ಹೆಚ್ ನರಸಿಂಹಯ್ಯ
From Wikipedia
ಡಾ. ಹೆಚ್.ನರಸಿಂಹಯ್ಯ (ಜೂನ್ ೦೬, ೧೯೨೦ - ಜನವರಿ ೩೧, ೨೦೦೫) ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು.
[ಬದಲಾಯಿಸಿ] ಜೀವನ
ಡಾ. ಹೆಚ್.ನರಸಿಂಹಯ್ಯನವರು ಜೂನ್ ೦೬, ೧೯೨೦ರಂದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು.
೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ನಂತರ ಹನ್ನೆರೆಡು ವರ್ಷಗಳು ಪ್ರಾಂಶುಪಾಲರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು. ಎಚ್.ಎನ್.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.
ವಿದ್ಯಾರ್ಥಿ ದೆಸೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಕೊನೆವರೆಗೂ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸವಾಗಿದ್ದರು. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದಲ್ಲಿಯೇ ನೆಲೆಸಲು ಅವರ ಸರಳ, ಆದರ್ಶಮಯ ಜೀವನವೇ ಕಾರಣವೆಂದು ಹೇಳಲಾಗುತ್ತದೆ.
೧೯೪೨ ನೆಯ ಇಸವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ಅಮೆರಿಕಾದ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಶ್ರೇಣಿ ಪಡೆದರು. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲಿಟ್ಟಿದ್ದರು. ಈ ಸಂಸ್ಥೆಗಳ ಉನ್ನತಿಗಾಗಿ ಶ್ರಮಿಸಿದ್ದಾರೆ ಎನ್ನಲಾಗುತ್ತದೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.
ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ.ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬ ವಿಜ್ಞಾನ ವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.
ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್ ಅವರ ನಿಕಟವರ್ತಿಗಳ ಅಭಿಪ್ರಾಯ. ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು.
ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು, ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ, ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿದ್ದರು.
[ಬದಲಾಯಿಸಿ] ನಿಧನ
ಡಾ. ಹೆಚ್.ನರಸಿಂಹಯ್ಯನವರು ೨೦೦೫ ಜನವರಿ ೩೧ರಂದು ನಿಧನರಾದರು
[ಬದಲಾಯಿಸಿ] ಸ್ವಾತಂತ್ರ್ಯ ಹೋರಾಟಗಾರರು
ವಿನಾಯಕ ದಾಮೋದರ ಸಾವರ್ಕರ್ | ಜವಾಹರಲಾಲ್ ನೆಹರು | ಮಹಾತ್ಮ ಗಾಂಧಿ | ಸರ್ದಾರ್ ವಲ್ಲಭಭಾಯ್ ಪಟೇಲ್ | ಲೋಕಮಾನ್ಯ ಬಾಲ ಗಂಗಾಧರ ತಿಲಕ | ಸುಭಾಷ್ ಚಂದ್ರ ಬೋಸ್ | ಟಿಪ್ಪು ಸುಲ್ತಾನ್ | ಲಾಲ್ ಬಹಾದ್ದೂರ್ ಶಾಸ್ತ್ರಿ | ಮದನ ಮೋಹನ ಮಾಳವೀಯ | ಸರ್ದಾರ್ ಭಗತ್ ಸಿಂಗ್ | ಸಿ. ರಾಜಗೋಪಾಲಚಾರಿ | ಭಿಕಾಜಿ ಕಾಮಾ (ಮೇಡಂ ಕಾಮಾ) | ಚಂದ್ರ ಶೇಖರ್ ಆಝಾದ್ | ರಾಮ್ ಪ್ರಸಾದ್ ಬಿಸ್ಮಿಲ್ | ಸುಬ್ರಹ್ಮಣ್ಯ ಭಾರತಿ | ಖುದೀರಾಂ ಬೋಸ್ | ತಾತ್ಯ ಟೊಪೆ | ಅಶ್ಫಾಕುಲ್ಲಾ ಖಾನ್ | ಝಾನ್ಸೀ ರಾಣಿ ಲಕ್ಷ್ಮೀ ಬಾಯೀ | ಸರೋಜಿನಿ ನಾಯ್ಡು | ಜಯಪ್ರಕಾಶ ನಾರಾಯಣ | ಸುಖದೇವ | ದೇಶಬಂಧು ಚಿತ್ತರಂಜನ ದಾಸ್ | ಲಾಲಾ ಲಜಪತ ರಾಯ್ | ಮಹದೇವ ಭಾಯಿ ದೇಸಾಯಿ | ಸುಖದೇವ | ಮಂಗಳ ಪಾಂಡೆ | ಮೌಲನಾ ಹಸರತ್ ಮೊಹಾನಿ | ಪಂಡಿತ ಮೋತಿಲಾಲ ನೆಹರೂ | ರವೀಂದ್ರ ನಾಥ ಟ್ಯಾಗೋರ್ | ಸುಂದರ ಲಾಲ್ ಅವಸ್ಥಿ | ದಾದಾ ಭಾಯಿ ನವರೋಜಿ | ಬಿಪಿನ್ ಚಂದ್ರ ಪಾಲ್ | ಈಶ್ವರ ಚಂದ್ರ ವಿದ್ಯಾಸಾಗರ | ವಿನೋಬಾ ಭಾವೆ | ಅಲ್ಲೂರಿ ಸೀತಾರಾಮ ರಾಜು | ಬಿ.ಆರ್.ಅಂಬೇಡ್ಕರ್ | ಸೇನಾಪತಿ ಬಾಪಟ್ | ನಾನಾ ಸಾಹಿಬ್ | ಕಸ್ತೂರ್ ಬಾ ಗಾಂಧಿ | ಗೋಪಾಲ ಕೃಷ್ಣ ಗೋಖಲೆ | ಕೆ.ಬಿ. ಹೆಡಗೆವಾರ್ | ಇಂಡಿಯನ್ ನ್ಯಾಷನಲ್ ಆರ್ಮಿ | ಬಾಬು ಜಗಜೀವನ ರಾಮ್ | ಲಕ್ಷ್ಮಿ ಸೆಹಗಲ್ | ಹೆಚ್. ನರಸಿಂಹಯ್ಯ | ಗೋವಿಂದ ವಲ್ಲಭ ಪಂತ್ | ಪೆರಿಯಾರ್ ರಾಮಸ್ವಾಮಿ | ಹಜರತ್ ಮಹಲ್ | ಹಿಂದೂಸ್ತಾನಿ ಲಾಲ್ ಸೇನಾ | ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ | ನೀಲಕಂಠ ಗೌಡ | ಪ್ರಭುರಾಜ ಪಾಟೀಲ | ಸ್ವಾಮಿ ರಾಮಾನಂದ ತೀರ್ಥ| ಕಿತ್ತೂರು ಚೆನ್ನಮ್ಮ | ಸಂಗೊಳ್ಳಿ ರಾಯಣ್ಣ