ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ
From Wikipedia
ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ (ಡಾ. ಎಂ ಸಿ ಮೋದಿ )(ಅಕ್ಟೋಬರ್ ೦೪, ೧೯೧೬ - ನವೆಂಬರ್ ೧೧, ೨೦೦೫) - ಕರ್ನಾಟಕ ಮತ್ತು ಭಾರತ ಕಂಡ ಅಪ್ರತಿಮ ನೇತ್ರ ವೈದ್ಯ ಮತ್ತು ಶಸ್ತ್ರಚಿಕಿತ್ಸೆ ತಜ್ಞ. 'ಕಣ್ಣು ಕೊಡುವ ಅಣ್ಣ' ಮತ್ತು 'ದೃಷ್ಟಿ ದೇವ' ಎಂದು ಜನರಿಂದ ನಾಮಾಂಕಿತರಾಗಿದ್ದ ಡಾ. ಎಂ ಸಿ ಮೋದಿ, ತಮ್ಮ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಸುಮಾರು ೭ ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದಾರೆ. ಭಾರತ ಸರ್ಕಾರವು ಡಾ. ಮೋದಿಯವರನ್ನು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಂದ ಸನ್ಮಾನಿಸಿದೆ.
[ಬದಲಾಯಿಸಿ] ಜೀವನ
ಮುರಿಗೆಪ್ಪ ಚನ್ನವೀರಪ್ಪ ಮೋದಿಯವರ ಜನ್ಮ ಅಕ್ಟೋಬರ್ ೦೪ ೧೯೧೬ರಲ್ಲಿ ಬಾಗಲಕೋಟೆಯ ಬೀಳಗಿ ಗ್ರಾಮದಲ್ಲಾಯಿತು. ಮೋದಿಯವರು ಜಮಖಂಡಿಯ ಪಿ ಬಿ ಪ್ರೌಡಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ತದನಂತರ ಬೆಳಗಾವಿ ಆಯುರ್ವೇದ ಕಾಲೇಜಿನಲ್ಲಿ ಓದಿ ಕೆಬಿಎಚ್‌ಬಿ ಕಣ್ಣಿನ ಆಸ್ಪತ್ರೆ ಹಾಗೂ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ಶಿಕ್ಷಣ ಪಡೆ ದರು. ಕಡುಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿದ ಮೋದಿಯವರು ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಬೆಳಗಾವಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ತದನಂತರ ದಾವಣಗೆರೆಯಲ್ಲಿ ನೆಲೆಸಿದರು. ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾಗಿ ಕೆಲವೆ ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಿದ್ದರು. ಕಣ್ಣಿನ ಪೊರೆ (ಕ್ಯಟರಾಕ್ಟ್)ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ನಿಸ್ಸಿಮರಾಗಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಭಾರತವಲ್ಲದೆ ರಷ್ಯಾ ಮತ್ತು ಅಮೇರಿಕ ಸೇರಿದಂತ ಹಲವಾರು ರಾಷ್ಟ್ರಗಳಲ್ಲೂ ಸಹ ತಮ್ಮ ಸೇವೆ ಸಲ್ಲಿಸಿ ಗೌರವಗಳಿಗೆ ಪಾತ್ರರಾಗಿದ್ದರು. ದಾವಣಗೆರೆ,ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕಣ್ಣು ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಶ್ರೀಯುತರು ತಮ್ಮ ಆಸ್ಪತ್ರೆಗಳಲ್ಲಿ ಬಡಬಗ್ಗರಿಗೆ ಉಚಿತ ಸೇವೆ ಒದಗಿಸುತ್ತಿದ್ದರು. ಸಾಮೂಹಿಕ ನೇತ್ರ ಚಿಕಿತ್ಸೆ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನು ಗಳಿಸಿದ್ದ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು. ಶ್ರೀಯುತರು ಕೆಲಕಾಲ ಕರ್ನಾಟಕ ವಿಧಾನ ಮಂಡಲದ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಸೇವಾ ಮನೋಭಾವದ ಧೀಮಂತ ವ್ಯಕ್ತಿತ್ವದ ಮೋದಿಯವರು ನವೆಂಬರ್ ೧೧ ೨೦೦೫ರಲ್ಲಿ, ತಮ್ಮ ೯೦ನೆ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕಾಲವಾದ ನಂತರವೂ ತಮ್ಮ ಕಣ್ಣುಗಳನ್ನು ಶ್ರೀಯುತರು ಕುರುಡರಿಗಾಗಿ ದಾನಮಾಡಿದ್ದಾರೆ. ಅವರ ಪುತ್ರ ಡಾ. ಅಮರನಾಥ ಮೋದಿ ಸಹ ನೇತ್ರ ತಜ್ಞರಾಗಿದ್ದು ತಂದೆಯ ಕೆಲಸವನ್ನು ಮುಂದುವರಿಸಿದ್ದಾರೆ.
[ಬದಲಾಯಿಸಿ] ಪ್ರಶಸ್ತಿಗಳು
ಕೇಂದ್ರ ಸರಕಾರ ಇವರ ಸೇವೆ ಮತ್ತು ಸಾಧನೆಯನ್ನು ಶ್ಲಾಘಿಸಿ ೧೯೫೬ರಲ್ಲಿ ಪದ್ಮಶ್ರೀ ಮತ್ತು ೧೯೬೮ರಲ್ಲಿ ಪದ್ಮಭೂಷಣ ನೀಡಿದೆ. ಮೈಸೂರು, ಕರ್ನಾಟಕ ಮತ್ತು ಪುಣೆ ವಿಶ್ವವಿದ್ಯಾಲಯಗಳು ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿವೆ. ಕರ್ನಾಟಕ ಸರ್ಕಾರ ಡಾ. ಎಂ ಸಿ ಮೋದಿಯವರನ್ನು ರಾಜ್ಯೋತ್ಸವ ಪ್ರಶಸ್ತಿಯಿಂದ ಗೌರವಿಸಿದೆ. ಮೋದಿಯವರು ತಿರುಪತಿಯಲ್ಲಿ ಒಂದೆ ದಿನದಲ್ಲಿ ೮೩೩ ಶಸ್ತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು. ಒಟ್ಟಾರೆ ೭ ಲಕ್ಷಕ್ಕೂ ಹೆಚ್ಚು ಕಣ್ಣಿನ ಶಸ್ತ್ರ ಚಿಕಿತ್ಸೆ ಕೂಡ ಒಂದು ವಿಶ್ವ ದಾಖಲೆ. ಇವುಗಳನ್ನು ಗಿನ್ನಿಸ್ ದಾಖಲೆಗಳ ಪುಸ್ತಕದಲ್ಲಿ ಸೇರಿಸಲಾಗಿದೆ. ನೈಟ್ ಆಫ್ ಬ್ಲೈಂಡ್, ಅಂಬಾಸೆಡರ್ ಆಫ್ ಗುಡ್ ವಿಲ್ ಮತ್ತು ಇತರ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. ಮೋದಿಯವರು ಎಲ್ಲಾ ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಹಣವನ್ನು ಬಡವರಿಗಾಗಿ ವ್ಯಯಿಸಿ ತಮ್ಮ ಸೇವಾ ಮನೋಭಾವವನ್ನು ಮೆರೆದಿದ್ದಾರೆ.
[ಬದಲಾಯಿಸಿ] ನಿಧನ
ಡಾ.ಎಂ.ಸಿ.ಮೋದಿಯವರು ೨೦೦೫ ನವೆಂಬರ್ ೧೧ರಂದು ನಿಧನರಾದರು