ ಕಾದಂಬರಿಯ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. - ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯು ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು.
[ಬದಲಾಯಿಸಿ] ಗೃಹಭಂಗ - ಈ ಹೆಸರು ಹೇಗೆ ಬಂತು? - (ಕಾದಂಬರಿಕಾರರ ಅಭಿಪ್ರಾಯ)
ಕಾದಂಬರಿಗೆ ಇಟ್ಟಿರುವ ಗೃಹಭಂಗ ಎಂಬ ಹೆಸರು ಹೇಗೆ ಬಂದಿತೆನ್ನುವ ಬಗ್ಗೆಯೂ ಭೈರಪ್ಪನವರು ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ವಿವರಿಸಿದ್ದಾರೆ - ಕೆಲವು ಬಾರಿ ಕೃತಿ ರಚನೆಯಾಗುವಾಗ, ಅಥವಾ ಅದಕ್ಕಿಂತ ಮೊದಲೇ, ಹೆಸರು ಹೊಳೆದುಬಿಡುತ್ತದೆ. ಮತ್ತೆ ಕೆಲವುಬಾರಿ ಬರೆದು ಎರಡುವರ್ಷ ಸಂದು, ತಲೆಗೂದಲ ಮಧ್ಯೆ ಬೆರಳು ತೂರಿಸಿ ಯೋಚಿಸಿದರೂ ಹೊಳೆಯುವುದಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ``ಯಾವುದಾದರೇನು? ಹೆಸರೇ ಬೇಡ. `ಎಸ್.ಎಲ್. ಭೈರಪ್ಪ: ಕಾದಂಬರಿ ಸಂಖ್ಯೆ: ೮' ಎಂದು ಯಾಕೆ ಇಡಬಾರದು? ಎಂಬ ವಿಚಾರ ಹುಟ್ಟಿತ್ತು.
ವಸ್ತುವು ಹಲವು ಪಾರ್ಶ್ವಗಳುಳ್ಳದ್ದಾಗಿರುವಾಗ ಹೆಸರು ವಾಚಕರ ಗಮನವನ್ನೆಲ್ಲ ಒಂದೇ ಪಾರ್ಶ್ವದಲ್ಲಿ ಎಳೆದು ನಿಲ್ಲಿಸಿ, ಉಳಿದ ಭಾಗಗಳನ್ನು ಮಬ್ಬುಮಾಡುವ ಅಪಾಯವಿರುತ್ತದೆ. ಆದುದರಿಂದ ಯಾವ ಸಾಹಿತ್ಯ ಕೃತಿಯನ್ನು ಓದಿ ಗ್ರಹಿಸಬೇಕಾದರೂ ಲೇಖಕನು ಇಟ್ಟಿರುವ ಹೆಸರನ್ನು ಆರಂಭದಲ್ಲಿಯೇ ಪ್ರತ್ಯೇಕಿಸುವುದು ಕ್ಷೇಮ. ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹಸ್ತಪ್ರತಿಯನ್ನು ಓದಿ ವಿವರವಾಗಿ ಟೀಕೆ ಟಿಪ್ಪಣಿ ಮಾಡಿ, ತಿದ್ದಲು ಸಹಾಯಕರಾದ ದಿಲ್ಲಿ ಆಕಾಶವಾಣಿಯ ಎಂ.ಶಂಕರ್, ಬೆಂಗಳೂರಿನ ಎಂ.ಎಸ್.ಕೆ. ಪ್ರಭು ಇವರಿಗೂ ಹೊಳೆಯಲಿಲ್ಲ. ಹೆಸರಿಡದೆ ಪ್ರಕಟವಾಗುವುದು ಸಾಧವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, `ಗೃಹಭಂಗ' ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ.
[ಬದಲಾಯಿಸಿ] ಗೃಹಭಂಗ ಕಿರುತೆರೆ ಧಾರಾವಾಹಿಯಾಗಿ
ಈ ಕೃತಿಯ ಟಿವಿ ರೂಪಾಂತರ ೨೦೦೪-೨೦೦೫ ರಲ್ಲಿ ಈಟಿವಿ ವಾಹಿನಿಯಲ್ಲಿ ಪ್ರಸಾರವಾಯಿತು. ಜೀವನದ ಏರಿಳಿತಗಳಿಂದ ಧೃತಿಗೆಡದೆ ಜೀವನವನ್ನು ಕೇವಲ ಜೀವನವಾಗಿಯೆ ಕಾಣುವಂತ ಓರ್ವ ಅತಿ ಸಾದಾರಣ ಗೃಹಿಣಿಯ ಕಥೆ. ಈ ಧಾರಾವಾಹಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಹಾಗು ಮುಖ್ಯ ಪಾತ್ರದಲ್ಲಿ ಮಾಳವಿಕಾ ಅವಿನಾಶ್ ನಟಿಸಿದ್ದಾರೆ. ಇದರ ಶೀರ್ಷಿಕೆ ಗೀತೆಯನ್ನು ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ. ಗೀತೆಯ ಒಂದು ಸಾಲು - "ಎಲ್ಲ ಸಹಿಸಿ ಮುಂದೆ ಪಯಣ ಬದುಕೇ ವಿಸ್ಮಯರಂಗ..." ಈ ಕೃತಿಯ ಸಮಸ್ತ ಭಾವವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಧಾರಾವಾಹಿ ವೀಕ್ಷಿಸಿದವರ ಅಭಿಪ್ರಾಯವಾಗಿದೆ.
ಗೃಹಭ೦ಗ ಭೈರಪ್ಪನವರ ಜೀವನವನ್ನೆ ಬಿ೦ಬಿಸುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.