ಗಣಕಯಂತ್ರ
From Wikipedia
ಗಣಕಯಂತ್ರವು ಎಣಿಕೆಗಳಿಗೆ ಹಾಗೂ ಸಂಖ್ಯೆ/ತರ್ಕಗಳಿಂದ ನಿಯಂತ್ರಿಸಬಹುದಾದ ಕಾರ್ಯಗಳಿಗೆ ಉಪಯೋಗಿಸಬಹುದಾದ ಯಂತ್ರ. ಗಣಕಯಂತ್ರವು ಹಿಂದಿನ ಶತಮಾನದ ಅತ್ಯಂತ ಪ್ರಮುಖ ಶೋಧನೆಯೆಂದು ಹೇಳಬಹುದು. ಮಾಹಿತಿಯನ್ನು ಸಂಗ್ರಹಿಸುವ ಮತ್ತು ಅತೀವೇಗವಾಗಿ ನಿರ್ವಹಿಸುವ ಶಕ್ತಿಯನ್ನು ಹೊಂದಿರುವ ಕಾರಣದಿಂದಾಗಿ ಗಣಕಯಂತ್ರವು ಮಾನವನ ಹಲವಾರು ದಿನನಿತ್ಯ ಕಾರ್ಯಗಳಲ್ಲಿ ಭಾಗಿಯಾಗುತ್ತಿದೆ. ಗಣಕಯಂತ್ರದ ಹಲವಾರು ಘಟಕಗಳು ಸರಳ, ನಿರ್ದಿಷ್ಟ ಹಾಗೂ ಸಂಕ್ಷಿಪ್ತ ಕಾರ್ಯಗಳನ್ನು ನಿರ್ವಹಿಸುತ್ತವೆ. ಗಣಕಯಂತ್ರದ ಭಾಗಗಳು ಸಂಕೀರ್ಣ ಸಂವಾಹನಗಳನ್ನೊಳಗೊಂಡು ಮಾಹಿತಿಯನ್ನು ನಿರ್ವಹಿಸುತ್ತವೆ. ಸೂಕ್ತವಾಗಿ ಆಜ್ಞಾಪಿಸಿ (ಸಾಮನ್ಯವಾಗಿ ಕ್ರಮವಾದಿಯಿಂದ (programming)) ಮತ್ತು ಸಂಗತವಾದ ಮಾಹಿತಿ ದೊರಕಿಸಿದಲ್ಲಿ, ಗಣಕಯಂತ್ರವು ಮಾಹಿತಿಯನ್ನು ಸಂಸ್ಕರಣಿಸಿ ಸೂಕ್ತವಾದ ಉತ್ತರ ನೀಡುತ್ತದೆ. ಇದು ಗಣಕಯಂತ್ರದ ಮೂಲಭೂತ ನಿಯಮವು. ಈ ಚಕ್ರಕ್ಕೆ ಹೂಡುವಳಿ-ಸಂಸ್ಕರಣೆ-ಹುಟ್ಟುವಳಿ (input-processing-output cycle) ಎಂದು ಕರೆಯಲಾಗುತ್ತದೆ.
ಗಣಕಯಂತ್ರದ ಸಿದ್ದಾಂತ, ವಿನ್ಯಾಸ ಮತ್ತು ಉಪಯೋಗಗಳ ಅದ್ಯಯನಕ್ಕೆ ಗಣಕಯಂತ್ರ ವಿಜ್ಞಾನ(Computer Science) ವೆಂದು ಕರೆಯಲಾಗುತ್ತದೆ. ಚಾರ್ಲ್ಸ್ ಬಾಬೇಜ್‍ರವರು ೧೮೨೨ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶಿಸಿದ ಅಂತರ ಯಂತ್ರವು (Difference_Engine) ವಿಕಾಸಗೊಂಡು ಆಧುನಿಕ ಗಣಕಯಂತ್ರಗಳ ಶೋಧನೆಗೆ ದಾರಿದೀಪವಾಯಿತು. ಗಣಕಯಂತ್ರದ ಎಲ್ಲಾ ಕಾರ್ಯಗಳು ಗಣಿತ ಶಾಸ್ತ್ರಕ್ಕೆ ಸಂಬಂಧಿತವಾದುವು ಎಂಬ ಮೂಲಭೂತ ಅಭಿಪ್ರಾಯವನ್ನು ಶೋಧಿಸಿದವರು ಕ್ಲಾಡ್ ಇ ಶನ್ನನ್ (Claude E Shannon). ಗಣಕಯಂತ್ರವು ಪ್ರತಿಯೊಂದು ಗಣಿತ ಸಮಸ್ಯೆಯನ್ನು ಬಿಡಿಸಲು ಸಾಧ್ಯವಿಲ್ಲವೆಂಬ ನೀತಿಯನ್ನು ಶೋಧಿಸುತ್ತ ಅಲೆನ್ ಟ್ಯೂರಿಂಗ್Alan Turing ರವರು ಗಣಕಯಂತ್ರ ವಿಜ್ಞಾನ ಸಿದ್ದಾಂತ ಶಾಸ್ತ್ರವನ್ನು (Theoretical Computer Science) ಕಂಡುಹಿಡಿದರು. ಗಣಕಯಂತ್ರದ ಹೃದಯವಾದ ಸಂಸ್ಕರಣ (processor) ವೇಗವು ಪ್ರತಿ ೧೮-೨೪ ತಿಂಗಳಲ್ಲಿ ದ್ವಿಗುಣವಾಗುತ್ತದೆಂದು ಪ್ರತಿಪಾದಿಸಿದ ಗೊರ್ಡನ್ ಮೂರ್‌ರ ಅಡಕವು ವಿಶ್ವ ವಿಖ್ಯಾತ ತತ್ತ್ವವಾಗಿದೆ (Moore's Law).
[ಬದಲಾಯಿಸಿ] ಗಣಕಯಂತ್ರದ ಘಟಕಗಳು:
- ಹೂಡುವಳಿ ಘಟಕ
- ಕೇಂದ್ರ ಸಂಸ್ಕರಣ ಘಟಕ
- ಸಂಗ್ರಹಣ ಘಟಕ
- ಹುಟ್ಟುವಳಿ ಘಟಕ
ಈ ಘಟಕಗಳ ಸಂವಾಹನವನ್ನು ಚಿತ್ರ:೨ ರಲ್ಲಿ ಸಂಕ್ಷಿಪ್ತವಾಗಿ ತೋರಿಸಲಾಗಿದೆ.