ಸಾಮ್ರಾಟ್ ಅಶೋಕ
From Wikipedia
ಈ ಲೇಖನವನ್ನು Ashoka ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
|
||
Allegiance: | ಮಗಧ ಸಾಮ್ರಾಜ್ಯ | |
Rank: | ಸಾಮ್ರಾಟ | |
ಉತ್ತರಾಧಿಕಾರಿ : | ದಶರಥ ಮೌರ್ಯ | |
ರಾಜ್ಯವಾಳಿದ ಅವಧಿ : | ಕ್ರಿ.ಪೂ ೨೭೩-ಕ್ರಿ.ಪೂ ೨೩೨ | |
ಜನ್ಮ ಸ್ಥಳ : | ಪಾಟಲೀಪುತ್ರ, ಭಾರತ | |
ಯುದ್ಧಗಳು | ಕಳಿಂಗ ಯುದ್ಧ |
ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ(ಕ್ರಿ.ಪೂ ೩೦೪ - ಕ್ರಿ.ಪೂ ೨೩೨) . ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು.
'ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥ ಮೂಡಿಬರುತ್ತದೆ.
ಅನೇಕ ದಂಡಯಾತ್ರೆಗಳ ನಂತರ , ಅಶೋಕನು ದಕ್ಷಿಣ ಏಶಿಯಾದ ಬಹುಭಾಗವಷ್ಟೇ ಅಲ್ಲ ಅದರಾಚೆಗೂ ಪಶ್ಚಿಮದಲ್ಲಿ ಇವತ್ತಿನ ಅಫ್ಘಾನಿಸ್ಥಾನ ಮತ್ತು ಪರ್ಶಿಯಾದಿಂದ ಪೂರ್ವದಲ್ಲಿ ಬಂಗಾಲ ಮತ್ತು ಆಸ್ಸಾಮ್ ವರೆಗೆ , ದಕ್ಷಿಣದಲ್ಲಿ ಮೈಸೂರಿನವರೆಗೆ ರಾಜ್ಯವಾಳಿದನು . ಬೌದ್ಧಧರ್ಮದ ಅನುಯಾಯಿಯಾದ ಆಶೋಕನು, ಶಾಕ್ಯಮುನಿ ಬುದ್ಧನ ಜೀವನದಲ್ಲಿನ ಮಹತ್ವದ ಸ್ಥಳಗಳಲ್ಲಿ ಅನೇಕ ಸ್ಮಾರಕಗಳ್ನ್ನು ನಿಲ್ಲಿಸಿದನು. ಬೌದ್ಧ ಸಂಪ್ರದಾಯದ ಪ್ರಕಾರ ಅವನು ಬೌದ್ಧ ಧರ್ಮದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ತನ್ನನ್ನು ತೊದಗಿಸಿಕೊಂಡನು .
ಅಶೋಕ ಎಂದರೆ ಸಂಸ್ಕೃತ ದಲ್ಲಿ ದುಃಖವಿಲ್ಲದವನು ಎಂದರ್ಥ . ಅವನ ಶಾಸನಗಳಲ್ಲಿ ಅವನನ್ನು "ದೇವನಾಂಪ್ರಿಯ" ಅಂದರೆ "ದೇವತೆಗಳಿಗೆ ಪ್ರಿಯನಾದವನು" ಎಂದು ಕರೆಯಲಾಗುತ್ತದೆ .
ಹೆಚ್. ಜಿ. ವೆಲ್ಸ್ ನು ಅಶೋಕನ ಕುರಿತು ಹೀಗೆ ಬರೆದಿದ್ದಾನೆ : "ಜಗತ್ತಿನ ಇತಿಹಾಸದಲ್ಲಿ ಸಾವಿರಾರು ರಾಜ ಮಹಾರಾಜರು , ಸಾಮ್ರಾಟರು ತಮ್ಮನ್ನು ಬಗೆಬಗೆಯಿಂದ ಹೊಗಳಿಕೊಂಡಿದ್ದಾರೆ . ಅವರು ಬಹಲ ಸ್ವಲ್ಪ ಕಾಲ ಶೋಭಾಯಮಾನರಾಗಿ ಹೊಳೆದರು . ಆದರೆ ಬಲು ಬೇಗ ಮರೆಯಾದರು . ಆದರೆ ಅಶೋಕನು ಇಂದಿಗೂ ಕೂಡ ಬಹಳ ಪ್ರಭೆಯುಳ್ಳ ನಕ್ಷತ್ರದ ಹಾಗೆ ಹೊಳೆಯುತ್ತಾನೆ. "
ಪರಿವಿಡಿ |
[ಬದಲಾಯಿಸಿ] ಆರಂಭಿಕ ಜೀವನ
ಮೌರ್ಯ ರಾಜ ಬಿಂದುಸಾರನಿಗೆ ಅವನ ರಾಣಿಯರಲ್ಲೊಬ್ಬಳಾದ ಧರ್ಮಾ ಎಂಬಾಕೆಯಿಂದ ಹುಟ್ಟಿದವನೇ ಅಶೋಕ. ಈ ಧರ್ಮಾ ರಾಣಿಯು, ಬಡಬ್ರಾಹ್ಮಣನೊಬ್ಬನ ಮಗಳೆಂದೂ,ಅವಳಿಗೆ ಹುಟ್ಟುವ ಮಗ ಮಹಾರಾಜನಾಗುತ್ತಾನೆ ಎಂಬ ಭವಿಷ್ಯ ತಿಳಿದ ಅವಳ ತಂದೆ ,ಅವಳನ್ನು ಬಿಂದುಸಾರನ ಅಂತಃಪುರಕ್ಕೆ ಸೇರಿಸಿದ ಎಂದು ಕಥೆಯಿದೆ. ಧರ್ಮಾ ಬ್ರಾಹ್ಮಣಳಾದರೂ , ರಾಜವಂಶದವಳಲ್ಲ ಎಂಬ ಕಾರಣಕ್ಕೆ ಅಂತಃಪುರದಲ್ಲಿ ಅವಳಿಗೆ ನೀಚ ಸ್ಥಾನವಿತ್ತು.
ಅನೇಕ ಮಲ-ಸಹೋದರರೊಂದಿಗೆ, ಹಾಗೂ ಧರ್ಮಾಳ ಇನ್ನೊಬ್ಬ ಮಗ ,ವಿತ್ತಶೋಕ ಎಂಬ ತಮ್ಮನೊಂದಿಗೆ, ಅಶೋಕ ಬೆಳೆದ. ರಾಜಕುಮಾರರಲ್ಲಿ ತೀವ್ರ ಸ್ಪರ್ಧೆಯಿದ್ದರೂ ಅಶೋಕ, ಸೈನಿಕ ಹಾಗೂ ಇತರ ಶೈಕ್ಷಣಿಕ ವಿಷಯಗಳಲ್ಲಿ , ಸದಾ ಮುಂದಿದ್ದ. ಈ ಸಹೋದರರಲ್ಲಿ , ಅದರಲ್ಲಿಯೂ ಮುಖ್ಯವಾಗಿ , ಅಶೋಕ ಮತ್ತು ಅವನ ಸಹೋದರ ಸುಸೀಮನಲ್ಲಿ ತೀವ್ರ ಪೈಪೋಟಿ ಯುದ್ಧ ಪಟುಗಳಾಗಿಯೂ, ಆಡಳಿತಗಾರರಾಗಿಯೂ, ಇತ್ತು. .
[ಬದಲಾಯಿಸಿ] ಅಧಿಕಾರಕ್ಕೆ ಏರಿಕೆ
ಅತ್ಯುತ್ತಮ ಯೋಧನಾಗಿಯೂ, ಚಾಣಾಕ್ಷ ರಾಜನೀತಿಜ್ಙನಾಗಿಯೂ ಬೆಳೆದ ಅಶೋಕನು ಮೌರ್ಯ ಸೇನೆಯ ಅನೇಕ ತುಕಡಿಗಳ ನಾಯಕತ್ವ ವಹಿಸಿದ. ರಾಜ್ಯಾದ್ಯಂತ ಬೆಳೆಯುತ್ತಿದ್ದ ಅಶೋಕನ ಜನಪ್ರಿಯತೆಯನ್ನು ಕಂಡು ಕರುಬಿದ ಅವನ ಅಣ್ಣಂದಿರು, ಬಿಂದುಸಾರನು ತನ್ನ ನಂತರದ ರಾಜನಾಗಿ ಅಶೋಕನನ್ನೇ ಚುನಾಯಿಸಬಹುದು ಎಂಬ ಆತಂಕಕ್ಕೊಳಗಾದರು. ಅವರೆಲ್ಲರಿಗೂ ಹಿರಿಯನಾಗಿ, ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿದ್ದ, ರಾಜಕುಮಾರ ಸುಸೀಮನು, ತನ್ನ ರಾಜ್ಯಪಾಲಿಕೆಯ ಅಧೀನದಲ್ಲಿದ್ದ ಸಿಂಧ್ ಪ್ರಾಂತದ ತಕ್ಷಶಿಲೆಯಲ್ಲಿ ತಲೆಯೆತ್ತಿದ್ದ ರಾಜವಿರೋಧೀ ಪ್ರತಿಭಟನೆಯನ್ನು ಹತ್ತಿಕ್ಕಲು ಅಶೋಕನನ್ನು ಕಳುಹಿಸುವಂತೆ ಬಿಂದುಸಾರನ ಮನವೊಲಿಸಿದನು. ಸುಸೀಮನ ದುರಾಡಳಿತದಿಂದಲೂ, ಅಲ್ಲಿಯ ಇಂಡೋ-ಗ್ರೀಕ್ ಬುಡಕಟ್ಟಿನ ಜನರ ಯುದ್ಧಪ್ರೇಮಿ ಪ್ರವೃತ್ತಿಯಿಂದಲೂ , ತಕ್ಷಶಿಲೆ ಪ್ರಕ್ಷುಬ್ದವಾಗಿತ್ತು. ಇದರಿಂದ ಅನೇಕ ಬಂಡುಕೋರ ಗುಂಪುಗಳ ಸೃಷ್ಟಿಯಾಗಿ, ಅರಾಜಕತೆ ಬೇರುಬಿಡುತ್ತಿತ್ತು. ತಂದೆಯ ಆಜ್ಙೆಯನ್ನು ಪಾಲಿಸಿ, ಅಶೋಕ ತಕ್ಷಶಿಲೆಗೆ ಪಯಣ ಬೆಳೆಸಿದ. ಅಶೋಕನ ಆಗಮನದ ಸುದ್ದಿ ಹರಡುತ್ತಿದ್ದಂತೆ, ಬಂಡುಕೋರರು ಅವನನ್ನು ಸ್ವಾಗತಮಾಡಿದ್ದರಿಂದ, ಪ್ರತಿಭಟನೆಯು ಶಾಂತಿಯುತವಾಗಿ ಅಂತ್ಯವಾಯಿತು. (ಇದೇ ಪ್ರಾಂತ ಮುಂದೆ , ಅಶೋಕನ ಆಳ್ವಿಕೆಯ ಕಾಲದಲ್ಲಿ, ಮತ್ತೆ ಬಂಡೆದ್ದಿತು. ಆದರೆ ಈ ಬಾರಿ ಅದನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು.)
ಅಶೋಕನ ಯಶಸ್ಸಿನಲ್ಲಿ ಮುಂದೆ ಚಕ್ರವರ್ತಿಯಾಗುವ ಮಹತ್ವಾಕಾಂಕ್ಷೆಯನ್ನು ಕಂಡ ಅವನ ಮಲ-ಸೋದರರು ಮತ್ತಷ್ಟುಅಸ್ವಸ್ಥರಾದರು. ಸುಸೀಮನ ಇನ್ನಷ್ಟು ಚಿತಾವಣೆಯಿಂದ , ಬಿಂದುಸಾರ, ಅಶೋಕನನ್ನು ರಾಜ್ಯಬಿಟ್ಟು ತೊಲಗಲು ಆದೇಶಿಸಿದ. ಅದರಂತೆ, ಕಳಿಂಗಕ್ಕೆ ಹೋಗಿ ಅಜ್ಙಾತವಾಗಿ ನೆಲೆಸಿದ ಅಶೋಕ . ಅಲ್ಲಿ ಪರಿಚಯವಾದ ಕೌರ್ವಾಕಿ ಎಂಬ ಬೆಸ್ತರ ಹೆಂಗಸಿನ ಪ್ರೇಮದಲ್ಲಿ ಸಿಲುಕಿದ. ಈಚೆಗೆ ಸಿಕ್ಕಿದ ಶಾಸನಗಳ ಪ್ರಕಾರ, ಆಕೆ ದ್ವಿತೀಯ ಅಥವಾ ತೃತೀಯ ರಾಣಿಯಾದಳು.
ಇಷ್ಟರಲ್ಲಿ , ಉಜ್ಜಯಿನಿಯಲ್ಲಿ ಮತ್ತೊಂದು ಹಿಂಸಾತ್ಮಕ ಪ್ರತಿಭಟನೆ ಪ್ರಾರಂಭವಾಗಿತ್ತು. ಎರಡು ವರ್ಷಗಳ ಬಹಿಷ್ಕಾರದ ನಂತರ ಬಿಂದುಸಾರ ಅಶೋಕನ್ನು ಮರಳಿ ಕರೆಯಿಸಿದ. ಉಜ್ಜಯಿನಿಗೆ ಪ್ರತಿಭಟನೆಯನ್ನು ಎದುರಿಸಲು ಹೋದ ಅಶೋಕ ಅಲ್ಲಿ ಗಾಯಗೊಂಡರೂ, ಅವನ ಸೇನಾನಾಯಕರು ಪ್ರತಿಭಟನೆಯನ್ನು ಉಪಶಮನ ಮಾಡುವುದರಲ್ಲಿ ಯಶಸ್ವಿಯಾದರು. ಸುಸೀಮನ ನಂಬಿಕಸ್ತಬಂಟರಿಂದ ತೊಂದರೆಗೀಡಾಗಬಹದು ಎಂಬ ಶಂಕೆಯಿಂದ ಅಶೋಕನ್ನು ಬಚ್ಚಿಟ್ಟು ಶುಶ್ರೂಷೆ ಮಾಡಲಾಯಿತು. ಇಲ್ಲಿ ಅವನ ಸೇವೆ ಮಾಡಿದವರು ಬೌದ್ಧ ಸನ್ಯಾಸಿ ಸನ್ಯಾಸಿನಿಯರು. ಅಶೋಕನಿಗೆ ಬುದ್ಧನ ಬೋಧನೆಗಳ ಮೊದಲ ಪರಿಚಯವಾದದ್ದೂ ಮತ್ತು ಪಕ್ಕದ ವಿದಿಶಾ ನಗರದ ವ್ಯಾಪಾರಿಯೊಬ್ಬನ ಮಗಳಾದ ,ದೇವಿ ಎಂಬ ಸುಂದರ ತರುಣಿ ಅವನ ಪರಿಚಾರಿಕೆಯಾಗಿ ಪರಿಚಯವಾದದ್ದೂ ಇಲ್ಲಿಯೇ.ಗಾಯಗಳಿಂದ ಚೇತರಿಸಿಕೊಂಡ ಮೇಲೆ ಅಶೋಕ ಆಕೆಯನ್ನು ಮದುವೆಯಾದ. ಈಗಾಗಲೇ ಅಶೋಕನಿಗೆ ಅಸಾಂಧಿಮಿತ್ರ ಎಂಬ ತರುಣಿಯೊಂದಿಗೆ ಮದುವೆಯಾಗಿತ್ತು. ಆಕೆ ಸಾಯುವವರೆಗೂ ಅಶೋಕನ ಪ್ರೀತಿಪಾತ್ರ ಪಟ್ಟದರಾಣಿಯಾಗಿ ಬಾಳಿದಳು. ಅವಳು ತನ್ನ ಸಂಪೂರ್ಣ ಜೀವನವನ್ನು ಪಾಟಲೀಪುತ್ರದಲ್ಲಿ ಕಳೆದಂತೆ ಕಂಡುಬರುತ್ತದೆ.
ಅದರ ನಂತರದ ವರ್ಷ ಶಾಂತಿಯುತವಾಗಿ ಸಾಗಿತು. ಅವನ ರಾಣಿ, ದೇವಿ ಚೊಚ್ಚಲ ಮಗುವಿನ ತಾಯಿಯಾಗುವುದರಲ್ಲಿದ್ದಳು. ಇದೇ ಸುಮಾರಿಗೆ , ಬಿಂದುಸಾರನು , ಕಾಯಿಲೆ ಬಿದ್ದು ಮರಣಶಯ್ಯೆಯಲ್ಲಿದ್ದನು. ಬಿಂದುಸಾರನು ಸುಸೀಮನ ಪರವಾಗಿದ್ದರೂ, ಸುಸೀಮನ ವೈರಿಯಾಗಿದ್ದ ರಾಧಾಗುಪ್ತನೆಂಬ ಮಂತ್ರಿಯ ನಾಯಕತ್ವದ ಮಂತ್ರಿಗಳ ಗುಂಪೊಂದು, ಅಶೋಕನಿಗೆ ಕರೆಕಳುಹಿಸಿ, ರಾಜನಾಗಲು ಆಹ್ವಾನಿಸಿತು. ಒಂದು ಬೌದ್ಧ ಕತೆಯ ಪ್ರಕಾರ , ಅಶೋಕನು ಕ್ರೋಧಾವೇಶದಲ್ಲಿ ಸುಸೀಮನ್ನೂ ಸೇರಿದಂತೆ ತನ್ನೆಲ್ಲಾ ಸೋದರರನ್ನು ಕೊಂದು, ಅವರ ಹೆಣಗಳನ್ನು ಪಾಟಲೀಪುತ್ರದ ಬಾವಿಯೊಂದರಲ್ಲಿ ಬಿಸುಟನು. ಈಗಾಗಲೇ ಬಿಂದುಸಾರನು ಸ್ವರ್ಗವಾಸಿಯಾಗಿದ್ದನೋ ಎಂಬುದು ಸ್ಪಷ್ಟವಾಗಿಲ್ಲ. ಅಶೋಕನ ಜೀವನದ ಈ ಘಟ್ಟದಲ್ಲಿ ಅನೇಕರು ಅವನನ್ನು “ಚಂಡ ಅಶೋಕ” ಅರ್ಥಾತ್ ಹೃದಯಹೀನ ಕೊಲೆಗಡುಕ ಎಂದು ಕರೆದರು. ಈ ಕಾಲದ ಅಶೋಕನ ಕ್ರೌರ್ಯವನ್ನು ಬೌದ್ಧ ಕತೆಗಳು ಬಣ್ಣಿಸುತ್ತವೆ. ಇವುಗಳಲ್ಲಿ ಬಹುತೇಕ ಕತೆಗಳು ನಂಬಲನರ್ಹವಾಗಿದ್ದು , ಅಶೋಕ ಮುಂದೆ ಬೌದ್ಧಧರ್ಮವನ್ನು ಸ್ವೀಕಾರ ಮಾಡಿದ ಮೇಲೆ ಅವನಲ್ಲುಂಟಾದ ಪರಿವರ್ತನೆಯ ಮಹತ್ತನ್ನು ಹೆಚ್ಚುಮಾಡಲು ಹೇಳಿರುವಂತಿದೆ. ಪಟ್ಟಕ್ಕೇರಿದ ಅಶೋಕ ಮುಂದಿನ ಎಂಟುವರ್ಷ ತನ್ನ ರಾಜ್ಯವನ್ನು ವಿಸ್ತರಿಸಿದ; ಅದು ಪೂರ್ವದಲ್ಲಿ ಇಂದಿನ ಬಾಂಗ್ಲಾದೇಶ,ಅಸ್ಸಾಮ್ ವರೆಗೆ, ಪ ಶ್ಚಿಮದಲ್ಲಿ ಇಂದಿನ ಇರಾನ್ ಮತ್ತು ಅಫಘಾನಿಸ್ತಾನದವರೆಗೂ,ಉತ್ತರದಲ್ಲಿ ಪಾಮೀರ್ ಗ್ರಂಥಿಯವರೆಗೂ ಮತ್ತು ದಕ್ಷಿಣದಲ್ಲಿ ದಕ್ಷಿಣಭಾರತದ ಭೂಖಂಡದವರೆಗೂ ಹಬ್ಬಿತ್ತು. ಈಗ ಅಶೋಕನಿಗೆ ಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಗಿತ್ತು. ಇದೇ ಸುಮಾರಿಗೆ, ಅವನ ಬೌದ್ಧ ರಾಣಿ, ದೇವಿಗೆ ಎರಡು ಮಕ್ಕಳಾಗಿದ್ದರು. ಮಹೀಂದ್ರ ಎಂಬ ಮಗ ಮತ್ತು ಸಂಘಮಿತ್ರ ಎಂಬ ಮಗಳು.
[ಬದಲಾಯಿಸಿ] ಕಳಿಂಗದ ವಿಜಯ
- ಮುಖ್ಯ ಲೇಖನ: ಕಳಿಂಗ ಯುದ್ಧ
ಆಶೋಕನ ಆಳಿಕೆಯ ಆರಂಭದ ಭಾಗ ಸಾಕಷ್ಟು ರಕ್ತಸಿಕ್ತವಾಗಿತ್ತೆಂದು ಕಂಡು ಬರುತ್ತದೆ. ಅಶೋಕನು ಒಂದಿಲ್ಲೊಂದು ಯುದ್ಧದಲ್ಲಿ ಸದಾ ತೊಡಗಿಕೊಂಡಿದ್ದು ಒಂದರ ಹಿಂದೊಂದು ಪ್ರದೇಶಗಳನ್ನು ಗೆಲ್ಲುತ್ತ ಅದಾಗಲೇ ದೊಡ್ಡದಾಗಿದ್ದ ಮೌರ್ಯ ಸಾಮ್ರಾಜ್ಯವನ್ನು ಮತ್ತೂ ವಿಸ್ತರಿಸುತ್ತ ತನ್ನ ಸಂಪತ್ತನ್ನು ಹೆಚ್ಚಿಸುತ್ತ ಇದ್ದನು . ಕಳಿಂಗದ ಮೇಲಿನದು ಅವನ ಕೊನೆಯ ಗೆಲುವು. ಕಳಿಂಗವು ಇಂದಿನ ಓರಿಸ್ಸಾದ ಪೂರ್ವ ತೀರದ ರಾಜ್ಯವಾಗಿತ್ತು . ಕಳಿಂಗವು ತನ್ನ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವಗಳ ಬಗ್ಗೆ ಹೆಮ್ಮೆಪಡುತ್ತಿತ್ತು ; ಸಾರ್ವಭೌಮ ಗಣರಾಜ್ಯವಾದ ಕಳಿಂಗವು ಕ್ಷತ್ರಿಯ ರಾಜರನ್ನೂ ರಾಜಧರ್ಮದ ಕಲ್ಪನೆಯನ್ನೂ ಹೊಂದಿದ್ದ ಅಂದಿನ ಭಾರತದ ಆಡಳಿತವ್ಯವಸ್ಥೆಗೆ ಒಂದು ಅಪವಾದವಾಗಿತ್ತು .
ಕಳಿಂಗ ಯುದ್ಧ (ಕ್ರಿ.ಪೂ.265 ಅಥವಾ ಕ್ರಿ.ಪೂ.263)ದ ಆರಂಭಕ್ಕೆ ಕಾರಣ ಏನೆಂದು ನಿಶ್ಚಿತವಾಗಿ ತಿಳಿದಿಲ್ಲ . ಅಶೋಕನ ಸೊದರರಲ್ಲೊಬ್ಬ - ಬಹುಶಃ ಸುಸೀಮನ ಬೆಂಬಲಿಗನೂ - ಕಳಿಂಗಕ್ಕೆ ಓದಿ ಹೋಗಿ ಆಶ್ರಯ ಪಡೆದಿರಬಹುದು. ಇದರಿಂದ ಅಶೋಕನು ಸಿಟ್ಟಿಗೆದ್ದನು . ಈ ದ್ರೋಹಕ್ಕಾಗಿ ಕಳಿಂಗದ ಮೇಲೆ ಆಕ್ರಮಣ ಮಾಡಲು ಅವನ ಮಂತ್ರಿಗಳು ಸಲಹೆ ನೀಡಿದರು . ಅದರಂತೆ,ಅಶೋಕನು ಶರಣಾಗಲು ಕಳಿಂಗದ ರಾಜಮನೆತನಕ್ಕೆ ಆದೇಶ ನೀಡಿದನು. ಅವರು ಈ ಆದೇಶವನ್ನು ಉಲ್ಲಂಘಿಸಿದಾಗ , ಕಳಿಂಗವನ್ನು ಮಣಿಸಲು ಅಶೋಕನು ತನ್ನ ಒಬ್ಬ ಸೇನಾಪತಿಯನ್ನು ಕಳಿಂಗಕ್ಕೆ ಕಳಿಸಿದನು .
ಆದರೆ, ಕಳಿಂಗದ ಚಾಣಾಕ್ಷ ದಂಡನಾಯಕನಿಂದ , ಅಶೋಕನ ಸೇನೆ , ಅದರ ನಾಯಕನೊಂದಿಗೆ, ಧೂಳೀಪಟವಾಯಿತು. ಈ ಸೋಲಿನಿಂದ ತಬ್ಬಿಬ್ಬಾದ ಅಶೋಕ, ಅಲ್ಲಿಯವರೆಗಿನ ಭಾರತದ ಇತಿಹಾಸದಲ್ಲೇ ಅತಿದೊಡ್ಡದಾಗಿದ್ದ ದಂಡಿನೊಡನೆ ಕಳಿಂಗದ ಮೇಲೆ ಏರಿ ಹೋದ. ಕಳಿಂಗವು ಭಾರೀ ಪ್ರತಿರೋಧವನ್ನೊಡ್ಡಿತು . ಆದರೆ ಅಶೋಕನ ಬಲಿಷ್ಠ ಸೈನ್ಯ , ಉತ್ತಮ ಆಯುಧಗಳು ಮತ್ತು ಸೈನಿಕರ ಮತ್ತು ಸೇನಾಪತಿಗಳ ಅನುಭವಗಳಿಗೆ ಅವರು ಸಾಟಿಯಾಗಲಿಲ್ಲ . ಇಡೀ ಕಳಿಂಗವನ್ನು ಲೂಟಿ ಮಾಡಿ ನಾಶ ಮಾಡಲಾಯಿತು ಅಶೋಕನ ನಂತರದ ಶಿಲಾಶಾಸನಗಳು ತಿಳಿಸುವಂತೆ ಕಳಿಂಗದ ಕಡೆ ಒಂದು ಲಕ್ಷ ಜನರು ಮತ್ತು ಅಶೋಕನ ಸೈನ್ಯದ ಹತ್ತು ಸಾವಿರ ಜನರು ಕೊಲ್ಲಲ್ಪಟ್ಟರು . ಸಾವಿರಾರು ಜನ ಸ್ತ್ರೀಪುರುಷರನ್ನು ಗಡಿಪಾರು ಮಾಡಲಾಯಿತು .
[ಬದಲಾಯಿಸಿ] ಬೌದ್ಧಧರ್ಮಕ್ಕೆ ಶರಣು
- ಮುಖ್ಯ ಲೇಖನ: ಭಾರತದಲ್ಲಿ ಬೌದ್ಧಧರ್ಮ
ದಂತಕತೆಯ ಪ್ರಕಾರ , ಯುದ್ಧದ ನಂತರ ಒಂದುದಿನ ಅಶೋಕನು ನಗರಪ್ರದಕ್ಷಿಣೆಗೆಂದು ಹೊರಟು ಎಲ್ಲೆಲ್ಲೂ ಸುಟ್ಟುಹೋದ ಮನೆಗಳನ್ನು ಚಲ್ಲಾಪಿಲ್ಲಿಯಾಗಿ ಬಿದ್ದ ಹೆಣಗಳನ್ನು ನೋಡಿದನು . ಇದರಿಂದ ಅವನ ಮನಸ್ಸು ಅಸ್ವಸ್ಥವಾಯಿತು . "ನಾನೇನು ಮಾಡಿ ಬಿಟ್ಟೆ ?" ಎಂದು ಉದ್ಗಾರ ತೆಗೆದು ಕಣ್ಣೀರಿಟ್ಟನು . ಗೆಲುವಿನಲ್ಲಿನ ಈ ಕ್ರೌರ್ಯವು ಅವನ್ನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿತು . ಅವನು ತನ್ನ ಅಧಿಕಾರವನ್ನೆಲ್ಲ ಈ ಹೊಸಧರ್ಮವನ್ನು ರೋಂ , ಇಜಿಪ್ಟ್ ಗಳಷ್ಟು ದೂರ ದೂರಕ್ಕೆ ಪ್ರಚಾರಮಾಡಲು ಬಳಸಿದನು.
ದಂತಕಥೆಗಳ ಪ್ರಕಾರ , ಅಶೋಕನು ಬೌದ್ಧಧರ್ಮಕ್ಕೆ ಒಲಿಯಲು ಇನ್ನೊಂದು ಕಾರಣವಿತ್ತು . ಅಶೋಕನು ಗಲ್ಲಿಗೇರಿಸಿದ ಸೋದರರಲ್ಲೊಬ್ಬನ್ನನ್ನು ಮದುವೆಯಾಗಿದ್ದ ಮೌರ್ಯ ರಾಜಕುಮಾರಿಯೊಬ್ಬಳು ತನ್ನ ಗರ್ಭಸ್ಥ ಶಿಶುವಿನ ಜೀವವನ್ನು ಉಳಿಸುವದಕ್ಕೋಸ್ಕರ ಒಬ್ಬ ದಾಸಿಯೊಂದಿಗೆ ತನ್ನ ಅರಮನೆಯನ್ನು ಬಿಟ್ಟು ಓಡಿ ಹೋದಲು. ಸಾಕಷ್ಟು ದೂರ ಪ್ರಯಾಣದ ನಂತರ ಗರ್ಭಿಣಿ ರಾಜಕುಮಾರಿಯು ಅರಣ್ಯದಲ್ಲಿ ಒಂದು ಮರದ ಕೆಳಗೆ ಕುಸಿದಳು . ದಾಸಿಯು ಸಹಯಕ್ಕೆ ವೈದ್ಯನನ್ನೋ ಪೂಜಾರಿಯನ್ನೋ ಕರೆತರಲು ಹತ್ತಿರದ ಒಂದು ಆಶ್ರಮಕ್ಕೆ ಹೋದಳು . ಅಷ್ಟರಲ್ಲಿ ಆ ಮರದ ಕೆಳಗೆ ರಾಜಕುಮಾರಿಯು ಒಂದು ಗಂದು ಮಗುವಿಗೆ ಜನ್ಮವಿತ್ತಳು . ಆಶ್ರಮದ ಬ್ರಾಹ್ಮಣರು ರಾಜಕುಮಾರನನ್ನು ಬೆಳೆಸಿ ವಿದ್ಯೆಯನ್ನು ಕಲಿಸಿದರು . ನಂತರ ಅವನಿಗೆ ಹದಿಮೂರು ವರ್ಷಗಳಾದಾಗ ಅಶೋಕನ ಕಣ್ಣಿಗೆ ಬಿದ್ದನು . ಅಷ್ಟು ಎಳೆಯ ಬಾಲಕನು ಮುನಿಯ ವೇಷದಲ್ಲಿರುವದನ್ನು ನೋಡಿ ಅಶೋಕನಿಗೆ ಆಶ್ಚರ್ಯವಾಯಿತು. ತನ್ನ ಪರಿಚಯವನ್ನು ಆ ಬಾಲಕನು ತಿಳಿಸಿದಾಗ ಅಶೋಕನಿಗೆ ಅಪರಾಧಭಾವನೆ ಉಂಟಾಗಿ, ವಾತ್ಸಲ್ಲ್ಯವುಕ್ಕಿ ಆ ಬಾಲಕನನ್ನೂ ಅವನ ತಾಯಿಯನ್ನೂ ಅರಮನೆಗೆ ತೆಗೆದುಕೊಂಡು ಹೋದನು .
ಬೌದ್ಧಳಾದ ರಾಣಿ ದೇವಿ, ಇದೇ ವೇಳೆಯಲ್ಲಿ , ತನ್ನ ಮಕ್ಕಳನ್ನು ಬೌದ್ಧಧರ್ಮದವರನ್ನಾಗಿಯೇ ಬೆಳೆಸುತ್ತಿದ್ದಳು. ಕಳಿಂಗದಲ್ಲಿ ಅಶೋಕನ ಕ್ರೌರ್ಯವನ್ನು ನೋಡಿ ಆಕೆ ಬಹುಶಃ ಅವನನ್ನು ತೊರೆದಳು. ಇದರಿಂದ ದುಃಖಗೊಂಡ ಅಶೋಕನನ್ನು ಅವನ ಸೋದರನ ಮಗ (ಆಶ್ರಮದಲ್ಲಿ ಬೆಳೆದು,ರಾಜಪುತ್ರ ಎನ್ನುವುದಕ್ಕಿಂತ ಸನ್ಯಾಸಿಯೋ ಎಂಬಂತಿದ್ದ )ಅವನನ್ನು ಸಮಾಧಾನಿಸಿ, ಬೌದ್ಧ ಧರ್ಮವನ್ನು ಸೇರುವಂತೆಯೂ, ಯುದ್ಧದಿಂದ ಹಿಂದೆ ಸರಿಯುವಂತೆಯೂ ಪ್ರೇರೇಪಿಸಿದ. ರಾಣಿ ದೇವಿಯ ಮಕ್ಕಳಾದ ರಾಜಕುಮಾರ ಮಹೀಂದ್ರ ಮತ್ತು ಕುಮಾರಿ ಸಂಘಮಿತ್ರರು, ರಕ್ತಪಾತ ಮತ್ತು ಅಹಿಂಸೆಯನ್ನು ದ್ವೇಷಿಸುತ್ತಿದ್ದರೂ,ರಾಜವಂಶೀಯರಾದ ಕಾರಣ ,ಅವು ತಮ್ಮ ಜೀವನದ ಅನಿವಾರ್ಯ ಅಂಗ ಎಂದು ಅರಿತಿದ್ದರು. ಹಾಗಾಗಿ ತಾವು ಬುದ್ಧ ಭಿಕ್ಷುಗಳಾಗುತ್ತೇವೆ ಎಂಬ ಅವರ ಕೋರಿಕೆಯನ್ನು ಅಶೋಕ ಇಷ್ಟವಿಲ್ಲದಿದ್ದರೂ ಒಪ್ಪಿದನು. ಈ ಅಣ್ಣ ತಂಗಿಯರು ಸಿಲೋನಿನಲ್ಲಿ (ಈಗಿನ ಶ್ರೀಲಂಕಾ)ದಲ್ಲಿ ಬೌದ್ಧಧರ್ಮವನ್ನು ಸ್ಥಾಪಿಸಿದರು.
ಆಗಿನಿಂದ, 'ಮಹಾಕ್ರೂರಿ' (ಚಂಡಾಶೋಕ) ಎಂದು ಕುಖ್ಯಾತಿ ಗಳಿಸಿದ್ದ ಅಶೋಕ 'ಧರ್ಮಿಷ್ಠ' (ಧರ್ಮಾಶೋಕ) ಎಂಬ ಹೆಸರು ಗಳಿಸಲಾರಂಭಿಸಿದ. ಅವನು ಬೌದ್ಧಧರ್ಮದ ವಿಭಜ್ಜವಾದವನ್ನು ಪ್ರಚುರಪಡಿಸಿದನು. ಅದನ್ನು ತನ್ನ ದೇಶದಲ್ಲೂ ವಿದೇಶಗಳಲ್ಲೂ ಕ್ರಿ.ಪೂ. ೨೫೦ರ ಸುಮಾರಿಗೆ ಪ್ರಚಾರ ಮಾಡಿದನು. ಬೌದ್ಧ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಗಂಭೀರ ಪ್ರಯತ್ನವನ್ನು ಮಾಡಿದ ಕೀರ್ತಿಯು ಚಕ್ರವರ್ತಿ ಅಶೋಕನಿಗೆ ನಿಸ್ಸಂಶಯವಾಗಿ ಸಲ್ಲಬೇಕು .
ಅಶೋಕ ಚಕ್ರವರ್ತಿಯು ಬೌದ್ಧಧರ್ಮದ ಅನುಯಾಯಿಗಳಿಗಾಗಿ ಸಾವಿರಾರು ಸ್ತೂಪಗಳನ್ನೂ, ವಿಹಾರಗಳನ್ನೂ ಕಟ್ಟಿಸಿದನು. ಜಗತ್ಪ್ರಸಿದ್ಧ ಬಿಹಾರದ ಸಾಂಚಿಯ ಸ್ತೂಪದ ಮೊದಲನೆಯ ಸ್ತೂಪವನ್ನು ಕಟ್ಟಿಸಿದವನೂ ಅವನೇ. ತನ್ನ ರಾಜ್ಯಭಾರದ ಉಳಿದ ಅವಧಿಯಲ್ಲಿ ಅಹಿಂಸೆಯನ್ನು ಅಧಿಕೃತ ಧೋರಣೆಯನ್ನಾಗಿ ಮಾಡಿದನು. ಅನಾವಶ್ಯಕ ಪ್ರಾಣಿವಧೆ ಮತ್ತು ಹಿಂಸೆಯನ್ನು ತಕ್ಷಣದಿಂದಲೇ ರದ್ದು ಮಾಡಿದನು.. ಮೃಗಯಾ ವಿನೋದವನ್ನು ಮತ್ತು ಪ್ರಾಣಿಗಳಿಗೆ ಬರೆ ಹಾಕುವದನ್ನು ನಿಷೇಧಿಸಿ ವನ್ಯಜೀವಿಗಳನ್ನು ರಕ್ಷಿಸಿದನು. ಆಹಾರದ ಮಟ್ಟಿಗೆ ಸೀಮಿತವಾದ ಬೇಟೆಯಾಡುವುದನ್ನು ಅವನು ಒಪ್ಪಿದರೂ , ಶಾಖಾಹಾರದ ಪರಿಕಲ್ಪನೆಯನ್ನೂ ಪ್ರೋತ್ಸಾಹಿಸಿದನು ಪ್ರಯಾಣಿಕರಿಗೆ, ತೀರ್ಥಯಾತ್ರಿಗಳಿಗೆಂದು, ರಾಜ್ಯಾದ್ಯಂತ ವಿಶಾಲವಾದ ಉಚಿತ ತಂಗುದಾಣಗಳನ್ನು ಕಟ್ಟಿಸಿದನು. ಸೆರೆಯಾಳುಗಳ ಮೇಲೂ ದಯೆ ತೋರಿ, ವರ್ಷದಲ್ಲಿ ಒಂದು ದಿನ ಅವರಿಗೆ ಹೊರಹೋಗುವ ಅವಕಾಶ ಕೊಟ್ಟನು. ಅವನು ಸಾಮಾನ್ಯ ಜನರ ಆಶೋತ್ತರಗಳನ್ನು ಹೆಚ್ಚಿಸಲು ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯಗಳನ್ನೂ ವ್ಯಾಪಾರ ಮತ್ತು ಕೃಷಿ ಉದ್ದೇಶಗಳಿಗಾಗಿ ಜಲಸಂಚಾರ ಮತ್ತು ನೀರಾವರಿ ವ್ಯವಸ್ಥೆಗಳನ್ನೂ ಏರ್ಪಡಿಸಿದನು. ಅವನು ತನ್ನ ಪ್ರಜೆಗಳನ್ನು ಅವರ ರಾಜಕೀಯ, ಧರ್ಮ ,ಜಾತಿಗಳೇನೇ ಇದ್ದರೂ ಸಮಾನವಾಗಿ ಪರಿಗಣಿಸಿದನು. ಸುಲಭವಾಗಿ ವಶಪಡಿಸಿಕೊಳ್ಳಬಹುದಾಗಿದ್ದ ತನ್ನ ಸುತ್ತಲಿನ ದುರ್ಬಲ ರಾಜ್ಯಗಳನ್ನು ಗೌರವಾನ್ವಿತ ಮಿತ್ರದೇಶಗಳನ್ನಾಗಿ ಮಾಡಿಕೊಂಡನು. ಈ ಎಲ್ಲದರಲ್ಲೂ ಅಶೋಕನು ಆಧುನಿಕ ಕಾಲದ ವಿಶ್ವನಾಯಕರನ್ನು ಮೀರಿಸಿದನು.
ಮನುಷ್ಯರಿಗೂ ಪ್ರಾಣಿಗಳಿಗೂ ಆಸ್ಪತ್ರೆಗಳನ್ನು ಕಟ್ಟಿಸಿ, ಭಾರತದಾದ್ಯಂತ ಮುಖ್ಯರಸ್ತೆಗಳನ್ನು ದುರಸ್ತಿಮಾಡಿಸಿ, ಅಶೋಕ ಮನ್ನಣೆಯನ್ನು ಗಳಿಸಿದ್ದಾನೆ. ಧರ್ಮಾಶೋಕನು ಧರ್ಮ (ಪಾಲಿ ಭಾಷೆಯಲ್ಲಿ ಧಮ್ಮ) ವನ್ನು ಈ ಮುಖ್ಯ ಮೌಲ್ಯಗಳ ಮುಖಾಂತರ ವ್ಯಾಖ್ಯಾನಿಸಿದ : ಅಹಿಂಸೆ , ಪರಮತ ಸಹಿಷ್ಣುತೆ, ಮಾತಾಪಿತರಿಗೆ ವಿಧೇಯತೆ, ಬ್ರಾಹ್ಮಣರು ಮತ್ತಿತರ ಧಾರ್ಮಿಕ ಗುರುಗಳು; ಆಚಾರ್ಯರುಗಳಲ್ಲಿ ಗೌರವ, ಮಿತ್ರರಿಗೆ ಔದಾರ್ಯ, ಸೇವಕವರ್ಗದವರೊಂದಿಗೆ ಮಾನವೀಯ ನಡವಳಿಕೆ, ಮತ್ತು ಎಲ್ಲರೊಂದಿಗೂ ಉದಾರಪ್ರವೃತ್ತಿ. ಈ ಮೌಲ್ಯಗಳು ಯಾವುದೇ ಧಾರ್ಮಿಕ ಪಂಥಗಳಿಗೂ ಆಕ್ಷೇಪಾರ್ಹವಾಗಿರಲಿಲ್ಲ.
ಕೆಲವು ಟೀಕಾಕಾರರು ಅಶೋಕನಿಗೆ ಇನ್ನೂ ಯುದ್ಧಗಳಾದೀತು ಎಂಬ ಹೆದರಿಕೆಯಿತ್ತು ಎಂದು ಆಭಿಪ್ರಾಯ ಪಟ್ಟರೂ, ಅವನ ಅಕ್ಕಪಕ್ಕದ ರಾಜ್ಯಗಳು ಯಾವುದೂ, ಸೆಲ್ಯೂಸಿಡ್ ಸಾಮ್ರಾಜ್ಯ ಮತ್ತು ಡಿಯೋಡೋಟಸ್ ಸ್ಥಾಪಿಸಿದ ಗ್ರೀಕೋ-ಬ್ಯಾಕ್ಟ್ರಿಡ್ಗಳನ್ನೂ ಹಿಡಿದು,ಅಶೋಕನ ಸಾಮರ್ಥ್ಯಕ್ಕೆ ಸರಿಸಾಟಿಯಾಗಿರಲಿಲ್ಲ.ಸೆಲ್ಯೂಸಿಡ್ ಸಾಮ್ರಾಜ್ಯದ ಮೊದಲನೆಯ ಆಂಟಿಯೋಕಸ್ ಸೋಟರ್, ಮತ್ತು ಅವನ ಉತ್ತರಾಧಿಕಾರಿ ಎರಡನೆಯ ಆಂಟಿಯೋಕಸ್ ಥಿಯೋಸ್ ,ಹಾಗೂ ಗ್ರೀಕೋ-ಬ್ಯಾಕ್ಟ್ರಿಡ್ ಸಾಮ್ರಾಜ್ಯದ ಒಂದನೆಯ ಡಿಯೋಡೋಟಸ್ ,ಮತ್ತು ಅವನ ಮಗ ಎರಡನೆಯ ಡಿಯೋಡೋಟಸ್, ಇವರೆಲ್ಲರಿಗೂ ಅಶೋಕ ಸಮಕಾಲೀನನಾಗಿದ್ದನು. ಅವನ ಶಾಸನಗಳನ್ನು, ಮತ್ತಿತರ ದಾಖಲೆಗಳನ್ನು ಆಳವಾಗಿ ಪರಿಶೀಲಿಸಿದರೆ, ಅವನಿಗೆ ಹೆಲೆನೀಯ ಜಗತ್ತು ತಿಳಿದಿತ್ತಷ್ಟೇ ಅಲ್ಲ, ಅವನಿಗೆ ಅದರ ಬಗ್ಯೆ ಯಾವುದೇ ಭಯಭೀತಿಯಿರಲಿಲ್ಲ ಎಂದೂ ತಿಳಿಯುತ್ತದೆ. ಸೌಹಾರ್ದ ಸಂಬಂಧಗಳನ್ನು ಪ್ರಸ್ತಾಪಿಸುವ ಅವನ ಶಾಸನಗಳಲ್ಲಿ , ಸೆಲ್ಯೂಸಿಡ್ ಸಾಮ್ರಾಜ್ಯದ ಆಂಟಿಯೋಕಸ್ ಮತ್ತು ಈಜಿಪ್ಟಿನ ಮೂರನೆಯ ಟಾಲೆಮಿಯ ಉಲ್ಲೇಖವಿದೆ. ಆದರೆ ಅಶೋಕನ ಪಿತಾಮಹ, ಚಂದ್ರಗುಪ್ತ ಮೌರ್ಯನು ಸೆಲ್ಯೂಸಿಡ್ ಸಾಮ್ರಾಜ್ಯದ ಸ್ಥಾಪಕ ಸೆಲ್ಯೂಕಸ್ ನಿಕೇಟರನನ್ನು ಯುದ್ಧದಲ್ಲಿ ಸೋಲಿಸಿದಾಗಿನ ಕಾಲದಿಂದಲೇ , ಮೌರ್ಯ ಸಾಮ್ರಾಜ್ಯದ ಕೀರ್ತಿ ಎಲ್ಲೆಡೆ ಹಬ್ಬಿತ್ತು ಎಂಬುದನ್ನು ಗಮನದಲ್ಲಿಡಬೇಕು.
ಸಾರನಾಥದಲ್ಲಿರುವ ಅಶೋಕ ಸ್ಥಂಭ ಅವನ ಅವಶೇಷಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು. sandstoneನಲ್ಲಿ ಕೆತ್ತಲಾಗಿರುವ ಈ ಸ್ಥಂಭವು ಕ್ರಿ.ಪೂ.ಮೂರನೆಯ ಶತಮಾನದಲ್ಲಿ ಸಾಮ್ರಾಟನ ಸಾರನಾಥದ ಭೇಟಿಯನ್ನು ದಾಖಲಿಸುತ್ತದೆ. ಈ ಸ್ಥಂಭದ ಮೇಲಿರುವ ನಾಲ್ಕು ಸಿಂಹಗಳು ಪರಸ್ಪರ ಬೆನ್ನು ಹಾಕಿ ನಿಂತಿರುವ ಪ್ರತಿಮೆಯನ್ನು ಆಧುನಿಕ ಭಾರತದ ರಾಜ ಚಿಹ್ನೆಯಾಗಿ ಸ್ವೀಕರಿಸಲಾಗಿದೆ. ಸಿಂಹವು ಅಶೋಕನ ಚಕ್ರಾಧಿಪತ್ಯ ಹಾಗೂ ಬೌದ್ಧ ಧರ್ಮದೊಡನೆ ಅವನ ಸಂಬಂಧಗಳನ್ನು ಸಂಕೇತಿಸುತ್ತದೆ. ಇಲ್ಲಿಯವರೆಗೆ ಮೌರ್ಯ ಸಾಮ್ರಾಜ್ಯದ ಬಗ್ಯೆ ಇತಿಹಾಸಕಾರರಿಗೆ ತಿಳಿದಿರುವ ತಥ್ಯಗಳು , ಬಹುತೇಕ , ಈ ಹಳೆಯ ಅವಶೇಷಗಳ ಅಭ್ಯಾಸದಿಂದ ದೊರಕಿದೆ. ಕೆಲವು ಘಟನೆಗಳು ನಿಜವಾಗಿ ನಡೆಯಿತೋ ಎಂದು ನಿಷ್ಕರ್ಷಿಸುವುದು ಕಷ್ಟವಾಗಿದ್ದರೂ, ಅವನ ಶಿಲಾ ಶಾಸನಗಳು, ಅಶೋಕ ತನ್ನ ಬಗ್ಯೆ ಮುಂದಿನ ಪೀಳಿಗೆಯವರಿಗೆ ಏನು ಅಭಿಪ್ರಾಯವಿರಬೇಕು , ತನ್ನನ್ನು ಯಾಕಾಗಿ ನೆನಪಿಟ್ಟುಕೊಳ್ಳಬೇಕು ಎಂಬುದನ್ನು ಸ್ಪಷ್ಡವಾಗಿ ಚಿತ್ರಿಸುತ್ತವೆ.
ಅಶೋಕನ ಶಾಸನಗಳಲ್ಲಿ ಅವನವೇ ಮಾತುಗಳು ಹೀಗಿವೆ. "ಎಲ್ಲ ಜನರೂ ನನ್ನ ಮಕ್ಕಳು. ನಾನು ಅವರಿಗೆ ತಂದೆಯ ಹಾಗೆ. ಪ್ರತಿ ತಂದೆಯೂ ತನ್ನ ಮಕ್ಕಳ ಅಭಿವೃದ್ಧಿಯನ್ನೂ ಸಂತೋಷವನ್ನೂ ಬಯಸುವ ಹಾಗೆ ನಾನು ಎಲ್ಲ ಜನರೂ ಸದಾ ಸುಖಿಯಾಗಿರಬೇಕೆಂದು ಬಯಸುತ್ತೇನೆ. " ಎಡ್‍ವರ್ಡ್ ಡಿಕ್ರೂಜನು ಅಶೋಕನ ಧರ್ಮವನ್ನು " ಒಂದು ಹೊಸ ಸಾಮ್ರಾಜ್ಯದ ಏಕತೆಯ ಸಂಕೇತವಾಗಿಯೂ ಸಾಮ್ರಾಜ್ಯದ ವೈವಿಧ್ಯಮಯ ಬೇರೆ ಬೇರೆ ಘಟಕಗಳನ್ನು ಒಂದುಗೂಡಿಸುವ ಶಕ್ತಿಯಾಗಿಯೂ " ಅರ್ಥೈಸುತ್ತಾನೆ.
[ಬದಲಾಯಿಸಿ] ವಿವಾದ
ಅಶೋಕನ ನಡತೆಯಲ್ಲಿ ಉಂಟಾಯಿತೆಂಬು ನಂಬಲಾದ "ಹಠಾತ್ ಬದಲಾವಣೆ" ವಿವಾದಾತ್ಮಕವಾಗಿದೆ. ಬೌದ್ಧ ಧರ್ಮಕ್ಕೆ ಮತಾಂತರದ ನಂತರ ಅಶೋಕನ ಚಾರಿತ್ರ್ಯ ಕೆಟ್ಟತನದಿಂದ ಒಳ್ಳೆಯತನಕ್ಕೆ ತಿರುಗಿತು ಎಂದು ಪ್ರತಿಪಾದಿಸಬೇಕೆಂದು ಆ ಕಾಲದ ಬೌದ್ಧರು ಬಯಸಿದ್ದರು ,ಆದ್ದರಿಂದಲೇ ಅವನ ಮನಃಪರಿವರ್ತನೆಯನ್ನು ಅವರು ಅತಿಶಯವಾಗಿ ಬಣ್ಣಿಸಿದ್ದಾರೆ ಎಂದೂ ಕೆಲವೇಳೆ ನಂಬಲಾಗಿದೆ[ಸಾಕ್ಷ್ಯಾಧಾರ ಬೇಕಾಗಿದೆ]. ಅಶೋಕನ ಈ ಬದಲಾವಣೆ ಬರಿಯ ತನ್ನ ಪಟ್ಟವನ್ನು ಭದ್ರಪಡಿಸಿಕೊಳ್ಳುವ ನೀತಿಯಷ್ಟೇ ಆಗಿತ್ತು. ರಕ್ತಪಾತದ ಯುದ್ಧಗಳಿಂದ , ವಶಮಾಡಿಕೊಂಡಿದ್ದ ಪ್ರದೇಶಗಳಿಗೆ ,ಸ್ವಾತಂತ್ರ್ಯ ಕೊಡುವ ನಿಟ್ಟಿನಲ್ಲಿ ಯಾವ ಹೆಜ್ಜೆಯನ್ನೂ ಇಡದ ಅವನು, ಈ ರೀತಿಯಿಂದ ಅವರನ್ನು ಸಂತುಷ್ಟವಾಗಿ ಇರಬಯಸಿದ್ದನು ಎಂಬ ವಾದವೂ ಇದೆ[ಸಾಕ್ಷ್ಯಾಧಾರ ಬೇಕಾಗಿದೆ].
[ಬದಲಾಯಿಸಿ] ಐತಿಹಾಸಿಕ ಆಕರಗಳು
ಮುಖ್ಯ ಲೇಖನ : ಅಶೋಕನ ಶಾಸನಗಳು
ಅಶೋಕನ ಜೀವನ ಮತ್ತು ರಾಜ್ಯಭಾರದ ಬಗ್ಯೆ ಕೆಲವು ಬೌದ್ಧ ಆಕರಗಳು ಬೆಳಕು ಚೆಲ್ಲುತ್ತವೆ. ಮುಖ್ಯವಾಗಿ, ಅಶೋಕನ ಬಗ್ಯೆ ಸದ್ಯ ಗೊತ್ತಿರುವ ಬಹುತೇಕ ವಿಷಯಗಳು ಸಂಸ್ಕೃತದಲ್ಲಿಯ ಅಶೋಕ ಅವದಾನ (ಅಶೋಕನ ಕಥೆ) ಮತ್ತು ಶ್ರೀಲಂಕಾದಲ್ಲಿಯ ಪಾಲಿ ಭಾಷೆಯ ದೀಪವಂಶ ಮತ್ತು ಮಹಾವಂಶ ಎಂಬ ಗ್ರಂಥಗಳಲ್ಲಿ ದೊರಕಿವೆ. ಅಶೋಕನ ಶಾಸನಗಳು ಕೂಡಾ ಅವನ ವಿಷಯವಾಗಿ ಮಾಹಿತಿ ನೀಡುತ್ತವೆ. (ಬೌದ್ಧಗ್ರಂಥಗಳಲ್ಲಿ ಉಲ್ಲೇಖಿಸಿರುವ ಅಶೋಕ, ಮತ್ತು ಈ ಶಾಸನಗಳ ಕರ್ತೃ, ಒಬ್ಬನೇ ಎಂದು ಸಿದ್ಧವಾದದ್ದು, ಶಾಸನಗಳಲ್ಲಿ ಹೆಸರಿಸಿರುವ “ಪ್ರಿಯದರ್ಶಿ” ಎಂಬ ಹೆಸರು ಅಶೋಕನ ಬಿರುದುಗಳಲ್ಲೊಂದಾಗಿತ್ತು ಎಂಬ ವಿಚಾರ ಶೋಧನೆಯಲ್ಲಿ ದೊರಕಿದ ಮೌರ್ಯವಂಶಾವಳಿಗಳಿಂದ ತಿಳಿದುಬಂದಾಗ).
ದೊರಕಿರುವ ಮಾಹಿತಿಗಳಿಂದ ಅಶೋಕನ ಜೀವನವನ್ನು ಮತ್ತು ಅವನ ಶಾಸನಗಳನ್ನು ಅರ್ಥೈಸುವುದರಲ್ಲಿ ಮಾಹಿತಿಗಳ ಬೌದ್ಧ ಮೂಲಗಳ ದಟ್ಟ ಪ್ರಭಾವ ಕಾಣಬರುತ್ತದೆ. ಮೊದಮೊದಲ ಇತಿಹಾಸಜ್ಞರು ,ಸಾಂಪ್ರದಾಯಿಕ ಮೂಲಗಳ ಆಧಾರದ ಮೇಲೆ, ಅಶೋಕನನ್ನು ಮೂಲತಃ ಮತಾಂತರಗೊಂಡ ಬೌದ್ಧ ರಾಜನೆಂದೂ, ನಂತರ ಬೌದ್ಧ ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟವನೆಂದೂ ಪರಿಗಣಿಸುತ್ತಾರೆ.
ಆದರೆ ನಂತರದ ತಜ್ಞರು ಈ ವಾದವನ್ನು ಪ್ರಶ್ಣಿಸುತ್ತಾರೆ. ಬೌದ್ಧ ಮೂಲಗಳಿಗೆ ನೇರವಾಗಿ ಸಂಬಂಧಿಸದ ಏಕಮೇವ ಮಾಕಿತಿ ಆಕರಗಳಾದ ಅಶೋಕನ ಶಾಸನಗಳು, ಧಮ್ಮದ (ಸಂಸ್ಕೃತ :ಧರ್ಮ) ಬಗ್ಯೆ ಅನೇಕ ಬಾರಿ ಉಲ್ಲೇಖಿಸಿದ್ದರೂ, ನೇರವಾಗಿ ಬೌದ್ಧ ಧರ್ಮವನ್ನು ಹೆಸರಿಸಿರುವುದು, ಕೆಲವೇ ಕೆಲವು ಕಡೆಗಳಲ್ಲಿ. ಇದರರ್ಥ, ಅಶೋಕನು, ಜೈನ,ಬ್ರಾಹ್ಮಣ, ಬೌದ್ಧ ಮತ್ತು ಅಜೀವಿಕ ಇತ್ಯಾದಿ ಆ ಕಾಲದ ಪ್ರಚಲಿತ ಧಾರ್ಮಿಕ ಪಂಥಗಳಿಗೆ ಅತೀತವಾಗಿ, ಈ ಎಲ್ಲವುಗಳ ಆಂಶಗಳು ಒಳಗೊಂಡಿದ್ದ, ಧನಾತ್ಮಕ ನೈತಿಕ ಶಕ್ತಿಯ ರೂಪದಲ್ಲಿ, ಹೊಸ ಧರ್ಮವೊಂದನ್ನು ಸ್ಥಾಪಿಸಬಯಸಿದ್ದ ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ.
ಅಂದಿನ ಸಂಕೀರ್ಣ ಧಾರ್ಮಿಕ ವಾತಾವರಣದಿಂದಾಗಿ, ಧಾರ್ಮಿಕ ಭಾವನೆಗಳನ್ನು ಕೆಣಕದಂತೆ, ಮುತ್ಸದ್ದಿತನದಿಂದ ರಾಜ್ಯಭಾರ ಮಾಡುವುದು, ಬಹುಶಃ, ಅಗತ್ಯವಾಗಿತ್ತು. ಆಧುನಿಕ ತಜ್ಞರೇ ಆಗಲೀ, ಅಥವಾ ಬೌದ್ಧ ಪರಿಕಲ್ಪನೆಯಲ್ಲಿ ಅಶೋಕನನ್ನು ಪರಿಗಣಿಸುವ ಸಾಂಪ್ರದಾಯಿಕ ತಜ್ಞರೇ ಆಗಲೀ, ಅಶೋಕನ ಆಳ್ವಿಕೆಯಲ್ಲಿ ಪರಮತ ಸಹಿಷ್ಣುತೆ ಎದ್ದು ಕಾಣುತ್ತಿತ್ತು ಎಂದು ಒಪ್ಪುತ್ತಾರೆ.
[ಬದಲಾಯಿಸಿ] ಅಶೋಕನ ಕೊನೆ ಮತ್ತು ಅವನ ಕೊಡುಗೆಗಳು
ಅಶೋಕ ಸುಮಾರು ನಲವತ್ತು ವರ್ಷ ರಾಜ್ಯವಾಳಿದ. ಅವನ ನಂತರ ಮೌರ್ಯ ಸಾಮ್ರಾಜ್ಯ ಕೇವಲ ಐವತ್ತು ವರ್ಷದಲ್ಲಿ ಕೊನೆಗೊಂಡಿತು. ಅಶೋಕನಿಗೆ ಅನೇಕ ಹೆಂಡಿರು,ಮಕ್ಕಳು ಇದ್ದರೂ, ಅವರ ಹೆಸರುಗಳು ಕಾಲಕ್ರಮೇಣ ಮರೆಯಾಗಿವೆ. ಮಹೇಂದ್ರ ಮತ್ತು ಸಂಘಮಿತ್ರ ಎಂಬ ಅವಳಿಗಳು ಅವನ ನಾಲ್ಕನೆಯ ರಾಣಿ ಉಜ್ಜಯಿನಿಯ ದೇವಿಯ ಮಕ್ಕಳು. ಬೌದ್ಧ ಧರ್ಮವನ್ನು ಆವರೆಗೆ ಗೊತ್ತಿದ್ದ , ಮತ್ತು ಗೊತ್ತಿರದಿದ್ದ, ನಾಡುಗಳಲ್ಲಿ ಪ್ರಚಾರ ಮಾಡುವ ಜವಾಬ್ದಾರಿಯನ್ನು ಅಶೋಕನು ಅವರ ಮೇಲೆ ಹೊರಿಸಿದ್ದನು. ಅವರಿಬ್ಬರೂ ಶ್ರೀಲಂಕಾಕ್ಕೆ ತೆರಳಿ, ಅಲ್ಲಿಯ ರಾಜ,ರಾಣಿ ಮತ್ತು ಪ್ರಜೆಗಳನ್ನು ಬೌದ್ಧರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾದರು. ಅಶೋಕನ ನಂತರದ ರಾಜ್ಯಭಾರವನ್ನು ಅವರು ನೋಡಿಕೊಳ್ಳುವುದು ಅಸ್ವಾಭಾವಿಕವಾಗಿತ್ತು.
ಅವನ ವೃದ್ದಾಪ್ಯದಲ್ಲಿ , ಕಿರಿಯ ಹೆಂಡತಿ ತಿಶ್ಯರಕ್ಷಾಎಂಬುವಳ , ಆಶ್ರಯಕ್ಕೆ ಬಂದ. ಆಕೆ ಯಾವುದೋ ಕೂಟನೀತಿಯಿಂದ ಕುರುಡಾಗಿ, ತಕ್ಷಶಿಲೆಯ ರಾಜ್ಯಪಾಲನಾಗಿದ್ದ ತನ್ನಮಗ ಕುಣಾಲನನ್ನು ಕೊಲ್ಲಲು ಸಂಚುಮಾಡಿದಳು. ಅವನನ್ನು ಮುಗಿಸಿಬಿಡಲು ನೇಮಕವಾಗಿದ್ದ ಭೃತ್ಯರು, ಅವನನ್ನು ಜೀವಸಹಿತ ಬಿಟ್ಟುಬಿಟ್ಟರು. ಪಾರಾದ ಕುಣಾಲನು, ತನ್ನ ಪ್ರಿಯ ಪತ್ನಿ ಕಾಂಚನಮಾಲಾಳೊಂದಿಗೆ, ಹಾಡುತ್ತಾ ಸಂಚರಿಸುತ್ತಿದ್ದನು. ಪಾಟಲೀಪುತ್ರದಲ್ಲಿ ಅವನ ಹಾಡನ್ನು ಕೇಳಿದ ಆಶೋಕ, ಕುಣಾಲನ ಈ ಅವಸ್ಥೆ ತನ್ನದೇ ಹಿಂದಿನ ಪಾಪಕರ್ಮಗಳ ಫಲ ಎಂದುಕೊಂಡು, ಅವನನ್ನು ತಿರುಗಿ ರಾಜಾಸ್ಥಾನದಲ್ಲಿ ಸ್ಥಾಪಿಸಿದ್ದಲ್ಲದೆ, ಅವನ ತಾಯಿ ತಿಶ್ಯರಕ್ಷಾಳಿಗೆ ಮರಣದಂಡನೆಯನ್ನು ವಿಧಿಸಿದನು. ಕುಣಾಲನ ನಂತರ , ಅವನ ಮಗ ಸಂಪ್ರತಿ ಪಟ್ಟಕ್ಕೆ ಬಂದರೂ, ಅಶೋಕನ ಮರಣದ ನಂತರ ಸಂಪ್ರತಿಯ ರಾಜ್ಯ ಹೆಚ್ಚು ಕಾಲ ಬಾಳಲಿಲ್ಲ.
ಆಶೋಕನು ತನ್ನ ರಾಜ್ಯದ ದಾಖಲೆಗಳನ್ನು ಬಿಟ್ಟು ಹೋಗದೆಯೇ ಇದ್ದಿದ್ದರೆ, ಅವನ ರಾಜ್ಯವು ಕಾಲ ಕ್ರಮೇಣ ಇತಿಹಾಸದಲ್ಲಿ ಮರೆಯಾಗುತ್ತಿತ್ತೋ ಏನೋ. ಈ ಬುದ್ಧಿಶಾಲಿ ಮಹಾರಾಜ, ತನ್ನ ಬೋಧನೆಗಳನ್ನು ಮತ್ತು ಇತರ ಕಾರ್ಯಗಳ ದಾಖಲೆಗಳನ್ನು, ಅಧ್ಬುತವಾಗಿ ಕಡೆದ ಕಂಬಗಳ ಮೇಲೆ, ಬಂಡೆಗಳ ಮೇಲೆ ಕೊರೆಸಿದ್ದಾನೆ. ಪುರಾತನ ಹರಪ್ಪ ನಾಗರೀಕತೆಯ ನಂತರ, ಮೊಟ್ಟ ಮೊದಲ ಲಿಖಿತ ಭಾಷೆ ಅಶೋಕ ಬಿಟ್ಟುಹೋದ ದಾಖಲೆಗಳಲ್ಲಿ ಕಂಡುಬರುತ್ತದೆ. ಈ ಭಾಷೆ, ಸಂಸ್ಕೃತವಾಗಿರದೆ, ಪ್ರಾಕೃತವಾಗಿತ್ತು.
ಅಶೋಕನ ಮರಣದ ಸುಮಾರು ಐವತ್ತು ವರ್ಷಗಳ ನಂತರ, ಕ್ರಿ.ಪೂ. 185ರಲ್ಲಿ, ಮೌರ್ಯವಂಶದ ಕೊನೆಯ ರಾಜ ಬೃಹದ್ರಥ, ತನ್ನದೇ ಸೇನೆಯಿಂದ ಗೌರವ ಸ್ವೀಕರಿಸುತ್ತಿರುವಾಗ, ಸೇನಾಪತಿ ಪುಷ್ಯಮಿತ್ರ ಶುಂಗನಿಂದ ಕಗ್ಗೊಲೆಗೀಡಾದ. ಈ ಪುಷ್ಯಮಿತ್ರ ನು ತನ್ನದೇ ಆದ ಶುಂಗ ಸಾಮ್ರಾಜ್ಯವನ್ನು (ಕ್ರಿ.ಪೂ 185 – 78) ಕಟ್ಟಿ , ಮೌರ್ಯ ಸಾಮ್ರಾಜ್ಯದ ಒಂದು ಸಣ್ಣ ಭಾಗವನ್ನು ಆಳಿದನು.
ಅಶೋಕನ ಸಾಮ್ರಾಜ್ಯದಷ್ಟು ವಿಶಾಲವಾದ ಭೂಖಂಡವು , ಮತ್ತೆ ಒಂದೇ ರಾಜ್ಯದಡಿ ಬರಲು, ಸುಮಾರು ಎರಡು ಸಾವಿರ ವರ್ಷ, ಅಂದರೆ ಮೊಘಲರ ಅಕ್ಬರ್ ಮತ್ತು ಅವನ ಮರಿ ಮಗ ಔರಂಗಜೇಬರ ರಾಜ್ಯಭಾರದವರೆಗೆ, ಹಿಡಿಯಿತು. ಭಾರತ ಮುಂದೆ ಬ್ರಿಟಿಷರಿಂದ ಸ್ವತಂತ್ರವಾದಾಗ, ಅಶೋಕನ ಲಾಂಛನ , ಅವನ ಅನೇಕ ಕಂಭಗಳಲ್ಲಿ ಕಾಣ ಬರುವ, ಧರ್ಮಚಕ್ರವನ್ನು ಅಧಿಕೃತ ಚಿಹ್ನೆಯಾಗಿ ಆಯ್ಕೆಮಾಡಿತು.
ಪ್ರಪಂಚದ ಇತಿಹಾಸದಲ್ಲಿ ನೂರು ಅತ್ಯಂತ ಪ್ರಭಾವೀ ವ್ಯಕ್ತಿತ್ವಗಳು ಎಂಬ ಮೈಖೇಲ್ ಹಾರ್ಟ್ ತಯಾರು ಮಾಡಿದ ಪಟ್ಟಿಯಲ್ಲಿ ಅಶೋಕ ಐವತ್ತಮೂರನೆಯ ಸ್ಥಾನದಲ್ಲಿದ್ದಾನೆ.
ಅಶೋಕನ ಜೀವನವನ್ನಾಧರಿಸಿದ “ಅಸೋಕ” ಹಿಂದೀ ಚಿತ್ರವು ಇಪ್ಪತ್ತೊಂದನೆಯ ಶತಮಾನದ ಮೊದಲ ವರ್ಷಗಳಲ್ಲಿ ಬಿಡುಗಡೆಯಾಯಿತು.
[ಬದಲಾಯಿಸಿ] ಅಶೋಕ ಮತ್ತು ಬೌದ್ಧ ಧರ್ಮದ ನಂಟು
ಮುಖ್ಯ ಲೇಖನ : ಬೌದ್ಧ ಧರ್ಮದ ಇತಿಹಾಸ
ಅಶೋಕ ರೂಪಿಸಿದ ಬೌದ್ಧಧರ್ಮ ಮತ್ತು ರಾಜ್ಯಾಂಗಗಳ ನಡುವಿನ ಸಂಬಂಧದ ಮಾದರಿ , ಬಹು ಕಾಲ ಉಳಿಯುವಂಥಾದ್ದು. ತೇರಾವಾದ ಪಂಥದ ಆಗ್ನೇಯ ಏಶಿಯಾದ ದೇಶಗಳಲ್ಲಿ ಪ್ರಚಲಿತವಿದ್ದ ( ಉದಾಹರಣೆಗೆ, ಕಾಂಬೋಡಿಯಾದ ಅಂಗಕೋರ ರಾಜ್ಯ) ರಾಜನೆಂದರೆ ದೈವಾಂಶ ಸಂಭೂತ ಎಂಬ ಬ್ರಾಹ್ಮಣಪಂಥ ಪ್ರೇರೇಪಿತ ಪರಿಕಲ್ಪನೆಗಳ ಜಾಗದಲ್ಲಿ ಅಶೋಕನ ಮಾದರಿಯ ರಾಜ್ಯವ್ಯವಸ್ಥೆ ನೆಲೆಯೂರಿತು. ಈ ವ್ಯವಸ್ಥೆಯಲ್ಲಿ ರಾಜನು ತನ್ನ ಅಧಿಕಾರದ ನೈತಿಕ ಬಲವನ್ನು , ತನ್ನ ದೈವೀ ಪರಂಪೆರಯ ಬದಲಾಗಿ, ಬೌದ್ಧ ಸಂಘಗಳ ಆಶೀರ್ವಾದಿಂದ , ಗಳಿಸಬೇಕಾಗಿತ್ತು. ಅಶೋಕನ ಮಾದರಿಯನ್ನು ಅನುಸರಿಸಿದ ಇತರ ರಾಜರುಗಳು, ಬೌದ್ಧ ವಿಹಾರಗಳನ್ನು ಕಟ್ಟಿದರು, ಸ್ತೂಪಗಳನ್ನು ಕಟ್ಟುವುದಕ್ಕೆ ಧನಸಹಾಯ ಮಾಡಿದರು, ಮತ್ತು ಬುದ್ಧ ಭಿಕ್ಷುಗಳನ್ನು ತಮ್ಮ ರಾಜ್ಯದಲ್ಲಿ ಪ್ರೋತ್ಸಾಹಿಸಿದರು. ಅಶೋಕನೇ, ಬುದ್ಧ ಭಿಕ್ಷುಗಳ ವಿವಾದಗಳನ್ನು ಬಗೆಹರಿಸಲು ಅವರೆಲ್ಲರನ್ನು ಒಟ್ಟುಗೂಡಿಸಿ, ಸಭೆ ನಡೆಸುತ್ತಿದ್ದ ಮಾದರಿಯನ್ನು ಅನುಸರಿಸಿದ ಅನೇಕ ರಾಜರುಗಳು, ಸಂಘದ ಅಂತಸ್ತು , ಕಾಯಿದೆ ಮೊದಲಾದ ವಿವಾದಗಳನ್ನು ಬಗೆಹರಿಸಲು ಸಕ್ರಿಯವಾಗಿ ತೊಡಗಿಕೊಂಡಿದ್ದರು. ಈ ಪದ್ಧತಿ ಕ್ರಮೇಣ ರಾಜಮನೆತನಕ್ಕೂ , ಧರ್ಮಗುರು ಪರಂಪರೆಗೂ ನಡುವಿನ ಘನಿಷ್ಠ ನಂಟಾಯಿತು. ರಾಜನನ್ನು ರಾಜ್ಯದ ಒಡೆಯನನ್ನಾಗಿ ಅಷ್ಟೇ ಅಲ್ಲ,ಧಾರ್ಮಿಕ ನಾಯಕನನ್ನಾಗಿಯೂ ಭಾವಿಸುವ ಪ್ರವೃತ್ತಿಯನ್ನು , ಬೌದ್ಧಧರ್ಮವನ್ನು ಅಧಿಕೃತವಾಗಿ ಬೆಂಬಲಿಸುವ, ಥೈಲ್ಯಾಂಡಿನಲ್ಲಿ ಇಂದಿಗೂ ನೋಡಬಹುದು.
[ಬದಲಾಯಿಸಿ] ಇವನ್ನೂ ನೋಡಿ
- ಮಗಧ ಸಾಮ್ರಾಜ್ಯ
- ಮೌರ್ಯ ಸಾಮ್ರಾಜ್ಯ
- ಚಂದ್ರಗುಪ್ತ ಮೌರ್ಯ
- ಬಿಂದುಸಾರ ಮೌರ್ಯ
- ದಶರಥ ಮೌರ್ಯ
- ಚಾಣಕ್ಯ
- ಅರ್ಥಶಾಸ್ತ್ರ
- ಬೌದ್ಧ ಧರ್ಮ
- ಕಳಿಂಗ ಯುದ್ಧ
- ಭಾರತದ ಇತಿಹಾಸ
- ಭಾರತದ ಮಹಾರಾಜರುಗಳು
[ಬದಲಾಯಿಸಿ] ಉಲ್ಲೇಖಗಳು
- Swearer, Donald. Buddhism and Society in Southeast Asia (Chambersburg, Pennsylvania : Anima Books, 1981) ISBN 0890120234
- Thapar, Romila. Aśoka and the decline of the Mauryas (Delhi : Oxford : Oxford University Press, 1997, 1998 printing, c1961) ISBN 019564445X
- Nilakanta Sastri, K. A. Age of the Nandas and Mauryas (Delhi : Motilal Banarsidass, [1967] c1952) ISBN 0896841677
- Bongard-Levin, G. M. Mauryan India (Stosius Inc/Advent Books Division May 1986) ISBN 0865908265
- Govind Gokhale, Balkrishna. Asoka Maurya (Irvington Pub June 1966) ISBN 0829017356
- Chand Chauhan, Gian. Origin and Growth of Feudalism in Early India: From the Mauryas to AD 650 (Munshiram Manoharlal January 2004) ISBN 8121510287
- Keay, John. India: A History (Grove Press; 1 Grove Pr edition May 10, 2001) ISBN 0802137970
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಸಾಮ್ರಾಟ ಅಶೋಕ ಮತ್ತು ಬೌದ್ಧ ಧರ್ಮ. ಐತಿಹಾಸಿಕ ಸಂಶೋಧನೆ
- ಅಶೋಕನ ಸವಿವರವಾದ ಜೀವನಚರಿತ್ರೆ, ಪ್ರಮುಖ ದಿನಾಂಕಗಳೊಡನೆ
- ಅಶೋಕ ಮೌರ್ಯನ ಜೀವನ
ಪೂರ್ವಾಧಿಕಾರಿ: ಬಿಂದುಸಾರ |
ಮೌರ್ಯ ದೊರೆ ಕ್ರಿ.ಪೂ.೨೭೨ - ಕ್ರಿ.ಪೂ.೨೩೨ |
ಉತ್ತರಾಧಿಕಾರಿ: ದಶರಥ |